ಬೋಗಿ- 5

For English Click Here

ಮಳೆಗಾಲದ ಒಂದು ಸಂಜೆ ಮೋಡಗಳನ್ನು ನೋಡುತ್ತಾ ಕುಳಿತಾಗ … ಬೋಗಿಯೊಂದು ಧಡಕ್.. ಧಡಕ್ ಎಂದು ಸದ್ದು ಮಾಡುತ್ತಾ ಹೋಯಿತು.

ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದೆ.. ಹೈಯರ್ ಪ್ರೈಮರಿಯಿಂದ ಹೈಸ್ಕೂಲಿಗೆ ಬಂದು ಹದಿನೈದು ಇಪ್ಪತ್ತು ದಿನಗಳೋ.. ಒಂದು ತಿಂಗಳೋ ಆಗಿರಬೇಕಷ್ಟೇ…

ಮೋಡಗಳ ಬಗ್ಗೆ ಕವಿಯ ಕಲ್ಪನೆಗಳಿರುವ ಒಂದು ಪಾಠ ಇತ್ತು.. ಬಿಳಿಯ ಮೋಡಗಳು ಮುದುಕಿಯ ನರೆತ ಕೂದಲಿನಂತೆ…ಹೀಗೆ ಅವರ ಕಲ್ಪನೆಗಳನ್ನು ಬರೆದಿದ್ದರು. ನಮಗೆ ಕನ್ನಡ ಎರಡನೇ ಭಾಗ(non detail)ವನ್ನು ‘ಶ್ರೀ ಎಂ. ರಾಜಗೋಪಾಲ್’ರವರು ತೆಗೆದುಕೊಳ್ಳುತ್ತಿದ್ದರು. ಪಾಠದ ಬಳಿಕ ಅವರು ಎರಡು ಪುಟದ ಪ್ರಬಂಧವನ್ನು ಬರೆದು ತರಲು ಹೇಳಿದರು.

ನನಗಾದರೋ ಮೋಡಗಳನ್ನು ನೋಡುತ್ತಾ ಇದ್ದರೆ ಪ್ರಪಂಚವನ್ನೇ ಮರೆಯುವ ಚಟ. ಅಮ್ಮನ ಹತ್ತಿರ ಬೈಸಿಕೊಳ್ಳುತ್ತಿದ್ದೆ. ಯಾರಾದರೂ ಕೇಳುಗರು ಸಿಕ್ಕಿದರೆ ಮೋಡಗಳನ್ನು ತೋರಿಸಿ ಹಾಗೆ ಕಾಣುತ್ತಿದೆ.. ಹೀಗೆ ಕಾಣ್ತಿದೆ. ಅದರ ಹಾಗೆ ಕಾಣ್ತಿದೆ…ಎಂದೆಲ್ಲಾ ಅವರಿಗೆ ಬೋರ್ ಹೊಡೆಸುತ್ತಿದ್ದೆ… ಬರೆಯಬಹುದೆನ್ನುವ ಕಲ್ಪನೆ ಇರಲಿಲ್ಲ. ಈಗ ಅವಕಾಶ ಸಿಕ್ಕಿದ್ದೇ ತಡ…

ಬರೆದೆ…

ಬರೆದೆ….

ಬರೆದೆ….

ಎಂಟೆಂಟು ಪುಟಗಳಷ್ಟು ಬರೆದೆ. ಹೆಮ್ಮೆಯಿಂದ ಎಲ್ಲರ ಪುಸ್ತಕದೊಂದಿಗೆ ನನ್ನದನ್ನೂ ಇಟ್ಟೆ. ಬೇರೆ ವಿಷಯಗಳ ಬಗ್ಗೆ ಎರಡು ಪುಟ ಮಾತ್ರ ಕಷ್ಟ ಪಟ್ಟು ಬರೆಯುತ್ತಿದ್ದ ನನಗೆ ಹೆಮ್ಮೆಯಾಗುವುದು ಸಹಜ ತಾನೇ..?

ಇಂಗ್ಲಿಷ್ ಪಾಠಕ್ಕೂ ಅವರೇ ಇದ್ದರು. ಅದರಲ್ಲೂ ಏನನ್ನೋ ಬರೆಯಲು ಹೇಳಿದ್ದರು. ನಾನು ಮೋಡಗಳ ನಡುವೆ ಕಳೆದು ಹೋಗಿ ಅದನ್ನು ಬರೆದಿರಲಿಲ್ಲ. ಮರುದಿನ ಮೊದಲ ಅವಧಿ ಇಂಗ್ಲಿಷ್ ಪಾಠ ಇತ್ತು.

ಆಗಲೇ ಕನ್ನಡ ಪ್ರಬಂಧವನ್ನು ತಿದ್ದಿ ತಂದಿದ್ದರು. ನನ್ನ ಪುಸ್ತಕ ಕೊನೆಯಲ್ಲಿ ಇತ್ತು. ಎಲ್ಲರ ಪುಸ್ತಕ ಕೊಟ್ಟು ನನ್ನ ಪುಸ್ತಕವನ್ನು ಕೈಯಲೆತ್ತಿ ನನ್ನ ಬಳಿ ಬಂದರು.

ಈಗ ಎಲ್ಲರ ಎದುರು ನನ್ನನ್ನು ಹೊಗಳುತ್ತಾರೆ ಎಂದುಕೊಂಡರೆ ಹೊಗಳುವ ಬದಲಿಗೆ ನನ್ನ ಎದುರೇ ಕೆಲವು ಭಾಗಗಳನ್ನು ಕೆಂಪು ಶಾಯಿಯ ಪೆನ್ನಿನಿಂದ ಹೊಡೆದು ಹಾಕಿದರು. ಮತ್ತು “ನಾನು ಹೇಳಿದ್ದು ಎರಡು ಪುಟ, ನೀನು ಎಂಟೆಂಟು ಪುಟ ಬರೆದಿದ್ದಿ. ಇದನ್ನು ಎರಡು ಪುಟದಷ್ಟು ಮಾತ್ರ ಬರೆದು ತಾ “ಎಂದರು.

“ಹೆತ್ತವರಿಗೆ ಹೆಗ್ಗಣ ಮುದ್ದು” ಅನ್ನೋ ತರಹ ನನಗೆ ನನ್ನ ಯಾವ ಕಲ್ಪನೆಯನ್ನೂ ಬಿಡಲು ಇಷ್ಟವಿಲ್ಲ. ಎಲ್ಲರ ಎದುರು ಅವಮಾನ ಬೇರೆ ಆಗಿತ್ತು. ಕಣ್ಣಲ್ಲಿ ನೀರು ಬಂದೇ ಬಿಟ್ಟು, ತಲೆತಗ್ಗಿಸಿದ್ದೆ. ಕಣ್ಣಿಲ್ಲಿನ ನೇತ್ರಾವತಿ ಇಳಿದು ಡೆಸ್ಕನ್ನು ಒದ್ದೆ ಮಾಡುತ್ತಿದ್ದಳು. ಅವರಿಗೆ ಪಾಪ ಅನಿಸಿತೋ ಏನೋ..

ಮತ್ತಿಗಿನ ಸ್ವರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮೃದುವಾಗಿ ತಲೆ ಸವರುತ್ತಾ “ನೋಡು ನಿನಗೆ ಎಷ್ಟೇ ಗೊತ್ತಿದ್ದರೂ ಪರೀಕ್ಷೆಗಳಲ್ಲಿ ಎಷ್ಟು ಹೇಳುತ್ತಾರೋ ಅಷ್ಟೇ ಬರೆಯಬೇಕಲ್ವಾ..? ನೀನು ಜಾಸ್ತಿ ಬರೆದೆ ಎಂದು ನಿನಗೆ ಹೆಚ್ಚು ಅಂಕಗಳನ್ನು ಕೊಡುವುದಿಲ್ಲ. ಇದು ಒಂದು ನೆನಪಿನಲ್ಲಿಡಬೇಕಾದ ವಿಷಯ. ಎರಡನೆಯದ್ದು ನೀನು ಗೊತ್ತಿದ್ದ ವಿಷಯವನ್ನು ಗೊತ್ತುಂಟಂತಾ ತುಂಬಾ ಬರೆಯುತ್ತಾ ಕೂತರೆ ಪ್ರಶ್ನೆ ಪತ್ರಿಕೆಯನ್ನು ಪೂರ್ತಿಯಾಗಿ ಉತ್ತರಿಸಲು ನಿನಗೆ ಸಮಯ ಸಾಕಾಗುವುದಿಲ್ಲ..” ಎಂದು ಹೇಳಿದರು.

ಆ ಕ್ಷಣಕ್ಕೆ ನನಗೆ ಸಿಟ್ಟು, ಬೇಸರ, ದುಃಖ ಎಲ್ಲಾ ರೀತಿಯ ಮಿಶ್ರ ಭಾವಗಳು ಉಂಟಾದರೂ ಮತ್ತೆ ಸ್ನಾತಕೋತ್ತರದಲ್ಲೂ ಅವರ ನೆನಪು ಬರುತ್ತಿತ್ತು. ಅವರು ಅಂದು ಹಾಗೆ ಮಾಡದಿದ್ದರೆ ನನಗೆ ಇಷ್ಟವಾದ ವಿಷಯಗಳನ್ನು ಬರೆಯುತ್ತಾ ನನ್ನ ಭವಿಷ್ಯಕ್ಕೆ ನಾನೇ ಕೊಡಲಿ ಏಟು ಹಾಕಿಕೊಳ್ಳುತ್ತಿದ್ದೆನೋ ಏನೋ…


ವೀಣಾ ಶಾನಭೋಗ್

Preservation by Sumanth Shanbhogue

Leave a comment