ಬೋಗಿ – 10

For English Click Here

ನಮ್ಮನೆಯವರ ಅಜ್ಜನ ಮನೆಯಲ್ಲಿ ಅಂದರೆ ನನ್ನ ಅತ್ತೆಯ ತವರು ಮನೆಯಲ್ಲಿ ಮೊನ್ನೆ ಕೋಲ ಇತ್ತು…. ಹೋಗಿದ್ದೆವು..

ಅಲ್ಲಿ ತೋಟ ಗದ್ದೆ ಎಲ್ಲವನ್ನೂ ನೋಡುವಾಗ ಒಂದು ಬೋಗಿ “ಧಡಕ್… ಧಡಕ್…” ಎಂದು ಸದ್ದು ಮಾಡುತ್ತಾ ನೆನಪಿನ ಹಳಿಯಲ್ಲಿ ಬಂದಿತು.


ಪ್ರತಿ ಸಲ ರಜೆಯಲ್ಲಿ ಕೆಲವು ದಿನಗಳ ಕಾಲ ಅಮ್ಮನ ಜೊತೆ ಅಲ್ಲಿ ಕಳೆಯುತ್ತಿದ್ದೆವು.. ತುಂಬಾ ಗಮ್ಮತ್ತು ಮಾಡುತ್ತಿದ್ದೆವು… ಹೊರನಾಡು, ಅಂಬಾತೀರ್ಥ, ರುದ್ರಪಾದ ಎಂದು ಸುತ್ತಾಡುತ್ತಿದ್ದೆವು. ಒಂದೆರಡು ದಿನ ಅತ್ತೆಯವರ ತವರು ಮನೆಯಲ್ಲಿ (ನಮ್ಮತ್ತೆ ತಾಯಿಯವರು ವಾವೆಯಲ್ಲಿ ನಮ್ಮಮ್ಮನಿಗೆ ಅಕ್ಕ ಆಗಬೇಕಿತ್ತು ಬಾಂಧವ್ಯದಲ್ಲಿ ನಮ್ಮಮ್ಮ ಮತ್ತು ನಮ್ಮತ್ತೆ ಆಪ್ತ ಗೆಳತಿಯಾಗಿದ್ದರು..) ಇರುತ್ತಿದ್ದೆವು.

ನಾನು ಆರನೇ ಏಳನೇ ತರಗತಿಯಲ್ಲಿ ಇದ್ದೆನೋ ಸರಿಯಾಗಿ ನೆನಪಿಲ್ಲ. ಎಲ್ಲರೂ ಆಟ ಆಡಲೆಂದು ಮನೆ ಹಿಂದುಗಡೆ ಇದ್ದ ಗೇರುಹಣ್ಣಿನ ಗುಡ್ಡಕ್ಕೆ ಹೋದೆವು..

ಅಲ್ಲಿ ಹೋಗುವಾಗ ನನಗೆ ಒಂದು ದೊಡ್ಡ ಗಿಡ… ಆ ಗಿಡದ ತುಂಬಾ ಬಿಳಿಯ ಹೂಗಳು ಕಂಡವು. ಒಳ್ಳೆಯ ಪರಿಮಳವೂ ಬರುತ್ತಿತ್ತು. ದುಂಡು ಮಲ್ಲಿಗೆ, ಜಾಜಿ, ಮಂಗಳೂರು ಮಲ್ಲಿಗೆ, ಶಂಕರಪುರ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಮೈಸೂರು ಮಲ್ಲಿಗೆ, ಸೂಜಿ ಮಲ್ಲಿಗೆ, ಕಾಡು ಮಲ್ಲಿಗೆ ಹೀಗೆ ಹಲವಾರು ಮಲ್ಲಿಗೆ ಪರಿಚಯವಿತ್ತು..ಆದರೆ ಈ ಮಲ್ಲಿಗೆ ಗೊತ್ತಿರಲಿಲ್ಲ.. ಹೆಸರೂ ಗೊತ್ತಿರಲಿಲ್ಲ. ಇದು ಘಟ್ಟದ ಮಲ್ಲಿಗೆ ಇರಬೇಕು. ಅಂದುಕೊಂಡೆ… ಆದರೆ ಇಷ್ಟೊಂದು ಹೂ ಬಿಟ್ಟಿದೆ.. ಯಾರೂ ತೆಗೆಯಲಿಲ್ಲವಲ್ಲ ಎಂದು ಆಶ್ಚರ್ಯದ ಜೊತೆ ಬೇಸರವೂ ಆಯಿತು.
ಅಂಗಳದಲ್ಲಿದ್ದ ಅಬ್ಬಲಿಗೆ (ಕನಕಾಂಬರ), ಮಲ್ಲಿಗೆ, ದಾಸವಾಳ, ರತ್ನಗಂಧಿ, ಸೇವಂತಿಗೆ ಎಲ್ಲವನ್ನೂ ತೆಗೆದು ಕಟ್ಟಿ ಬೆಳಗ್ಗೆ ದೇವರಿಗೆ ಇಟ್ಟಾಗಿತ್ತು. ಊರಲ್ಲಿ ಇಷ್ಟೊಂದು ಮಲ್ಲಿಗೆ ಹೂವು ಇದ್ದರೆ ಮೊಗ್ಗನ್ನು ತೆಗೆದು ಕಟ್ಟಿ ದೇವರಿಗೆ ಇಡುತ್ತಿದ್ದರು. ಅಥವಾ ಮಾರುತ್ತಿದ್ದರು.

ಬಹುಶಃ ತೋಟದಲ್ಲೆಲ್ಲೋ ಇರುವುದರಿಂದ ಇಲ್ಲಿ ಹೂ ಬಿಟ್ಟದ್ದು ಯಾರೂ ನೋಡಲಿಲ್ಲ.. ನಾನಿವತ್ತು ಎಲ್ಲಾ ತೆಗೆದು ಚಂದ ಮಾಡಿ ಮಾಲೆ ಕಟ್ಟಿದರೆ ಎಲ್ಲರಿಗೂ ಖುಷಿಯಾಗಬಹುದು.. ಎಲ್ಲರೂ ನನ್ನ ಜಾಣತನವನ್ನು ಹೊಗಳುತ್ತಾರೆ.. ಎಂದುಕೊಂಡೆ. ಅಮ್ಮನಿಗಂತೂ ಭಾರೀ ಖುಷಿಯಾಗುತ್ತದೆ.. ಎಂದು ಯೋಚಿಸಿಯೇ ಮನಸ್ಸು ಹೂವಿನಂತೆ ಅರಳಿತು…

ನನ್ನ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಮೊದಲು ಅಲ್ಲೇ ಸ್ವಲ್ಪ ದೂರದಲ್ಲಿದ್ದ ಬಾಳೆ ಗಿಡದಿಂದ ಬಾಳೆ ನಾರನ್ನು ತೆಗೆದೆ. ಅಲ್ಲೇ ಇದ್ದ ಕೆಸುವಿನ ಎಲೆಯನ್ನೂ ತೆಗೆದೆ. ಹೂವಿನ ಗಿಡದ ಹತ್ತಿರ ಬಂದು ಚಂದ ಮಾಡಿ ಸ್ವಲ್ಪ ಹೂ ತೆಗೆಯುವುದು, ಕೆಸುವಿನ ಎಲೆಯಲ್ಲಿ ಹಾಕಿ ಒಟ್ಟು ಮಾಡುವುದು.. ಕಟ್ಟುವುದು.. ಮತ್ತೆ ಪುನಃ ಸ್ವಲ್ಪ ತೆಗೆಯುವುದು .. ಕಟ್ಟುವುದು.. ಹೀಗೆ ಮಾಡುತ್ತಿದ್ದೆ.

ಸುಮಾರು ಒಂದು ಮೊಳಕ್ಕಿಂತಲೂ ಉದ್ದವಾಗಿತ್ತು ನಾನು ಕಟ್ಟಿದ ಹೂವಿನ ಮಾಲೆ ನೋಡಿ ನನಗೆ ಹೆಮ್ಮೆ ಎನಿಸುತಿತ್ತು. ಇನ್ನೂ ಹೂ ತೆಗೆಯಲು ಬಾಕಿ ಇತ್ತು…

ನನ್ನ ಜೊತೆ ಬಂದವರೆಲ್ಲಾ ಗುಡ್ಡಕ್ಕೆ ಹೋಗಿ ನೋಡುವಾಗ ನಾನಿಲ್ಲದ್ದನ್ನು ನೋಡಿ ಗಾಬರಿಯಿಂದ ನನಗೆ ದಾರಿ ತಪ್ಪಿ ಇನ್ನೆಲ್ಲೋ ಹೋಗಿರಬೇಕು… ಎಂದು ಆಡುವುದನ್ನು ಬಿಟ್ಟು ಹಿಂತಿರುಗಿ ಬಂದರು.. ಬಂದವರೇ ಹೂ ಕೊಯ್ಯುತ್ತಿದ್ದ ನನ್ನನ್ನು ನೋಡಿ ಒಕ್ಕೊರಲಿನಿಂದ ಗಾಬರಿ ಹೆದರಿಕೆ ಎಲ್ಲವೂ ಕೂಡಿದ ಸ್ವರದಿಂದ ಅರಚಿದರು .. 

“ಏಯ್…ಕಾಫಿ ಹೂ ಯಾಕೆ ತೆಗೀತಿದ್ದೀಯಾ..? ಅಜ್ಜ, ಮಾಮ, ಚಿಕ್ಕಪ್ಪ, ದೊಡ್ಡಪ್ಪ ಯಾರಾದರೂ ನೋಡಿದರೆ ನಿನಗೆ ಅಲ್ಲಾ… ನಮಗೆ ಬೈತಾರೆ…” ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬೈದರು…
“ನನಗೆ ಗೊತ್ತಿರಲಿಲ್ಲ… ನಾನೇ ಹೇಳ್ತಿನಿ.. ನಾನು ತೆಗೆದದ್ದು ಕಾಫೀ ಹೂ ಎಂದು ನನಗೆ ಗೊತ್ತಿರಲಿಲ್ಲ ಅಂತ.. ನಿಮಗೆ ಯಾಕೆ ಬೈತಾರೆ..” ಎಂದು ಹೇಳಿದೆ. ನಾನು ಎಷ್ಟು ಚಂದ ಮಾಡಿ ಹೂ ಕಟ್ಟಿದ್ದೇನೆ.. ಇದನ್ನಾದ್ರೂ ತೆಗೆದುಕೊಂಡು ಹೋಗಿ ದೇವರಿಗೆ ಇಡುವಾ… ಅಂದ್ರೆ ಕೇಳದೆ ಅದನ್ನು ಅಲ್ಲೇ ಎಲ್ಲೋ ಯಾರಿಗೂ ಕಾಣಿಸದ ಕಡೆ ಎಸೆದರು.. “ಅದನ್ನು ಮನೆಗೇ ತೆಗೆದುಕೊಂಡು ಹೋಗಬಾರದು…..ಇನ್ನು ದೇವರಿಗೆ ಇಡ್ತಾರಂತೆ”ಎಂದು ನಕ್ಕರು..
ಅಷ್ಟೇ ಅಲ್ಲಾ ಮನೆಯಲ್ಲೂ ಹೇಳಬಾರದೆಂದು ತಾಕೀತು ಮಾಡಿದರು.. ಮತ್ತೆ ಕಾಫಿ ಗಿಡ,ಕಾಫಿ ಹೂವಿನ ಬಗ್ಗೆ ತಿಳಿ ಹೇಳಿದರು.. ನನ್ನಿಂದಾಗಿ ಸುಮಾರು ಕಾಫಿ ಬೀಜ ಹಾಳಾಯ್ತು… ಎಂದು ಹೇಳಿ ಅಣಕಿಸಿದರು.. ನಾನೊಂದು ಪೆದ್ದು ಎನ್ನುವ ತರಹ..


ನನಗೆ ಮಾತ್ರ ಈಗಲೂ “ಕಾಫಿ ಹೂ” ನೋಡಿದಾಗಲೆಲ್ಲಾ ನನ್ನ ನೆನಪಿನ ಹಳಿಯಲ್ಲಿ ಈ ಬೋಗಿಯೊಂದು ಸರಿದು ಹೂವಿನ ಪರಿಮಳವನ್ನು ಹರಡುತ್ತಾ ಹೋಗುತ್ತದೆ..


ವೀಣಾ ಶಾನುಭೋಗ್

Preservation by Sumanth Shanbhogue for Shanbhogue Publications

Leave a comment