For English Click Here
ನನ್ನ ಭಾವನ ಮೊಮ್ಮಗನ ಉಪನಯನ ಸಮಾರಂಭ. ಸಂಜೆ ಮೊಮ್ಮಕ್ಕಳನ್ನು ಕರೆದುಕೊಂಡು ಹೋದೆವು.
ಅಜ್ಜಂದಿರೆಲ್ಲರೂ ಈಜು ಕಲಿತ, ಬೇಸಿಗೆಯಲ್ಲಿ ನೀರಿಲ್ಲದ ದಿನಗಳಲ್ಲಿ ಸ್ನಾನ ಮಾಡಲು, ಬಟ್ಟೆ ಒಗೆಯಲು ಉಪಯೋಗಿಸುತ್ತಿದ್ದ, ಅಷ್ಟೇ ಅಲ್ಲ ನಮ್ಮೂರಿನ ಪ್ರಮುಖ ದೇವರಾದ ಶ್ರೀ ವೆಂಕಟರಮಣ, ಶ್ರೀ ಕಲಸೇಶ್ವರ ಹಾಗೂ ಗಿರಿಜಮ್ಮ ಕೂಡ ಸ್ನಾನಕ್ಕೆ, ಅವಭೃಥಕ್ಕೆ, ಜಲಕ್ರೀಡೆಗೆ ಬರುವ ಒಂದು ಸುಂದರವಾದ ನಮ್ಮೂರ ಪುಣ್ಯತೀರ್ಥ — “ರುದ್ರಪಾದ”.
ನನ್ನ ನೆನಪಿನ ಹಳಿಯಲ್ಲೊಂದು ದಢಕ್… ದಢಕ್… ಎಂದು ಓಡಿಸಿತು.
ಪ್ರತೀಸಲ ಬೇಸಿಗೆ ರಜೆ ಬಂತು ಅಂದರೆ ಊರಿಗೆ ಹೊರಡುವ ಧಾವಂತ. ಯಾರದಾದರೂ ಮದುವೆ, ಮುಂಜಿ, ಕೋಲ ಇರುತ್ತಿತ್ತು. ಇರದಿದ್ದರೂ ಹೋಗಲೇನೂ ಅಡ್ಡಿ ಇರಲಿಲ್ಲ.
ಊರಿನ ನಾಲ್ಕು ದಿಕ್ಕಿನಲ್ಲೂ ಹೊಳೆಗಳಿದ್ದರೂ ಮನೆಯಲ್ಲಿ ವಿದ್ಯುತ್ ಅಡಚಣೆ ತಪ್ಪುತ್ತಿರಲಿಲ್ಲ. ನಮಗೇನೂ ಬೇಸರವಾಗುತ್ತಿರಲಿಲ್ಲ. ವಿದ್ಯುತ್ ಇಲ್ಲದೆ ನೀರು ನಿಲ್ಲುತ್ತಿತ್ತು. ನಾವು ನಲವತ್ತೈವತ್ತು ಜನರಿಗೆ ನೀರು ಸ್ವಲ್ಪ ಬೇಕೇ?
ಬೆಳಿಗ್ಗೆ ನಮ್ಮ ಮಕ್ಕಳು, ನಮ್ಮ ಜೊತೆ ರಜೆಗೆ ಬಂದ ಮಕ್ಕಳನ್ನೆಲ್ಲ ಕಟ್ಟಿಕೊಂಡು ಹೊರಡುತ್ತಿದ್ದೆವು. ನನ್ನ ಪತಿದೇವರು ಈ ಹೊಳೆಯ ಇಂಚು ಇಂಚನ್ನೂ ಅರಿತಿದ್ದರು. ಪ್ರತಿಯೊಂದು ಸುಳಿಯನ್ನೂ ಬಲ್ಲವರಾಗಿದ್ದರು. ಹಾಗಾಗಿ ಅವರನ್ನು ನೀರಿನ ದೇವರೇ ಎಂದು ಕರೆಯುತ್ತಿದ್ದೆ. ಅವರಿದ್ದರೆ ಮಕ್ಕಳನ್ನು ಸಲೀಸಾಗಿ ನೀರಲ್ಲಿ ಆಡಲು ಬಿಡುತ್ತಿದ್ದೆವು. ಇಲ್ಲದಿದ್ದರೆ ಸ್ವಲ್ಪ ನಿಯಮಗಳನ್ನು ಹೇಳಿಯೇ ಕರೆದೊಯ್ಯುತ್ತಿದ್ದೆವು.
ಮನೆಯಿಂದಲೇ ಹಲಸಿನ ಹಪ್ಪಳ, ಅಕ್ಕಿರೊಟ್ಟಿ, ಚಪಾತಿ, ಚಿತ್ರಾನ್ನ, ಮೊಸರನ್ನ, ಉಪ್ಪಿನಕಾಯಿ, ಕೊಟ್ಟೆ ಕಡುಬು, ಸಮಾರಂಭಕ್ಕೆ ಮಾಡಿದ ಸಿಹಿತಿಂಡಿಗಳು, ಕುರುಕಲು ತಿಂಡಿಗಳು, ಬಾಳೆಹಣ್ಣು — ಏನಿದೆಯೋ ಅದನ್ನೆಲ್ಲ ಹೊತ್ತು ತರುತ್ತಿದ್ದೆವು.
ಸಕ್ಕರೆಯೋ, ಬೆಲ್ಲವೋ ಜೊತೆಗೆ ಲಿಂಬೆಹಣ್ಣು, ಕಂಚೀ ಹಣ್ಣು ಇತ್ಯಾದಿ ತರುತ್ತಿದ್ದೆವು. ಒಂದಷ್ಟು ಲೋಟಗಳು, ಒಂದು ಪಾತ್ರೆ — ಇಷ್ಟನ್ನೆಲ್ಲ ನಮ್ಮ ಜೊತೆ ಒಯ್ದು, ಅಲ್ಲಿಯ ನೀರನ್ನೇ ಶರಬತ್ತು, ಪಾನಕ ಮಾಡಲು ಉಪಯೋಗಿಸುತ್ತಿದ್ದೆವು.
ಮಧ್ಯಾಹ್ನವಾದರೂ ಬರಲು ಮನಸ್ಸಾಗುತ್ತಿರಲಿಲ್ಲ. ಬೆಳಿಗ್ಗೆ ಹೋಗಲಾಗದಿದ್ದರೆ ಸಂಜೆ ನಮ್ಮ ಸವಾರಿ ಹೊರಡುತ್ತಿತ್ತು.
ನಮ್ಮೂರಿಗೆ ಬರಲು ನಮ್ಮ ಅಕ್ಕತಂಗಿಯರ, ಅಣ್ಣತಮ್ಮಂದಿರ ಮಕ್ಕಳಿಗೆಲ್ಲ ಇದೇ ದೊಡ್ಡ ಆಕರ್ಷಣೆಯಾಗಿತ್ತು.
ಹಿಂದಿರುಗಿ ಬರುವಾಗ ಹೊಳೆಯಲ್ಲಿ ಸಿಕ್ಕುವ ಚಂದದ ಕಲ್ಲುಗಳು, ದಾರಿಯುದ್ದಕ್ಕೂ ಸಿಕ್ಕುವ ನೇರಳೆ ಹಣ್ಣು, ಗೇರು, ಮಾವಿನಕಾಯಿ, ಹೆಬ್ಬಲಸು, ಪನ್ನೇರಳೆ ಹಣ್ಣು, ಕೆಂಪು ಕಾಡುಹಣ್ಣುಗಳು — ಏನೇನೋ… ಎಲ್ಲವನ್ನೂ ತಿಂದು, ಎಸೆದು, ಆಡಿಕೊಂಡು ಮನೆಗೆ ಬಂದ ಮೇಲೆ ಕೆಲವರನ್ನು ಮತ್ತೆ ಮನೆಯ ನೀರಿನಲ್ಲಿ ಸ್ನಾನ ಮಾಡಿಸಬೇಕಾಗುತ್ತಿತ್ತು.
ಅಷ್ಟೆಲ್ಲ ತಿಂದರೂ ಮನೆಗೆ ಬಂದ ಮೇಲೆ ಊಟ ಮಾಡಲು ಅಡ್ಡಿಯೇ ಇರಲಿಲ್ಲ. “ಬಕಾಸುರ”, “ಭೀಮ” ಎಂದು ಸ್ಪರ್ಧೆ ಮಾಡಿಕೊಂಡು, ಅವರಂತೆ ಐದಾರು ಉಂಡೆಗಳನ್ನು ಮಾಡುತ್ತಿದ್ದರು.
ಎಷ್ಟು ಚಂದ ಆ ಕಳೆದು ಹೋದ ದಿನಗಳು…
ಸರದ ಜೋಳಿಗೆ…
ಮತ್ತೆ ಬರುವುದಿಲ್ಲವೇ…!!!?
By ವೀಣಾ ಶಾನಭೋಗ್
Preservation by Sumanth Shanbhogue for Shanbhogue Publications

Leave a comment