ಗುರುಕುಲದಿಂದ ತುಸು ದೂರದಲ್ಲಿದ್ದ ತೂಗು ಸೇತುವೆಯನ್ನು ಮಕ್ಕಳಿಗೆ ತೋರಿಸುವ ಎಂದು ಹೋಗ್ತಾ ಇರುವಾಗ ಗುರುಕುಲದ ಸಿಬ್ಬಂದಿ ಲಕ್ಷ್ಮಮ್ಮ ಸಿಕ್ಕಿದರು. ತಲೆಯ ಮೇಲೆ ಹಾಲಿನ ಕ್ಯಾನ್ ಇತ್ತು. ಇಲ್ಲಾ… ಅಂದರೆ ನನ್ನ ಮೊಮ್ಮಕ್ಕಳನ್ನು ಎತ್ತಿಕೊಂಡು ಬಿಡುತ್ತಿದ್ದರೋ ಏನೋ.. ನಮ್ಮನ್ನು ನೋಡಿ ಅವರಿಗಾದ ಸಂತೋಷಕ್ಕೆ ಪಾರವೇ ಇಲ್ಲ…
“ಒಂದು ಫೋಟೋ ತೆಗೆತೇನೆ “ಎಂದೆ..
“ಅಮ್ಮಾ ಚಂದ ಬರಬೇಕು… ಪುಟ್ಟಿ ಜೊತೇನೆ ತೆಗಿರಿ…”ಎಂದರು.
“ಮತ್ತೆ ಅದೆಲ್ಲೋ ನೀವು ಫೋಟೋ ಹಾಕ್ತೀರಂತಲ್ಲಾ… ಅದರಲ್ಲಿ ಹಾಕ್ಬೇಕು… (ಫೇಸ್‌ಬುಕ್) ಇಲ್ಲಿ ಆಚಾರ್ಯರು ನನಗೆ ತೋರಿಸ್ತಾರೆ..” ಎಂದೂ ಹೇಳಿದರು.
ಗುರುಕುಲದ ಮಕ್ಕಳಿಗೆ ಎಚ್ಚರಿಕೆಯಿಂದ ಹಾಲು ಕರೆಯಲು ಕಲಿಸುವುದು, ಹಸುಗಳ ಬಗ್ಗೆ ತಿಳುವಳಿಕೆ ನೀಡುವುದು. ಅವುಗಳಿಗೆ ಕೊಡಬಹುದಾದ ಆಹಾರ, ಮದ್ದಿನ ಸೊಪ್ಪುಗಳ ಬಗ್ಗೆ, ಮದ್ದು ಮಾಡುವ ರೀತಿ ಹೀಗೆ ತನ್ನಲ್ಲಿರುವ ವಿಷಯಗಳನ್ನು ಧಾರೆ ಎರೆಯುತ್ತಿದ್ದರು. ಪಶುವೈದ್ಯರೂ ಅವರನ್ನು ಗೌರವದಿಂದಲೇ ಕಾಣುತ್ತಿದ್ದರು. ಮಕ್ಕಳಿಗೂ ಅವರೆಂದರೆ ತುಂಬಾ ಪ್ರೀತಿ.
ಗೋಶಾಲೆಯಲ್ಲಿ ಪ್ರತಿಯೊಂದು ಹಸು, ಕರುಗಳ ಬಗ್ಗೆ ಗೊತ್ತಿತ್ತು. ಕರುಗಳಿಗೆ ಹೆಸರು ಇಡುವಾಗಲೂ ಮಕ್ಕಳ ಜೊತೆ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಯಾವುದೇ ಹಸು ಅಥವಾ ಕರುವಿಗೆ ಅನಾರೋಗ್ಯವಾದರೆ ಅಳುವೇ ಬರುತ್ತಿತ್ತು… ಊಟ ಮಾಡಲು ಒತ್ತಾಯ ಮಾಡಬೇಕಿತ್ತು…
ಈಗ ಸಹಾಯಕಿಯಾಗಿ ಅವರ ಸೊಸೆಯೂ ಜೊತೆಗೆ ಬರುತ್ತಾರೆ. ಹಸುಗಳನ್ನು ಮೇಯಲು ಬಿಟ್ಟಾಗಿತ್ತು… ಇಲ್ಲಾಂದ್ರೆ ಪ್ರತಿಯೊಂದು ಹಸುವಿನ ಜೊತೆ ನಿಂತು ಫೋಟೋ ಹೊಡಿರಿ ಅಂತಿದ್ರೋ … ಏನೋ..?
“ಲಕ್ಷ್ಮಮ್ಮ ಪ್ರತಿದಿನ ಸುಧಾಕರಜೀಯವರ ನೆನಪು ಮಾಡ್ತಾ ಇರ್ತಾರೆ… ಇವತ್ತು ಬರ್ತಾರೋ ಏನೋ…ಎಂದು ಕಾಯ್ತಾ ಇದ್ದರು…ಮಾತೃಶ್ರೀ…” ಎಂದು ಮಕ್ಕಳು ಹೇಳಿದರು.
“ನನ್ನನ್ನು ಕಾಯಲಿಲ್ಲಪ್ಪ ಲಕ್ಷ್ಮಮ್ಮ” ಎಂದು ತೋರಿಕೆಯ ಸಿಟ್ಟು ತೋರಿಸಿದರೆ… “ಅಮ್ಮಾ…ಅವರು ಬಂದರೆ ನೀವು ಮತ್ತು ಪುಟ್ಟಿ ಬಂದೇ ಬರ್ತೀರಾ ಅಲ್ವಾ..?” ಎಂದರು.
ನನ್ನ ಮೊಮ್ಮಕ್ಕಳನ್ನು ಅಂಬೆಗಾಲು ಹಾಕುವ ಮಗುವಿನಿಂದ ನೋಡುತ್ತಿದ್ದರು… ಅದೇ ಪ್ರೀತಿ ಈಗಲೂ ತೋರಿಸಿ ಮುದ್ದು ಮಾಡಿದರು.. ಅದೇ ಮುಗ್ಧಪ್ರೀತಿ.. ಯಾವುದೇ ಅಪೇಕ್ಷೆ ಇಲ್ಲದ ಮಮತೆ… ಹಳ್ಳಿಯ ಸೊಗಡು… ನಾವು ಪೇಟೆಯಲ್ಲಿ ಕಾಣಲಿಕ್ಕೆ ಸಾಧ್ಯವೇ…?
ಹಳೆಯ ನೆನಪುಗಳನ್ನೂ ಕೆದಕಿದರು.. ಎಲ್ಲಾ ಮಕ್ಕಳ ನೆನಪು ಮಾಡಿ ಅವರ ನೆನಪು ಇದೆಯಾ … ಎಂದು ಕೇಳಿದಾಗ ನಾನು “ಇಲ್ಲ…” ಅಂದ್ರೆ… ಅವರ ಊರೋ, ಹೆಸರೋ, ತಂಟೆ, ತುಂಟಾಟ ಹೇಳಿ ನೆನಪಿಗೆ ತರಲು ಪ್ರಯತ್ನಿಸಿದರು. ಮರಗಿಡಗಳ ಬಗ್ಗೆ ನೆನಪಿಸಿದರು. ಕೆಲವನ್ನು…. ಅವರು ಅಷ್ಟೊಂದು ಪ್ರಯತ್ನಪಟ್ಟರೂ ನನಗೆ ನೆನಪಿಸಿಕೊಳ್ಳಲಾಗದಿದ್ದಾಗ ನಾಚಿಕೆಯಾಯಿತು.
ಅವರಷ್ಟೇ ಅಲ್ಲ… ಶೇಷಮ್ಮ, ನಾಗರತ್ನಮ್ಮ, ಲತಾ… ಇನ್ನೂ ನಾಲ್ಕಾರು ಮಂದಿ ಎಲ್ಲರೂ ಅವರ ರಾಶಿ ಕೆಲಸಗಳ ನಡುವೆಯೂ ಬಂದು ವಿಚಾರಿಸಿ ಹೋದರು.
ಈ ಬೋಗಿಯ ನಟ್ಟುಬೋಲ್ಟುಗಳಿಗೆ “ಲಕ್ಷ್ಮಮ್ಮ” ಎಣ್ಣೆ, ಗ್ರೀಸು ಹಾಕಲು ಪ್ರಯತ್ನಿಸಿದರೂ… ಯಾಕೋ ಕೆಲವು ಸವಕಲಾಗಿದ್ದವು..
By Veena Shanbhogue
Click Here for English Version
Preservation by Sumanth Shanbhogue for Shanbhogue Publications

Leave a comment