For English Click Here
ನಮ್ಮ ಮನೆಯಲ್ಲಿ ಇವತ್ತು ಹಲಸಿನ ಕಾಯಿ ಸೋಂಟೆ (ಚಿಪ್ಸ್ , ಕರೋ) ಮಾಡ್ತಾ ಇರುವಾಗ ನನ್ನ ನೆನಪಿನ ಹಳಿಯಲ್ಲೊಂದು ಜೋಗಿ ಧಡಕ್… ಧಡಕ್… ಎಂದು ಬಂತು…
ನಮ್ಮ ಪಕ್ಕದ ಮನೆಗೆ ನವದಂಪತಿಗಳು ವಾಸಕ್ಕೆ ಬಂದಿದ್ದರು. ಇಬ್ಬರೂ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರು… ಈಡುಜೋಡು ಚೆನ್ನಾಗಿತ್ತು. ಹುಡುಗಿಗೆ ಅಡುಗೆ ಹೇಳಿಕೊಳ್ಳುವಷ್ಟು ಬರುತ್ತಿರಲಿಲ್ಲ.. ಅನ್ನ ಅದರ ಜೊತೆ ಏನಾದರೂ ಒಂದು ಸಾರೋ ಸಾಂಬಾರೋ ಮಾಡುತ್ತಿದ್ದಳು.. ಮತ್ತೆ ಏನು ಮಾಡಬೇಕಾದರೂ ನಮ್ಮ ಮನೆಗೆ ಬಂದು ಕೇಳಿಕೊಂಡು ಮಾಡುತ್ತಿದ್ದಳು. ಹುಡುಗನೂ ಏನೂ ಚೊರೆ ಮಾಡ್ತಿರಲಿಲ್ಲ. ಆದರೆ ಅವಳಿಗೇ ಕಲಿಯುವ ಹುಮ್ಮಸ್ಸು ಇತ್ತು … ಪಾಪ..
ನಾವೂ ಏನು ಅಡುಗೆ ಮಾಡ್ತೇವೋ ಅದನ್ನು ಅವರಿಗೆ ಕೊಡ್ತಿದ್ದೆವು. ಅವಳಿಗೋ ಅವನಿಗೆ ಇಷ್ಟವಾದ ಖಾದ್ಯವನ್ನು ಮತ್ತೆ ನಮ್ಮ ಹತ್ತಿರ ಕೇಳಿ ಮಾಡುತ್ತಿದ್ದಳು…
ಒಂದು ದಿನ “ ಮಾಯಿ ಇವತ್ತು ಊಟಕ್ಕೆ ಏನು ಮಾಡ್ತೀರಿ.. ನನಗೆ ಏನು ಮಾಡೋದು ಅಂತ ಗೊತ್ತಾಗ್ತಿಲ್ಲ.” ಎಂದಳು.
ನನ್ನ ಸೊಸೆ “ನಮಗೆ ಇವತ್ತು ದಾಳಿ ತೊವ್ವೆ ಮತ್ತು ಅಲಸಂದೆ ಪಲ್ಯ, ಜೊತೆಗೆ ಕೊಳಂಬೆ (ಉಪ್ಪಿಗೆ ಹಾಕಿದ ಬಲಿತ ಮಾವಿನ ಕಾಯಿ) ಗೊಜ್ಜು.” ಎಂದಳು.
ಅವಳು ಆಶ್ಚರ್ಯದಿಂದ “ಏನು ಕೊಳಂಬೆ ಗೊಜ್ಜು…ಹಾಗಂದ್ರೆ..”
ನನ್ನ ಸೊಸೆ “ಕೊಳಂಬೋ ಅಂದ್ರೆ ಗೊತ್ತಿಲ್ವೇನೆ.” ಎಂದು ಕಿಸಕ್ಕನೆ ನಕ್ಕಳು.
ಅವಳು “ನನಗೆ ಒಂದು ಕೊಳಂಬೋ ಅಂದ್ರೆ ಇಡ್ಲಿ ಜೊತೆ ಮಾಡ್ತಾರಲ್ಲಾ.. ಆ ಕೊಳಂಬೋ ಗೊತ್ತು.. ಇನ್ನೊಂದು ಮನೆಯಲ್ಲಿ ಮದುವೆ, ಮುಂಜಿ ಇರುವಾಗ ಮುನ್ನಾದಿನ ಕೊಳಂಬೋ ಜವಣ (ನಮ್ಮಲ್ಲಿ ಮದುವೆ, ಉಪನಯನ ಹೀಗೆ ವಿಶೇಷ ಸಮಾರಂಭಗಳ ಮುನ್ನಾ ನೆಂಟರಿಷ್ಟರಿಗೆಂದು ಸಾರು ತೊವ್ವೆ ಮಾಡದೆ ಸಾಂಬಾರು ಮಾಡಿ ಏನಾದರೂ ಒಂದೆರಡು ವಿಶೇಷ ಅಪರೂಪದ ಕೊಂಕಣಿ ಅಡುಗೆ, ಜೊತೆಗೆ ಸ್ವಲ್ಪ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಂಟರಿಷ್ಟರು ಯಾವುದೇ ಪೂರ್ವಾಭ್ಯಾಸ ಇಲ್ಲದೆ ಗಮ್ಮತ್ತು ಮಾಡ್ತಾರೆ.. ಇದಕ್ಕೆ ಕೊಳಂಬೋ ಜವಣ ಅಂತಾರೆ..) ಗೊತ್ತುಂಟು. ಮತ್ತೊಂದು ಗೊತ್ತಿರುವುದು.. ಶ್ರೀಲಂಕಾದ ರಾಜಧಾನಿ ಕೊಲಂಬೋ.. ಇದರಲ್ಲಿ ಯಾವುದರ ಗೊಜ್ಜು ನೀವು ಮಾಡಿದ್ದು..” ಎಂದಳು…ನಮ್ಮ ನವವಧು..
ನನ್ನ ಸೊಸೆ ಮುಸಿಮುಸಿ ನಗ್ತಾ ಇದ್ದವಳು… ಈಗ ಹಂಚಿನ ಮನೆಯಾದರೆ ಖಂಡಿತ ಹಂಚು ಹಾರಿಹೋಗುತ್ತಿತ್ತೋ ಏನೋ.. ಅಷ್ಟು ಜೋರಾಗಿ ನಗುತ್ತಿದ್ದಳು.
ಮತ್ತೆ ನಾನು ಉಪ್ಪಿಗೆ ಹಾಕಿದ ಮಾವಿನಕಾಯಿ ತೋರಿಸಿ ಅವುಗಳಿಂದ ಮಾಡುವ ಗಶಿ, ಗೊಜ್ಜು, ಚಟ್ನಿಗಳನ್ನು ಮಾಡುವ ಬಗೆ ವಿವರಿಸಿ ಒಂದು ಖೋಳಾಂಬೋ ಕೊಟ್ಟು “ಇವತ್ತು ಇದರಿಂದಲೇ ಏನು ಬೇಕೋ ಅದನ್ನು ಮಾಡು..” ಎಂದೆ.
ಹೀಗೇ ಮತ್ತೊಂದು ದಿನ ಹಲಸಿನಕಾಯಿ ಚಿಪ್ಸ್ ಮಾಡಿದ್ದೆವು. ಅವಳಿಗೂ ಒಂದು ಪಾಲು ಕೊಟ್ಟೆವು. ಒಂದೆರಡು ದಿನದ ನಂತರ ಅವಳು ಒಂದು ಚೀಲ ತೆಗೆದುಕೊಂಡು ಬಂದಳು. “ಮಾಯಿ…ಮೊನ್ನೆ ನೀವು ಹಲಸಿನಕಾಯಿ ಚಿಪ್ಸ್ ಕೊಟ್ಟಿದ್ದೀರಲ್ಲ.. ತುಂಬಾ ಚೆನ್ನಾಗಿತ್ತು. ನನಗೂ ಕಲಿಸ್ತೀರಾ..” ಎಂದಳು.
ನಾನು “ಆಯ್ತಮ್ಮಾ.. ಮೊನ್ನೆ ಮಾಡ್ತಾ ನೀನು ಇರಲಿಲ್ಲ.. ಇಲ್ಲದಿದ್ದರೆ ಕರೀತಿದ್ದೆ. ಇರ್ಲಿ ಬಿಡು.. ಇನ್ನೊಂದು ದಿನ ಮಾಡ್ತಾ ಕರೀತೇನೆ.” ಎಂದೆ.
ಆ ಹುಡುಗಿ “ಮಾಯಿ…. ನಾನು ತಂದಿದ್ದೇನೆ… ಇವರ ಆಫೀಸ್‌ನವರು ಒಬ್ಬರು ಒಂದು ಪೀಸ್ ತಂದುಕೊಟ್ಟಿದ್ದರು… ನಾನೂ ಕ್ಲೀನ್ ಮಾಡಿ ತಂದಿದ್ದೇನೆ. ಇಂಗು, ಉಪ್ಪು, ಎಣ್ಣೆಯನ್ನೂ ತಂದಿದ್ದೇನೆ. ಅದು ಉಪ್ಪುಉಪ್ಪು ಆಗಿರುತ್ತಲ್ವಾ. ಇಂಗಿನ ಪರಿಮಳವೂ ಬರ್ತದೆ… ಅದು ಹೇಗೆ? ಏನು ಮಾಡ್ಬೇಕು.. ನಾನು ಇಲ್ಲೇ ಮಾಡ್ತೇನೆ…ಪ್ಲೀ……ಸ್” ಎಂದಳು.
ನಾನು ಮಾತಾಡ್ತಾ ಇತ್ತ ನೋಡದೆ ಒಲೆ ಮುಂದೆ ನನ್ನ ಕೆಲಸ ಮಾಡ್ತಾ “ಎಲ್ಲದರಿಂದಲೂ ಚಿಪ್ಸ್ ಮಾಡಾಕಾಗೊಲ್ಲ. ಇವತ್ತೇ ತೆಗೆದ ಹದ ಬಲಿತ ಕಾಯಿಯಾಗಬೇಕು. ಅವರು ಅದನ್ನು ಯಾವಾಗ ತೆಗೆದದ್ದೋ ಏನೋ…” ಎಂದು ಭಾಷಣ ಮಾಡ್ತಾ ಇರಬೇಕಾದರೆ ನನ್ನ ಸೊಸೆ “ಹ್ಹಾ…ಹ್ಹಾ..” ಎಂದು ಜೋರಾಗಿ ನಗತೊಡಗಿದಳು.
ಆ ಹುಡುಗಿ “ಅಕ್ಕಾ…ಏನಾಯ್ತು..ಯಾಕೆ ನಗ್ತೀರಾ?”ಎಂದು ಗಾಬರಿಯಿಂದ ಕೇಳುವಾಗ ನಾನೂ ತಿರುಗಿ ನೋಡಿದರೆ… ನನ್ನ ಸೊಸೆ ಮಾತನಾಡಲೂ ಆಗದಷ್ಟು ಬಿಡುವಿಲ್ಲದೆ ನಗುತ್ತಿದ್ದಾಳೆ.. ಊಟದ ಮೇಜಿನ ಮೇಲೆ “ಹಲಸಿನ ಚಾರೆ”ಯ… ಪುಟ್ಟ ರಾಶಿ ಬಿದ್ದಿದೆ…
ಅವಳು ಆ ಸಪೂರ ಸಪೂರ ಚಾರೆಯನ್ನು ನೋಡಿ ಅದರಿಂದಲೇ ಸೋಂಟೆ ಮಾಡುವುದೆಂದು ಅಂದುಕೊಂಡಿದ್ದಳಂತೆ.. ಪಾಪ…
ಮರುದಿನವೇ ನಮ್ಮ ಮರದಿಂದ ಕಾಯಿ ತೆಗಿಸಿ ಅವಳಿಗೂ ಕಲಿಸಿಕೊಟ್ಟೆವು…
ಇಂದು ಮತ್ತೆ.. ಯಾವುದೇ ನಟ್ಟು ಬೋಲ್ಟು ಕಳಚದ…. ಬಣ್ಣವೂ ಮಾಸದ ಜೋಗಿಯೊಂದು.. ಧಡಕ್..ಧಡಕ್… ಎಂದು ಸರಿದು ಹೋಯಿತು…
ವೀಣಾ ಶಾನುಭೋಗ್
Preservation by Sumanth Shanbhogue for Shanbhogue Publications

Leave a comment