For English Version Click Here
ಗೆಳತಿಯನ್ನು ನೋಡಲು ವೃದ್ಧಾಶ್ರಮಕ್ಕೆ ಹೋಗಿದ್ದೆ. ಅಲ್ಲಿ ದಂಪತಿಗಳಿಬ್ಬರು ಮಾತ್ರ ಅವರಿಗೆಂದೇ ಇರುವ ಒಂದು ಸುಸಜ್ಜಿತ ಕೋಣೆಯಲ್ಲಿರುತ್ತಿದ್ದರು. ಅವರ ಕೋಣೆ ಅಂದ್ರೆ ಒಳ್ಳೆಯ ಐಶಾರಾಮಿ ಕೊಠಡಿಯಾಗಿತ್ತು. ಅವರು ದೊಡ್ಡ ಹುದ್ದೆಯಲ್ಲಿದ್ದು ತಮ್ಮ ಮಗ ಮತ್ತು ಮಗಳನ್ನು ಪ್ರತಿಷ್ಠಿತ ರೆಸಿಡೆನ್ಸಿಯಲ್ ಸ್ಕೂಲ್‌ಗಳಲ್ಲಿ ಕಲಿಸಿದ್ದರು.
ಇವರ ಘನತೆಗೆ ತಕ್ಕಂತೆ ಕಲಿತು ವಿದೇಶದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದರು. ಅಲ್ಲಿಯ ಸಿಟಿಜನ್‌ಶಿಪ್ಪನ್ನೂ ಪಡೆದಿದ್ದರು.
ಊರಿಗೆ ಏನು ಭಾರತಕ್ಕೇ ಬರದೆ ಏಳೆಂಟು ವರ್ಷಗಳಾದವು. ಇವರು ಇಲ್ಲಿ ಮಕ್ಕಳ ದೊಡ್ಡಸ್ತಿಕೆ ಬಗ್ಗೆ ಹೇಳುತ್ತಿದ್ದರೂ ಮಕ್ಕಳ ಮತ್ತು ಮೊಮ್ಮಕ್ಕಳ ನೆನಪಿನಿಂದ ಒಳಗೊಳಗೇ ಕೊರಗುತ್ತಿದ್ದರು. ಕೆಲವೊಮ್ಮೆ ಮನಸ್ಸು ತಡೆಯಲಾರದೆ ಕಾಲ್ ಮಾಡಿದರೆ ಸಮಯಾಭಾವದ ನೆಪದಿಂದ ಒಂದೆರಡು ವಾಕ್ಯಗಳಲ್ಲಿ ಸಂಭಾಷಣೆ ಮುಗಿಸುತ್ತಿದ್ದರು.
ಹಣ ಕಳಿಸಬೇಕೇ…, ಏನಾದರೂ ಅವಶ್ಯಕ ವಸ್ತುಗಳು ಬೇಕೇ ಕೇಳುವುದರಲ್ಲಿ ಅವರ ಕರ್ತವ್ಯ ಮುಗಿಯುತ್ತಿತ್ತು.
ಒಂದೆರಡು ಸಲ ಜೊತೆಗಿರುವ ಆಸೆ ವ್ಯಕ್ತ ಪಡಿಸಿದಾಗ “ನಿಮ್ಮಿಷ್ಟದಂತೆ ಕಲಿತಿದ್ದೇವೆ. ಒಳ್ಳೆಯ ಹುದ್ದೆಯಲ್ಲಿದ್ದೇವೆ. ನಿಮ್ಮ ಜೊತೆ ಏನು ಮಾಡುವುದು. ನಮಗೆ ನಮ್ಮದೇ ಕೆಲಸ ಮತ್ತು ಮಕ್ಕಳ ಜವಾಬ್ದಾರಿಯಿಂದ ಸಮಯವೇ ಸಿಕ್ಕುವುದಿಲ್ಲ.” ಎನ್ನುತ್ತಿದ್ದರು.
ಹೇಗೂ ಅವರಿಗೆ ಹೆತ್ತವರು ಪ್ರೀತಿಯನ್ನು ಕೇಳಿದ್ದನ್ನು ಕೊಡುವುದರಲ್ಲಿ ತೋರಿಸಿದ್ದರು. ಇವತ್ತು ಅವರೂ ಅದನ್ನೇ ಮಾಡುತ್ತಿದ್ದಾರೆ.
ಇವರನ್ನು ಭೇಟಿಯಾದಾಗ ನನ್ನ ಕಣ್ಣುಗಳ ಮುಂದೆ ಎಂದಿನಂತೆ ನೆನಪಿನ ಹಳಿಯಲ್ಲಿ ಸರಿಯುತ್ತಿರುವ ಜೋಗಿಯೊಂದು ಮುಂದೆ ಹೋಗುವ ಮುನ್ನ ಒಂದೆರಡು ನಿಮಿಷ ನಿಂತಿತು.
ನಮ್ಮ ಕುಟುಂಬದ ಮಿತ್ರರ ಮಗನನ್ನು ಒಳ್ಳೆಯ ಬೋರ್ಡಿಂಗ್ ಶಾಲೆಗೆ ಎಂಟನೇ ತರಗತಿಗೆ ಹಾಕಿದರು. ಅವನಿಗೆ ಇಷ್ಟವಾಗಲಿಲ್ಲ. ಅಪ್ಪ ಅಮ್ಮನಿಗೆ ಅನಿವಾರ್ಯತೆ. ಇಬ್ಬರೂ ವರ್ಗಾವಣೆಯಾಗುವ ಉನ್ನತ ಉದ್ಯೋಗದಲ್ಲಿದ್ದರು.. ಎರಡು ಮೂರು ವರ್ಷಗಳಿಗೊಮ್ಮೆ ವರ್ಗವಾಗುತ್ತಿತ್ತು. ಹಳ್ಳಿಗಳಲ್ಲಿ ಏಕೋಪಾಧ್ಯಾಯ ಶಾಲೆಗಳು. ಇಷ್ಟವಾಗಲಿಲ್ಲ. ಮಕ್ಕಳಿಗಾಗಿ ಎರಡೆರಡು ಕಡೆ ಮನೆ ಮಾಡಲು ವಯಸ್ಸಾದ ಅಪ್ಪ,ಅಮ್ಮ. ಈ ರೀತಿಯ ಅನಿವಾರ್ಯತೆ ಅವರಿಗೆ.
ಹಾಕಿದ್ದಕ್ಕೆ ಹತ್ತನೇ ತರಗತಿವರೆಗೆ ಓದು… ಆಮೇಲೆ ನಿನಗಿಷ್ಟವಿಲ್ಲದಿದ್ದರೆ ಬೇಡಾ. ಬಸ್ಸಲ್ಲಿ ಓಡಾಡುವಷ್ಟು ದೊಡ್ಡವನಾಗಿರುತ್ತಿ … ಎಂದು ಹೇಳಿ ಮನೆಯ ಸಮಸ್ಯೆಗಳನ್ನು ಅರ್ಥವಾಗುವಂತೆ ಹೇಳಿ ಒಪ್ಪಿಸಿದೆವು. ಇಷ್ಟವಿಲ್ಲದಿದ್ದರೂ ಒಪ್ಪಿದ.
ಅಪ್ಪ ಅಮ್ಮನ ಹತ್ತಿರ ಮಾತ್ರ ಹಿಂದಿನಂತೆ ವರ್ತಿಸುತ್ತಿರಲಿಲ್ಲ.
ತಾಯಿ ತಮ್ಮ ವೇದನೆಯನ್ನು ನನ್ನ ಹತ್ತಿರ ಹೇಳಿಕೊಂಡರೆ, ತಂದೆ ನಮ್ಮ ಮನೆಯವರ ಹತ್ತಿರ ಹೇಳಿಕೊಳ್ಳುತ್ತಿದ್ದರು. ಹತ್ತನೇ ತರಗತಿಯಾದ ನಂತರ ಜೊತೆಯಲ್ಲಿಯೇ ಇಟ್ಟುಕೊಂಡರು. ಕಾಲೇಜು ಇರುವ ಊರಿಗೇ ವರ್ಗವಾಗಿದ್ದರಿಂದ ಸಮಸ್ಯೆಯೂ ಆಗಲಿಲ್ಲ.
ಪಿ.ಯು.ಸಿ ಆದ ಅಪ್ಪ ಅಮ್ಮನಿಗೆ ಎಲ್ಲರಂತೆ ಇಂಜಿನಿಯರ್ ಆಗಬೇಕೆಂಬ ಆಸೆ ಇತ್ತು. ಆದರೆ ಹಾಸ್ಟೆಲ್ಲಿಗೆ ಹಾಕಿದರ ಪರಿಣಾಮ ಅವರ ಮೇಲೂ ಇತ್ತು. ಎಂದಿನಂತೆ ನಮ್ಮ ಹತ್ತಿರ ಅಲವತ್ತುಕೊಂಡರು. ಅವನಿಗೆ ಇಷ್ಟವಿದ್ದದ್ದನ್ನೇ ಆಯ್ಕೆ ಮಾಡಿಕೊಂಡಿದ್ದಷ್ಟೇ ಅಲ್ಲ… ಅವನಿಗಾಗಿ ಒಬ್ಬರು ಕೆಲಸದಿಂದ ನಿವೃತ್ತಿ ಹೊಂದಿ ಪುಟ್ಟ ಮನೆ ಮಾಡುವ ಯೋಚನೆಯನ್ನೂ ಹಾಕಿದರು.
ಅವರ ಮಗನೇ “ಬೇಡಾ…ಹಾಸ್ಟೆಲಲ್ಲಿ ಇದ್ದು ಓದುತ್ತೇನೆ.” ಎಂದ.
ಒಬ್ಬನೇ ಸಿಕ್ಕಿದಾಗ ನಾನು ಕೇಳಿದೆ.. “ಅವತ್ತು ಅಷ್ಟು ಗಲಾಟೆ ಮಾಡಿದ್ದಿ…ಅಲ್ವೇನೋ…? ಯಾಕೆ ಈ ಬದಲಾವಣೆ …ಏನಾಯ್ತು? ಆಗಿನ ಸಿಟ್ಟು ಇನ್ನೂ ಹೋಗಿಲ್ವಾ…” ಅಂದೆ.
ಅವನ ಕಣ್ಣುಗಳಲ್ಲಿ ನೀರು ಬಂತು. ಸಮಾಧಾನ ಮಾಡಿದೆ. “ಆಂಟಿ ನನಗೆ ಆಗ ನಿಜವಾಗಿಯೂ ಬುದ್ಧಿ ಕೆಟ್ಟಿತ್ತು. ನನ್ನನ್ನು ಬಿಡಲಾರದೆ ಅಪ್ಪ, ಅಮ್ಮ ಬಿಟ್ಟಿದ್ದರೆಂಬ ಕಲ್ಪನೆಯೇ ಇರಲಿಲ್ಲ. ಅಪ್ಪ ಅಥವಾ ಅಮ್ಮ ಅಲ್ಲಿಗೆ ಆಗಾಗ ಬರುತ್ತಿದ್ದರು… ಒಂದು ವರ್ಷ ಸಿಟ್ಟಲ್ಲಿ ಮತ್ತೆ ಎರಡು ವರ್ಷ ಆ ಸಿಟ್ಟು ಮಾಡಿಕೊಂಡ ಮುಜುಗರಕ್ಕೆ… ಅವರ ಬಳಿ ಹಿಂದಿನಂತಿರಲು ನನಗೆ ಗಿಲ್ಟ್ ಅನಿಸಿತು.
ನನಗೆ ಒಂದು ಒಳ್ಳೆಯ ಬೋರ್ಡಿಂಗ್ ಸ್ಕೂಲಲ್ಲಿ ಬಿಟ್ಟ ಕಾರಣ ಏನೆಲ್ಲಾ ಸಿಕ್ಕಿತು. ನನಗೆ ಈಜು ಕಲಿಯಲು ಆ ಊರಲ್ಲಿ ಅವಕಾಶವಿರಲಿಲ್ಲ. ತಬ್ಲಾ ನನಗೆ ಕಲಿಯುವ ಆಸೆ ಟಿವಿಯಲ್ಲಿ ನೋಡುವಾಗ ಆಗುತಿತ್ತು. ಕೊನೆಯ ಪಕ್ಷ ಯಾರಾದರೂ ಪ್ರತ್ಯಕ್ಷವಾಗಿ ನೋಡುವ ಅವಕಾಶ ಕೂಡಾ ಇರಲಿಲ್ಲ. ಚೆಸ್ ಅಪ್ಪ ಕಲಿಸಿದ್ದಷ್ಟೇ ಇತ್ತು. ಮುಂದುವರಿಯಲು ಅವಕಾಶವಿರಲಿಲ್ಲ. ನನ್ನ ಪುಸ್ತಕಗಳನ್ನು ಓದುವ ಹುಚ್ಚಿಗೆ ಸಾಕಷ್ಟು ಪುಸ್ತಕಗಳು ಒದಗುತ್ತಿರಲಿಲ್ಲ. ಅದೆಲ್ಲವೂ ನನಗೆ ಅಲ್ಲಿ ಕಲಿಯಲು ಅವಕಾಶವೂ ಸಿಕ್ಕಿತು. ನನ್ನನ್ನು ಹೆತ್ತವರು ನನ್ನ ಆಸಕ್ತಿಗಳಿಗೆ ನೀರೆರೆದು ಪೋಷಿಸಲು ಅನುಕೂಲ ಇರುವ ಸ್ಕೂಲನ್ನೇ ಹುಡುಕಿದ್ದರು.. ಅದು ನನ್ನ ಪೂರ್ವಾಗ್ರಹಪೀಡಿತ ಮಂಡೆಯ ಒಳಗೆ ಹೊಕ್ಕಲು ಒಂದು ವರ್ಷವಾಯಿತು.
ಈಗ ಪಿಯುಸಿಗಾಗಿ ಎರಡು ವರ್ಷ ಜೊತೆಯಲ್ಲಿದ್ದೆನಲ್ಲಾ… ಇಲ್ಲಿಯ ಸಮಸ್ಯೆಗಳೂ ಅರ್ಥವಾದವು. ಅಜ್ಜಿಗೆ, ಅಜ್ಜನಿಗೆ ನನ್ನ ಅಪ್ಪ, ಅಮ್ಮನ ಆಸರೆ ಇಲ್ಲದಿದ್ದರೆ ಸಾಧ್ಯವೇ ಇಲ್ಲ. ಆಗಾಗ ಟ್ರೀಟ್‌ಮೆಂಟ್‌ಗೆ ಕರೆದೊಯ್ಯುವುದು, ಅವರಿಗೆ ಆಸೆಗಳನ್ನು ಪೂರೈಸುವುದು ಅವರ ಕರ್ತವ್ಯ ಅಲ್ಲವಾ… ಆಂಟಿ..
ಅವರಿಬ್ಬರೂ ಜೊತೆಯಲ್ಲಿದ್ದರೆ ಮಾತ್ರ ಸಾಧ್ಯ.
ನಾನೇನೂ ಇನ್ನೂ ಅಮ್ಮನ ಪಕ್ಕ ಮಲಗುವ ಕೂಸಲ್ಲ. ಮನೆಯಲ್ಲಿಯೇ ಇದ್ದರೂ… ನನಗೆ ತುತ್ತುಣಿಸಬೇಕಿಲ್ಲ, ಲಾಲಿ ಹಾಡಿ ಮಲಗಿಸಬೇಕಿಲ್ಲ. ರಜೆಯಲ್ಲಿ ಬಂದಾಗ ನನಗೆ ಬೇಕಾದ ತಿಂಡಿಗಳನ್ನು, ಅಡುಗೆಯನ್ನು ಮಾಡಿಕೊಡುತ್ತಾರೆ. ಕೈತುತ್ತು ಕೊಡುತ್ತಾರೆ. ಹಾಗಾಗಿ. ನನ್ನ ಭವಿಷ್ಯದ ಬಗ್ಗೆ ಅವರಷ್ಟು ಚಿಂತೆ ಮಾಡುವವರು, ಪ್ಲಾನ್ ಹಾಕುವವರು ಯಾರಿದ್ದಾರೆ …ಆಂಟಿ…” ಎಂದು ನನ್ನನ್ನೇ ಪ್ರಶ್ನಿಸಿದ ಭೂಪ.
ನಾನು ನಕ್ಕು .. ಹೌದೆಂದು… ಹೇಳುತ್ತಾ ತಲೆ ಸವರಿ ಅವನಿಗೆ ಸಾಥ್ ಕೊಟ್ಟೆ…
ಇವತ್ತು ಆ ಹುಡುಗ ಒಂದು ಸರ್ಕಾರದ ಕಚೇರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ಅಪ್ಪ, ಅಮ್ಮ ಆರಿಸಿದ ಹುಡುಗಿಯನ್ನೇ ಮದುವೆ ಮಾಡಿಕೊಂಡಿದ್ದಾನೆ. ಅವನ ಮಕ್ಕಳನ್ನು ಓದಿಗಾಗಿ ದೂರ ಕಳಿಸುವ ಅನಿವಾರ್ಯತೆ ಇಲ್ಲ. ಎಲ್ಲವೂ ಅವನಿರುವ ನಗರದಲ್ಲೇ ಕಲಿಯುವ ಅವಕಾಶ ಇದೆ.
ನಾವಿಬ್ಬರೂ ಅವರಲ್ಲಿಗೆ ಹೋದಾಗಲೋ ಅಥವಾ ಅವರು ನಮ್ಮಲ್ಲಿಗೆ ಬಂದಾಗಲೋ ಹಳೆಯ ದಿನಗಳನ್ನು ಮೆಲುಕು ಹಾಕುವಾಗ “ಅವನು ತಮಗಿಷ್ಟವಿದ್ದದ್ದನ್ನು ಓದಲಿಲ್ಲ. ನಮ್ಮ ನೆಂಟರ, ಸ್ನೇಹಿತರ ಮಕ್ಕಳು ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ..” ಎಂದು ಮೂಲೆಯಲ್ಲಿರುವ ನೋವನ್ನು ಹಂಚಿಕೊಂಡರು.
ಅದಕ್ಕೆ ನಾವು ಹೇಳಿದೆವು… “ಅವನು ನಿಮ್ಮ ಜೊತೆ ಇರುವ ಅಪೇಕ್ಷೆಯಿಂದಲೇ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಿದ್ದ. ಒಮ್ಮೆ ನೀವು ಅವನ ಇಚ್ಛೆಗೆ ವಿರುದ್ಧವಾಗಿ ನಡೆದಿರಿ… ಈಗ ಅವನು ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದಿದ್ದಾನೆ.. ಆದರೆ ಇದರ ಫಲಿತಾಂಶ ಒಳ್ಳೆಯದೇ ಆಯಿತಲ್ಲಾ.., ನಿಮ್ಮ ಅಪೇಕ್ಷೆಯಂತೆ ಓದಿ ವಿದೇಶಕ್ಕೆ ಹೋಗಿ ನಿಮ್ಮ ಈ ಮುದಿತನದಲ್ಲಿ ಜೊತೆಗೆ ಯಾರು ಇರುತ್ತಿದ್ದರು. ಅಲ್ಲಿಯೇ ಮದುವೆಯನ್ನು ಮಾಡಿಕೊಳ್ಳುತ್ತಿದ್ದ… ಈಗ ಸೊಸೆ, ಮೊಮ್ಮಕ್ಕಳು ಯಾರೂ ಇಲ್ಲದ ಅನಾಥಪ್ರಜ್ಞೆ ನಿಮ್ಮನ್ನು ಕಾಡುತ್ತಿರಲಿಲ್ಲವೇ…? ಅಂದು ನೀವು ಬೋರ್ಡಿಂಗ್ ಸ್ಕೂಲ್‌ಗೆ ಹಾಕಿದ ಫಲ ಅವನಿಗೆ ಮನೆ, ಮನೆಮಂದಿ ಎಲ್ಲರ ಬೆಲೆ ಗೊತ್ತಾಯಿತು… ಎಲ್ಲವೂ ಒಳ್ಳೆಯದೇ ಆಯಿತಲ್ಲಾ..? ನೀವು ಅದೃಷ್ಟವಂತರು…” ಎಂದು ಹಂತಹಂತವಾಗಿ ಹೇಳುವಾಗ…ಅವರಿಗೆ ಹೌದು ಎನಿಸಿತು.
ಹಾಗೆಂದು ಎಲ್ಲರ ಜೀವನದಲ್ಲೂ ಹೀಗೇ ನಡೆಯಲಾರದು… ಉತ್ತಮ ಹುದ್ದೆಯಲ್ಲಿರುವ ಮಕ್ಕಳು ತಮ್ಮ ಹೆತ್ತವರನ್ನು,ಅನುಕೂಲವಿರುವ, ಸಾಕಷ್ಟು ಹಣ ಸುರಿದು, ವೃದ್ದಾಶ್ರಮದಲ್ಲಿ ಆ ತರಹದ ಮುದಿ ದಂಪತಿಗಳನ್ನು ನೋಡಿದಾಗೆಲ್ಲ….
ನನ್ನ ನೆನಪಿನ ಹಳಿಯಲ್ಲಿ ಧಡಕ್ ಧಡಕ್ ಎಂದು ಈ ಬೋಗಿಯು … ಸರಿದು ಹೋಯಿತು…. ಇದರ ಬಣ್ಣವೂ ಮಾಸಿಲ್ಲ, ನಟ್ಟು ಬೋಲ್ಟುಗಳೂ ಸರಿಯಾಗಿವೆ… ಆಗಾಗ ಹಳಿಯಲ್ಲಿ ಬಂದು ಸರಿದು ಹೋಗುತ್ತವೆ…
ವೀಣಾ ಶಾನುಭೋಗ್
Preservation by Sumanth Shanbhogue

Leave a comment