ಬೋಗಿ – 13

For English Click Here

ಕಾರ್ಕಳದಿಂದ ಕಳಸಕ್ಕೆ ಹೋಗುತ್ತಾ ಇದ್ದೆವು… ಮಳೆಗಾಲದ ಒಂದು ದಿನ… ಹೋಗುವಾಗ ಕಾಣುವ ಅದ್ಭುತ ಪ್ರಕೃತಿ ಎಲ್ಲರನ್ನೂ ಪ್ರಕೃತಿಪ್ರೇಮ ಇರದವರನ್ನೂ ಆಕರ್ಷಿಸುವುದು… ಸಹಜವಾಗಿತ್ತು. ಭೂತಾಯಿಯು ಮಳೆಯ ನೀರಿನಿಂದ ಒದ್ದೆಯಾಗದಂತೆ ಆಕಾಶರಾಜನೇ ಇಳಿದು ಬಂದು ತಾನೇ ಹೊದಿಸಲು ತಂದ ಮಂಜಿನ ರಜಾಯಿ.. ಅದಾದರೂ ಕಾಲತ್ತ ಎಳೆದರೆ ತಲೆಯತ್ತ ಇಲ್ಲ.. ತಲೆಯತ್ತ ಎಳೆದರೆ ಎಡ ಬದಿ ಕಾಣುವಂತೆ, ಎಡಬದಿ ಮರೆ ಮಾಡಲು ಪ್ರಯತ್ನಿಸಿದರೆ ಬಲಭಾಗ ತೆರೆದಂತೆ…

ಅಲ್ಲಿಲ್ಲಿ ಪ್ರಕೃತಿ ಹಸಿರು ಮೈಮಾಟ ಕಾಣುವಾಗ ಮುಗ್ಧರಾಗಲೇ ಬೇಕು. ಪ್ರವಾಸಿಗರು ಅಲ್ಲಿಲ್ಲಿ ನಿಂತು ನೋಡಲು… ನಾವೆಲ್ಲರೂ ಅವರಿಗೆ ನಮ್ಮ ಮಲೆನಾಡ ಮಣ್ಣಿನ ಮಕ್ಕಳಾದ ಜಿಗಣೆಗಳ ಬಗ್ಗೆ ಹೇಳಿದರೆ ಏನಾಗಬಹುದೆಂದು… ಊಹಿಸಿಯೇ ನಗು ಬರುತ್ತಿತ್ತು… ರಕ್ತ ಬೀಜಾಸುರನ ವಂಶಸ್ಥರು ಇರಬೇಕು… ರಕ್ತವನ್ನು ಹೀರಿ ಜಡಭರತರಂತೆ ಬೀಳುವ ಈ ಇಂಬಳಗಳು, ಜಿಗಣೆಗಳು…

ವಾವ್…. ಅದೇನಾದರೂ ಈ ಪ್ರವಾಸಿಗರ ಕಾಲು ಹತ್ತಿ ಮೇಲೆ ಬಂದರೆ…ನಮಗೆ ಮುಂದಿನ ದೃಶ್ಯ ಕಣ್ಣಂದೆ ಬಂದು ನಗು ಬರುತ್ತಿತ್ತು, ಬೇಸರವೂ ಆಗುತ್ತಿತ್ತು.

ಅಷ್ಟರಲ್ಲಿ ನನ್ನ ಮೊಮ್ಮಕ್ಕಳದ್ದು ಗಲಾಟೆ ಆಗುತ್ತಿತ್ತು, ನಾವೂ ಇಳೀತೇವಿ.. ಕೆಳಗೆ ರಸ್ತೆ ಬದಿ ನಿಂತು ಕಡಾಂಬಿ ಜಲಪಾತ ನೋಡ್ತೇವೆ. ನನ್ನ ಮೊಮ್ಮಗನಂತೂ ನಂಗೆ ಜೋರು ಮೂತ್ರ ಬರ್ತಿದೆ…ಎಂದು ಹೇಳಲು ಗಾಡಿಯಿಂದಲೇ ಒಂದು ಇಂಬಳವನ್ನು ತೋರಿಸಿದ ಮೇಲೆ ಸುಮ್ಮನಾದರು ಇಬ್ಬರೂ…

ನನ್ನ ಕಣ್ಣುಗಳ ಮುಂದೆ ಮಾತ್ರ ನೆನಪಿನ ಹಳಿಯಲ್ಲಿರುವ ಒಂದು ಬೋಗಿ ಧಡಕ್.. ಧಡಕ್ ಎಂದು ಸರಿದು ಬಂತು.

ನಮ್ಮ ಶಾಲೆಯಿಂದ ಕಡ್ಡಾಯವಾಗಿ ಮಕ್ಕಳ ಮನೆ ಸಂಪರ್ಕ ಮಾಡಬೇಕಿತ್ತು. ನಮ್ಮನೆಯವರಿಗೆ ಫುರ್ಸತ್ತು ಇರುವಾಗ ನಾನು ನನ್ನ ಪಾಲಿನ ಮನೆಗಳ ಸಂಪರ್ಕವನ್ನು ಮಾಡಿ ಮುಗಿಸುತ್ತಿದ್ದೆ. ನನ್ನ ತಂಗಿಯ ಪುಟ್ಟ ಮಗಳು ನನ್ನ ಜೊತೆಯಲ್ಲಿ ಇದ್ದಳು ಅವಳನ್ನೂ ಕಟ್ಟಿಕೊಂಡು ಹೊರಟೆವು.

ಒಂದು ಬಸ್ ಸ್ಟಾಪಿನಲ್ಲಿ ಇಳಿದರೆ ಮೂರು ಮಕ್ಕಳ ಮನೆಯನ್ನು ಸಂಪರ್ಕಿಸಬಹುದು. ಮೂರೂ ಮಕ್ಕಳಿಗೂ ಅಡಿಕೆ ಹಾಗೂ ಕಾಫೀ ತೋಟವಿತ್ತು. ನನ್ನ ಮಗಳಿಗೆ ಕಾಫೀ ತೋಟ ನೋಡಿ ಭಾರೀ ಖುಷಿಯಾಗಿತ್ತು. ಎಷ್ಟು ಬೊಬ್ಬೆ ಹೊಡೆದರೂ ನಮ್ಮ ಮಾತು ಕೇಳದೆ ಆ ಗಿಡಗಳ ನಡುವೆ ಕೈಗೆ ಸಿಕ್ಕದೆ ಓಡಿದಳು.

ಮಳೆಗಾಲ ಪ್ರಾರಂಭವಾಗಿತ್ತು. ಆ ವಿದ್ಯಾರ್ಥಿಯ ಮನೆ ತಲುಪುವಾಗ ನನ್ನ ಮಗಳು ಕರಡಿಯಂತಾಗಿದ್ದಳು. ತೋಳಿಲ್ಲದ ಫ್ರಾಕ್ ಹಾಕಿಕೊಂಡಿದ್ದಳು.

ತಲೆ ಮತ್ತು ಮುಖವೊಂದು ಬಿಟ್ಟು ಕೈಕಾಲು, ಮೈ ತುಂಬಾ ನೂರಾರು ಪುಟ್ಟಪುಟ್ಟ ಇಂಬಳಗಳು ಕಚ್ಚಿಕೊಂಡಿದ್ದವು.

ಅವಳ ಅಳು ಕೇಳುವಾಗ ಬೇಸರವಾದರೂ ಅವಳ ಅವಸ್ಥೆ ನೋಡಿ ನಗು ಬರುತ್ತಿತ್ತು. ಅವರ ಮನೆಯಲ್ಲಿ ದೊಡ್ಡ ಹಂಡೆಯಲ್ಲಿ ಬಿಸಿ ನೀರು ಇತ್ತು ಅರಶಿನದ ಪುಡಿ ಕೊಟ್ಟು ಮೊದಲು ಮಗುವಿಗೆ ಹಚ್ಚಿ ಸ್ನಾನ ಮಾಡಿಸಿ ಎಂದು… ಹೇಳಿ ಬಚ್ಚಲು ಮನೆ ತೋರಿಸಿದರು…

ಫೋಟೋ ತೆಗೆಯದಿದ್ದರೂ ಅಂದಿನ ಅವಳ ಕರಡಿ ವೇಷ ಮಾತ್ರ ಇವತ್ತೂ ಇಂಬಳ ಕಂಡಾಗಲೆಲ್ಲಾ ಆ ನೆನಪಿನ ಜೋಗಿ ಮಾತ್ರ… ಸರಿಯುತ್ತಾ.. ಮತ್ತೆ ಬರುತ್ತಾ ಇರುತ್ತದೆ..

ಮತ್ತೊಮ್ಮೆ ನಾವು ಕೊಪ್ಪದಿಂದ ನಾವೊಂದಿಷ್ಟು ಜನ ಮೂಡಬಿದ್ರೆಗೆ ಒಂದು ಕಾರ್ಯಕ್ರಮಕ್ಕೆ ಬರುತ್ತಿದ್ದೆವು. ಜುಲೈ ತಿಂಗಳ ಮಳೆಗೆ ದಾರಿಯಲ್ಲಿ ದೊಡ್ಡ ಮರವೊಂದು ಬಿದ್ದು ಸುಮಾರು ಎರಡು ಗಂಟೆ ಬಸ್ಸಲ್ಲಿಯೇ ಕುಳಿತಿದ್ದೆವು..

ಆದರೆ ಪ್ರಕೃತಿಯ ಕರೆಗೆ ಎಲ್ಲರೂ ಅಲ್ಲಲ್ಲೇ ಕಾಡಿನ ನಡುವೆ ಹೋದರು. ನನಗೆ ಜಿಗಣೆಯ ನೆನಪು ಬಂದರೂ ಎಚ್ಚರಿಕೆಯಿಂದ ನನ್ನ ಅತ್ತೆಯವರನ್ನು ಕರೆದೊಯ್ಯಿ, ಹಿಂತಿರುಗಿ ಬಂದು ಕಾಲಿಗೆ ಎಲ್ಲೂ ಜಿಗಣೆ ಹತ್ತಿಲ್ಲ ಎಂದು ದೃಢಪಡಿಸಿಕೊಂಡೇ ಬಸ್ ಹತ್ತಿದೆವು.

ಆದರೆ ಯಾರದೋ ಕಾಲಿಗೆ ತಾಗಿ ಬಂದಿದ್ದ ಜಿಗಣೆಗೆ ನನ್ನ ಕಾಲುಗಳು ಸಿಕ್ಕಿತೋ ಏನೋ..! ಸ್ವಲ್ಪ ಹೊತ್ತಿನ ನಂತರ ರಕ್ತ ಹರಿಯಲು ಪ್ರಾರಂಭಿಸಿತು. ಕೈಯಲ್ಲಿದ್ದ ಕರ್ಚೀಫು.. ಕಟ್ಟಿದೆ. ನಮ್ಮನೆಯವರ ಹೆಗಲ ಮೇಲಿನ ಶಲ್ಯವನ್ನೂ ಬಳಸಿಕೊಂಡೆ.

ಮೂಡಬಿದ್ರೆಯಲ್ಲಿ ಇಳಿಯುವಾಗ ಅತ್ತ ಇತ್ತ ಇದ್ದವರೆಲ್ಲರ ಪ್ರಶ್ನಾರ್ಥಕ ಚಿಹ್ನೆಗಳಿಂದ ಕೂಡಿದ ಹುಬ್ಬುಗಳು, ಕಣ್ಣುಗಳು ನನ್ನತ್ತವೇ ಸರಿಯುತ್ತಿದ್ದವು. ಕೆಲವರು ಕೇಳಿಯೂ ಬಿಟ್ಟರು.. ಜಿಗಣೆ, ಇಂಬಳ, ಲೀಚ್.. ಏನೆಂದರೂ ಅವರಿಗೆ ಅರ್ಥವಾಗುತ್ತಿರಲಿಲ್ಲ… ಡಾಕ್ಟ ಹತ್ತಿರ ಹೋಗಿ.. ಎಂದು ಸಲಹೆ ಬೇರೆ ನೀಡುತ್ತಿದ್ದರು.

ಸದ್ಯ ಅಷ್ಟರಲ್ಲಿ ನಮಗೆ ಬೇಕಾದ ಬಸ್ ಬಂದು ನನ್ನನ್ನು ಎಲ್ಲರಿಂದ ಬಚಾವ್ ಮಾಡಿತು. ಮನೆಗೆ ಬಂದು ಕಚ್ಚಿದಡೆ ಒಂದೆಡೆ ಸಾಕಷ್ಟು ಅರಶಿನ ಹಚ್ಚಿದೊಡನೆ ರಕ್ತ ಬರುವುದು ನಿಂತಿತು. ಆದರೆ ಬಸ್ ಸ್ಟಾಂಡಿನಲ್ಲಿ ಕಂಡ ಕಣ್ಣುಗಳು, ಮುಜುಗರ ಮಾತ್ರ ಈಗಲೂ ಧಡಕ್.. ಧಡಕ್ ಎಂದು ಕಣ್ಣುಂದೆ….ಬಂದು ಸರಿಯುತ್ತವೆ..


ವೀಣಾ ಶಾನಭೋಗ್

Preservation by Sumanth Shanbhogue for Shanbhogue Publications

Response

  1. Veena Shanbhogue Avatar

    ಜಿಗಣೆಗಳು ಮತ್ತೆ ಮಳೆಗಾಲದಲ್ಲಿ ಯಾವಾಗಲೂ ನೆನಪಿಗೆ ಬರುವ ಪುಟ್ಟ ಜೀವಿಗಳು..

    Liked by 1 person

Leave a comment