ಅಂದು…..
ನಮ್ಮತ್ತೆ ಅದೇ ತಾನೇ ಕರೆದ ಹಾಲನ್ನು ತಂದು ಪಾತ್ರೆಗೆ ಸುರಿದರು. ಒಳಗೆ ರಂಗವಲ್ಲಿಯ ಎರಡು ಗೆರೆ ಎಳೆದರು. ಅರಶಿನ ಕುಂಕುಮ ಹಚ್ಚಿದರು. ಬಚ್ಚಲುಮನೆಯಿಂದ ನಾಲ್ಕಾರು ಉರಿಯುವ ಕೆಂಡಗಳನ್ನು ತಂದು ದೋಸೆ ಒಲೆಯಲ್ಲಿ ಹಾಕಿದರು. ಅದರ ಮೇಲೆ ನಾಲ್ಕಾರು ಸೌದೆ ತುಂಡುಗಳನ್ನು ಇಟ್ಟರು. ಒಲೆಯ ಮೇಲೆ ದೋಸೆ ಹೆಂಚನ್ನು ಇಟ್ಟರು. ಕೋಡೊಲೆ ಮೇಲೆ ಕಾಫಿಗೆ ಬೆಲ್ಲದ ನೀರನ್ನು ಇಟ್ಟರು. ಇನ್ನೊಂದು ಕೋಡೊಲೆ ಮೇಲೆ ಹಾಲನ್ನಿಟ್ಟರು. ಧಡಧಡನೇ ಮನೆಯ ಹಿಂದಿನ ಅಡಿಕೆ ತೋಟದೆಡೆಗೆ ಓಡುನಡಿಗೆಯಲ್ಲಿ ಹೋದರು.
ಅಡುಗೆ ಮನೆಯ ಬಾಗಿಲಿಗೆ ಒರಗಿ ನಿಂತ ನನಗೆ “ನೀನು ಏನನ್ನೂ ಮುಟ್ಟಬೇಡ. ಸೌದೆಗೆ ಬೆಂಕಿ ತಾಗಿ ಹೆಂಚು ಕಾಯುವುದರೊಳಗೆ ನಾನು ಬರುತ್ತೇನೆ. ನೀನು ದೋಸೆ ಹುಯ್ಯುವುದು ಬೇಡ” ಎಂದರು.
ನಾನು “ಆಯಿತು..” ಎಂಬಂತೆ ಕತ್ತನ್ನಾಡಿಸಿದೆ.
ನಮ್ಮ ಸಣ್ಣತೋಟವನ್ನು ದಾಟಿ ಬೇಲಿ ಹಾರಿದರೆ ನನ್ನ ಮಾವನವರ ಅಕ್ಕನ ಮನೆಯ ತೋಟ. ಆ ತೋಟದ ಬದಿಯಿಂದ ಹಾದುಹೋದರೆ ಅವರ ಅಡುಗೆ ಮನೆಯ ಬಾಗಿಲು ಸಿಗುತ್ತದೆ.
ನಮ್ಮ ಅತ್ತೆಗೆ ಆ ತುಂಬಿದ ಮನೆಯ ಬಂಧುತ್ವಕ್ಕಿಂತಲೂ ಮಿತ್ರತ್ವ ಹೆಚ್ಚು. ಅಲ್ಲಿ ಹೋಗಿ ಎಂದಿನಂತೆ ಎಲ್ಲರ ಕುಶಲೋಪರಿಯನ್ನು ಕೇಳಿ ಹೊಸದೇನಾದರೂ ಸಿಕ್ಕಿದ ಸುದ್ದಿ ಸಮಾಚಾರಗಳನ್ನು (ರಾತ್ರಿ ಗಂಡಂದಿರು ಹೇಳಿದ forward msg ಗಳು) ಹೇಳಲು ಇದ್ದರೆ ಹೇಳಿ,ಕೇಳಲು ಇದ್ದರೆ ಕೇಳಿ ಬರುತ್ತಿದ್ದರು.
ನಾನು ಎಂದಿನಂತೆ ಹೆಂಚನ್ನು ಕಾವಲು ಕಾಯುತ್ತಿದ್ದೆ.. ಬಿಸಿಯಾಗುವುದರೊಳಗೆ ಅವರು ಬರುತ್ತಿದ್ದರು. ದೋಸೆ ಹುಯ್ಯುತ್ತಾ ನನಗೆ ವರದಿ ಒಪ್ಪಿಸುತ್ತಿದ್ದರು.
ಇಂದು…..
ನನ್ನ ಸೊಸೆ ಹೊರಗೆ ಗೇಟಿನ ಬಳಿ ಇಟ್ಟು ಹೋದ ನಂದಿನಿ ಹಾಲನ್ನು ತಂದು ಪಾತ್ರೆಗೆ ಸುರಿದಳು. ಗ್ಯಾಸ್ ಹಚ್ಚಿ ಒಂದು ಒಲೆಯ ಮೇಲೆ ಹಾಲನ್ನು ಇಟ್ಟಳು. ಇನ್ನೊಂದರ ಮೇಲೆ ದೋಸೆ ಹೆಂಚನ್ನು ಕಾಯಲು ಇಟ್ಟಳು.
ಅಲ್ಲೇ ಡೈನಿಂಗ್ ಟೇಬಲಿನ ಕುರ್ಚಿಯ ಮೇಲೆ ಕುಳಿತ ನನಗೆ “ಅತ್ತೆ..ಏನನ್ನೂ ಮುಟ್ಟಬೇಡಿ. ಹೆಂಚು ಕಾಯುವುದರೊಳಗೆ ನಾನು ಬಂದು ದೋಸೆ ಹುಯ್ಯುತ್ತೇನೆ” ಎಂದಳು.
ನಾನು “ಆಯಿತು…” ಎಂಬಂತೆ ಕತ್ತನ್ನಾಡಿಸಿದೆ.
ಧಡಧಡನೆ ತನ್ನ ರೂಮಿಗೆ ಓಡಿದಳು. ಚಾರ್ಜಿಗೆ ಇಟ್ಟ ತನ್ನ ಮೊಬೈಲನ್ನು ತಂದಳು.
ನಾನು ಹೆಂಚು ಕಾಯುವುದನ್ನೇ ಕಾಯುತ್ತಿದ್ದೆ. ಅವಳು ಬಂದು ಹೆಂಚಿಗೆ ದೋಸೆ ಹಿಟ್ಟನ್ನು ಹುಯ್ಯುತ್ತಾ ಮೊಬೈಲ್‌ನಲ್ಲಿ ಬಂಧು ಮಿತ್ರರಿಗೆ ಶುಭಮಂಜಾವು ಹೇಳಿ, ಹೊಸಸುದ್ದಿಗಳನ್ನು forwarded msg ಗಳನ್ನು ನನಗೆ ಹೇಳುತ್ತಾ ಇರುವಳು.
ನಾನು ಅಂದು ನಿಂತು…ಇಂದು ಕುಳಿತು…ಕತ್ತಾಡಿಸುತ್ತಾ ಇದ್ದೇನೆ..
ವೀಣಾ ಶಾನುಭೋಗ್
Preservation by Sumanth Shanbhogue for Shanbhogue Publications

Leave a Reply