For English Version Click Here
ಮಾವಿನ ಕಾಯಿ ಸೀಸನ್.. ವಾವ್… ಮಕ್ಕಳಿಗೆ ಮಾವಿನಮಿಡಿಗೆ ಅಚ್ಚ ಖಾರದ ಪುಡಿ, ಉಪ್ಪಿನಮಿಶ್ರಣದಲ್ಲಿ ಅದ್ದಿ ತಿನ್ನುವ ಖುಷಿ, ಅದರಲ್ಲೂ ಮನೆಯ ಹಿರಿಯರ ಕಣ್ಣುತಪ್ಪಿಸಿ ತಿನ್ನುವುದರಲ್ಲಿರುವ ರುಚಿ, ಮಾಲಿಕರಿಗೆ ಗೊತ್ತಾಗದ ಹಾಗೆ ಮರಕ್ಕೆ ಕಲ್ಲು ಹೊಡೆದು ಬೀಳಿಸಿ ತಿನ್ನುವ ಸವಿ… ಅದನ್ನು ಅನುಭವಿಸಬೇಕೇ ಹೊರತು ಹೇಳುವುದರಲ್ಲಿ ಯಾವ ಸುಖವೂ ಇಲ್ಲ ಅನಿಸುತ್ತದೆ…
ನಮ್ಮ ವಠಾರ ಟೀಚರ್ಸ್ ವಠಾರ.. ದುರ್ಗಾಟೀಚರ್, ಗೋಪಾಲ ಮಾಸ್ಟ್ರು, ನಮ್ಮಪ್ಪ ಗಣಪತಿ ಮಾಸ್ಟ್ರು.. ಈ ಮೂರೂ ಮನೆ ಮಕ್ಕಳ ಮಧ್ಯೆ ಭಯಂಕರ ಗೆಳೆತನ… ಹ್ಹಾ…. ಹ್ಹಾ… ಹ್ಹಾ..
ವಾರ್ಷಿಕ ಪರೀಕ್ಷೆಯ ಸಮಯ. ಬೆಳಿಗ್ಗೆ ಪರೀಕ್ಷೆ.. ಮಧ್ಯಾಹ್ನ ಮರುದಿನದ ಪರೀಕ್ಷೆಯ ತಯಾರಿಗೆ ಓದಲು ರಜೆ. ಎಲ್ಲರ ಅಪ್ಪ ಅಮ್ಮಂದಿರಿಗೆ ರಜೆ ಇರುತ್ತಿರಲಿಲ್ಲ. ನಾವು ಟೀಚರ್ಸ್ ಮಕ್ಕಳೆಲ್ಲಾ ಮನೆಯಲ್ಲಿ ಇರುತ್ತಿದ್ದೆವು ನಮ್ಮದೇ ಸಾಮ್ರಾಜ್ಯ.
ಎರಡನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಇರುವ ಹತ್ತುಹನ್ನೆರಡು ಜನ ಇದ್ದೆವೋ ಏನೋ ನೆನಪು. ಜೊತೆಯಲ್ಲಿ combined study ಎಂದು ಮನೆ ದೂರ ಇರುವ ನಮ್ಮ ನಮ್ಮ ಸಹಪಾಠಿಗಳು ಮಧ್ಯಾಹ್ನ ನಮ್ಮೆಲ್ಲರ ಮನೆಗೂ ಒಂದಷ್ಟು ಜನ ಇರುತ್ತಿದ್ದರು. ಅದೇನು ಮಜಾ…?
ಶಾಲೆಯಿಂದ ಬಂದು ಊಟ ಮಾಡಿ ಮರುದಿನದ ಪರೀಕ್ಷೆಯ ಓದುವ ಉತ್ಸಾಹ ಮೂರುವರೆ ಆಗುವವರೆಗೆ ಇರುತ್ತಿತ್ತು. ಮತ್ತೆ ಒಬ್ಬೊಬ್ಬರೇ ಸಂಚಾರಕ್ಕೆ ಹೊರಡುತ್ತಿದ್ದೆವು. ಓದುವ ಉಮೇದು ಯಾರಿಗಾದರೂ ಇದ್ದರೂ ಉಳಿದವರನ್ನು ನೋಡಿ ಪರೀಕ್ಷೆ ಆ ಕ್ಷಣಕ್ಕೆ ಮರೆತುಹೋಗುತ್ತಿತ್ತು.
ಗೋಪಾಲ ಮಾಸ್ಟ್ರ ಮನೆಯ ನೆಕ್ಕರೆ ಮಾವಿನಮರ ಕೈ ಬೀಸಿ ಕರೆಯುತ್ತಿತ್ತು. ದೋಟಿಯನ್ನು ಸಿದ್ಧಮಾಡುತ್ತಿದ್ದೆವು. ಗೋಪಾಲ ಮಾಸ್ಟ್ರ ನಾಲ್ಕೂ ಜನರೂ ನಮ್ಮ ಜೊತೆ ಸೇರುತಿದ್ದರು. ಮಾವಿನ ಕಾಯಿ ಕೆಡವುತ್ತಿದ್ದೆವು, ಕೆಲವನ್ನು ಕಲ್ಲೆಸೆದು ತೆಗೆಯುತ್ತಿದ್ದೆವು.
ಹದಿನೈದು ನಿಮಿಷದಲ್ಲಿ ಒಂದೆಂಟು ಹತ್ತು ಕಾಯಿ ಕೈವಶ ಆಗುತ್ತಿತ್ತು. ಅಷ್ಟರಲ್ಲಿ ದುರ್ಗಾ ಟೀಚರ್ ಮನೆಯಿಂದ ಅವರ ಮೂರುಜನ ಮಕ್ಕಳು ತೆಂಗಿನೆಣ್ಣೆ, ಮೆಣಸಿನಪುಡಿ ತಂದು ಬಿಡುತ್ತಿದ್ದರು. ನಮ್ಮ ಮನೆಯಿಂದ ಉಪ್ಪು, ಪಾತ್ರೆ, ಚಾಕುಚೂರಿ, ಹಸಿಮೆಣಸು, ಕರಿಬೇವಿನ ಸೊಪ್ಪು ಇತ್ಯಾದಿ ಎಲ್ಲವೂ ಅಂಗಳದ ಕಟ್ಟೆಯ ಮೇಲೆ ಸೇರುತ್ತಿದ್ದವು.
ಎಲ್ಲವನ್ನೂ ಅಚ್ಚುಕಟ್ಟಾಗಿ ಯಾವುದೇ ಪಚಡಿಮಾಮನಿಗೆ ಕಮ್ಮಿ ಇಲ್ಲದಂತೆ ಸಿದ್ಧಪಡಿಸುತ್ತಿದ್ದೆವು. ಅಷ್ಟು ಹೊತ್ತಿಗೆ ನಾಲ್ಕು ಗಂಟೆಯಾಗುತ್ತಿತ್ತು.
ನಾಲ್ಕುವರೆಗೆ ಶಾಲೆ ಬಿಟ್ಟರೆ ನಮ್ಮೆಲ್ಲರ ಅಪ್ಪ, ಅಮ್ಮ, ಸುನೀತಾ ಟೀಚರ್ ಮನೆ ಸೇರುವ ಸಮಯ…
ಅಷ್ಟರಲ್ಲಿ ನಮ್ಮ ಪಚಡಿಯನ್ನು ಹಂಚಿ ತಿಂದು.. ಮಾಡಿದ, ತಿಂದ ಗುರುತೇ ಇಲ್ಲದಷ್ಟು ಚಂದಮಾಡಿ ತಿಂದು ಸ್ವಚ್ಛ ಮಾಡಿ ಕೈಯಲ್ಲಿ ಪುಸ್ತಕ ಹಿಡಿದು ಆದರ್ಶ ವಿದ್ಯಾರ್ಥಿಗಳಾಗಿರುತ್ತಿದ್ದೆವು…
ಇವತ್ತು ನನ್ನ ಮೊಮ್ಮಗಳು ಅವಳ ಗೆಳತಿ ಕೊಟ್ಟದೆಂದು ಮಾವಿನ ಮಿಡಿ ಚಾಕು, ಉಪ್ಪು, ಅಚ್ಚ ಮೆಣಸಿನ ಪುಡಿ ಎಲ್ಲಾ ತೆಗೆದುಕೊಂಡು ತಿನ್ನಲು ಕುಳಿತಾಗ ನನ್ನ ನೆನಪಿನ ಹಳಿಯಲ್ಲಿ ಬೋಗಿಯೊಂದು ಸರಿದು ಹೋಯಿತು… ಆದರೆ ಹಲ್ಲುಗಳು ಮಾತ್ರ ಅಂದಿನಂತೆ ಇಂದು ಸಹಕರಿಸದೆ… ಹುಳಿಹುಳಿಯಾದವು.
ವೀಣಾ ಶಾನುಭೋಗ್
Preservation by Sumanth Shanbhogue for Shanbhogue Publications

Leave a comment