ಬೋಗಿ-12

For English Click Here


ನನ್ನ ಮೊಮ್ಮಗಳಿಗೆ ತುಂಬಾ ಹೋಂವರ್ಕ್ ಕೊಟ್ಟಿದ್ದರು. ತುಂಬಾ ಮಳೆಯಿದ್ದ ಕಾರಣ ಹೊರಗೆ ಆಡಲೂ ಹೋಗದೆ… ಟಿ.ವಿ.ಯನ್ನೂ ನೋಡದೆ ಮಾಡ್ತಾ ಇದ್ದಳು.. ಹತ್ತು ಗಂಟೆಯವರೆಗೆ…ಮತ್ತೆ “ಅನಮಾ.. ತುಂಬಾ ಮಳೆಯಿದೆ.. ನಾಳೆ ಹೇಗೂ ರಜೆ ಕೊಡಬಹುದು…ಕೊಡದಿದ್ದರೂ ನಮ್ಮ ಮ್ಯಾಥ್ಸ್ ಟೀಚರ್.. ಬರುವ ದಾರಿಯಲ್ಲಿರುವ.. ಸಂಕ ಬೇರೆ ಮುಳುಗಿದೆಯಂತೆ… ಹಾಗಾಗಿ ಅವರಿಗೆ ಬರಲಾಗುವುದಿಲ್ಲ… ಪ್ಲೀಸ್ …ಪ್ಲೀಸ್.. ನಾನು ನಾಳೆ ಮಾಡ್ತೇನೆ.. ಪ್ಲೀಸ್…” ಎಂದಳು.


“ಈಗ ಬೇಜಾರಾದ್ರೆ ನಿದ್ದೆ ಬಂದ್ರೆ ಮಲಗು…ಬೆಳಿಗೆ ನಾನು ಏಳುವಾಗಲೇ ಎದ್ದು ಮಾಡು.. ಬಾಕಿ ಇಡುವ ಹಾಗೆ ಇಲ್ಲ.”ಎಂದೆ. ಒಪ್ಪಿಕೊಂಡು ಬಲು ಬೇಸರದಲ್ಲೇ ಹಾಗೆಯೇ ಮಾಡಿದಳು.

ಮರುದಿನವೂ ತುಂಬಾ ಮಳೆಯಿತ್ತು. ಆದರೆ ರಜೆಯನ್ನೂ ಕೊಡಲಿಲ್ಲ.

ಅವಳ ಟೀಚರ್ ಮನೆಗೆ ಹೋಗದೆ ಬಂಧುಗಳ ಮನೆಯಲ್ಲಿ ನಿಂತು ಶಾಲೆಗೂ ಬಂದರು. ಮನೆಗೆ ಬಂದವಳೇ ನನಗೆ “ಥ್ಯಾಂಕ್ಸ್ … ಅನಮಾ.. ನೀನು ಹೇಳದಿದ್ದರೆ ನಾನು ಮಾಡುತ್ತಿರಲಿಲ್ಲ… ಎಲ್ಲರ ಮುಂದೆ ಅವಮಾನ ಆಗಿತ್ತು..” ಎಂದಳು..


ನನ್ನ “ನೆನಪಿನ ಹಳಿಯಲ್ಲಿ ಬೋಗಿಯೊಂದು ಧಡಕ್.. ಧಡಕ್.. ಎಂದು ಬಂತು.. ನಾನು ಆಗ ಎಂಟನೇ ತರಗತಿಯಲ್ಲಿ ಇದ್ದೆ.

ನಮ್ಮ ಇಂಗ್ಲಿಷ್ ಸರ್.. ಎಂ.ರಾಜಗೋಪಾಲ್ (ರಾಜಣ್ಣ) ಅವರು ಇಂಗ್ಲಿಷ್ ಪಾಠ (King Lear)ವನ್ನು ಬರೆದು ತರಲು ಹೇಳಿದ್ದರು. ಆ ದಿನ ಮಧ್ಯಾಹ್ನ ಪ್ರಾರಂಭ ಆದ ಮಳೆ ನಿಲ್ಲದೆ ನಂದಾವರ ಸಂಕದ ಮೇಲೆ ನೀರು ಬರುವ ಸಾಧ್ಯತೆ ಇತ್ತು. ಅಲ್ಲಿ ನೀರು ಬಂದರೆ ಆಚೆಯಿಂದ ಬರುವ ಮಕ್ಕಳ ಸಂಖ್ಯೆ ಜಾಸ್ತಿ ಇದ್ದ ಕಾರಣ ಸಾಮಾನ್ಯವಾಗಿ ಶಾಲೆಗೆ ರಜೆ ಘೋಷಿಸುತ್ತಿದ್ದರು.


ನಾನು ಮರೆತು (ಜಾಣ ಮರೆವಿನಿಂದಲೂ ಇರಬಹುದು) ಬರೆದಿರಲಿಲ್ಲ. ಶಾಲೆಗೆ ಬಂದ ಮೇಲೆ ಮಕ್ಕಳು ಕಡಿಮೆ ಇದ್ದ ಕಾರಣ ಅಂದು ಪಾಠ ಮಾಡಲಿಲ್ಲ… ಸ್ವತಂತ್ರವಾಗಿ ಓಡಾಡಲು ಬಿಟ್ಟಿದ್ದರು. ಎಲ್ಲರೂ ನೆರೆ ನೋಡುವುದೋ… ಏನಾದರೂ ಬರೆಯುವುದೋ.. ಚಿತ್ರ ಮಾಡುವುದೋ ಮಾಡುತ್ತಿದ್ದರು.


ಶಾಲೆಗೆ ಬಂದ ಮೇಲೆ ನೆನಪಾಯಿತು.. ನಾನು ಬರೆಯದೇ ಇರುವುದು.. ಅಗಲಾದರೂ ಕುಳಿತು ಬರೆಯಬಹುದಿತ್ತು.. ಆದರೆ ಯಾರೂ ಬರೆದಿರಲಿಲ್ಲ.. ಅಷ್ಟೇ ಅಲ್ಲ.. ಹೇಗೂ ರಜೆ ಕೊಡ್ತಾರೆ.. ನಾಳೆಯೊಳಗೆ ಬರೆದರಾಯ್ತು… ಎಂದು ಸಾಮೂಹಿಕವಾಗಿ ತೀರ್ಮಾನ ಮಾಡಿದ್ದೆವು…


ಅವರ ಪಿರಿಯಡ್ ಮಧ್ಯಾಹ್ನ ಇತ್ತು. ನಾವೆಲ್ಲರೂ ನೆರೆ ನೋಡುವುದರಲ್ಲೇ ಸಮಯ ಕಳೆದದ್ದಷ್ಟೇ ಅಲ್ಲ… ಹೇಗೂ ಸಂಕದ ಮೇಲೆ ನೀರು ಬರ್ತಾ ಇದೆ… ಮಧ್ಯಾಹ್ನ ರಜೆ ಕೊಡ್ತಾರೆ… ಎಂದು ಒಬ್ಬರಿಗೊಬ್ಬರು ಹೇಳಿಕೊಂಡು ನೆಮ್ಮದಿಯಿಂದ ಇದ್ದೆವು.

ಆದರೆ ನಂದಾವರ ಹಾಗೂ ಇತರ ಕಡೆಯಿಂದಲೂ ಸಂಕ, ಪಾಪು ದಾಟಿ ಬರುವ ಎಲ್ಲಾ ಮಕ್ಕಳನ್ನು ಮಧ್ಯಾಹ್ನ ನಂತರ ಮನೆಗೆ ಕಳಿಸಿದರು. ನಮಗೆ ತರಗತಿಗೆ ತೆರಳಲು ಹೇಳಿದರು.. ಅರವತ್ತು ಎಪ್ಪತ್ತು ಮಕ್ಕಳಲ್ಲಿ ಸುಮಾರು ಮೂವತ್ತೈದು ನಲವತ್ತು ಮಕ್ಕಳು ಮನೆಗೆ ಹೋಗದೆ ಉಳಿದುಕೊಂಡಿದ್ದರೆನೋ.. ನೆನಪಿಲ್ಲ.

ಅಷ್ಟೂ ಜನರಲ್ಲಿ ಒಬ್ಬರೂ ಬರೆದಿರಲಿಲ್ಲ.ಎಲ್ಲರೂ ರಜೆ ಕೊಡುತ್ತಾರೆಂಬ ಭರವಸೆಯಲ್ಲಿ ಇದ್ದರು.
“ಸರ್” ಬಂದು ವಿಚಾರಿಸಿದರು. ವಿಷಯ ತಿಳಿದು ಸುಮ್ಮನೆ ಹೊರಗೆ ಹೋದರು. ಸ್ಟಾಫ್ ರೂಮಿನಿಂದ ನಾಗರಬೆತ್ತ ತಂದು ಎಲ್ಲರಿಗೂ ಎರಡೂ ಅಂಗೈ ಮೇಲೆ ಸಾಲಾಗಿ ಒಂದೊಂದು ಪೆಟ್ಟುಕೊಟ್ಟರು. ಈಗ ಅವರಿಗೆ ಮರೆತು ಹೋಗಿದೆಯಂತೆ.. ನನಗೆ ಮಾತ್ರ ಚೆನ್ನಾಗಿ ನೆನಪಿದೆ.


ಅಂದಿನಿಂದ ನಾನು ಇಂದು ಮಾಡುವ ಕೆಲಸ ಇಂದೇ ಮಾಡಬೇಕು… ನಾಳೆಗೆ ಯಾವುದೇ ಭರವಸೆಯನ್ನು ಇಟ್ಟುಕೊಂಡು ಇಡಬಾರದೆಂಬ ಪಾಠ ಕಲಿತೆ..


ಇವತ್ತು ಮೊಮ್ಮಗಳು “ಥ್ಯಾಂಕ್ಸ್” ಹೇಳಿದೊಡನೆ ಆ ನೆನಪಿನ ಬೋಗಿಯೊಂದು ನನ್ನೆದುರು ಸರಿದು ಹೋಯಿತು. ಆದರೆ ಉಳಿದಿರುವುದು ಅಂದಿನ ಪಾಠ, ಸರ್ ಮತ್ತು ಅಂಗೈಗಳಿಗಾದ ನೋವು..


ವೀಣಾ ಶಾನುಭೋಗ್

Preservation by Sumanth Shanbhogue for Shanbhogue Publications

Leave a comment