ಬೋಗಿ-1

For English Version Click Here

ಹರಿಹರಪುರದ ಪ್ರಬೋಧಿನಿ ಗುರುಕುಲದ ಪ್ರಕೃತಿಯೇ ನಿರ್ಮಿಸಿದಂತಿರುವ ದೊಡ್ಡ ಚಪ್ಪರದಂತಿರುವ ಹಲಸಿನ ಮರ. ಈ ಮರ ದೊಡ್ಡದಾಗಿ ಅಗಲವಾಗಿ ಬೆಳೆದರೂ ಇದಕ್ಕೆ ಫಲ ಬಿಡುತ್ತಿರಲಿಲ್ಲ. ಮರ ದೊಡ್ಡದಾಗಿದೆಯಲ್ಲ ಮಕ್ಕಳಿಗೆ ಪಾಠ ಮಾಡಲು ಚೆನ್ನಾಗಿದೆ… ಎಂದು ಇದಕ್ಕೊಂದು ಕಟ್ಟೆಯನ್ನು ಕಟ್ಟಿದರು. “ವೇದವೃಕ್ಷ” ಎಂದು ನಾಮಕರಣವೂ ಆಯಿತು. (ಎಲ್ಲ ಮರಗಳಿಗೂ ಹೆಸರಿಡುವ ಪರಿಪಾಠವಿದೆ)… ವೇದ ಪಾಠವನ್ನು ಮಾಡುತ್ತಿದ್ದರು… ಗುರುಕುಲದ ಆಚಾರ್ಯರು. ಮತ್ತೆ ಈ ಮರಕ್ಕೆ ಎಷ್ಟೊಂದು ಹಣ್ಣುಗಳು ಬಿಡತೊಡಗಿದವು ಎಂದರೆ ಲೆಕ್ಕ ತಪ್ಪುವಷ್ಟು…

ಮೊನ್ನೆ (18-2-2018) ಗಂಗಾ ಸಮಾರಾಧನೆಗೆಂದು ಹೋದಾಗ ಈ ಮರದ ಕೆಳಗೆ ನನ್ನ ಹಳೆಯ ವಿದ್ಯಾರ್ಥಿಗಳು ಕುಳಿತಾಗ… ಹಳೆಯ ನೆನಪುಗಳೆಲ್ಲಾ ಮರುಕಳಿಸಿದವು. ಈ ಮರದಲ್ಲಿ ಆಡುತ್ತಿದ್ದ ಮರಕೋತಿ ಆಟ… ಕೆಲವೊಮ್ಮೆ ಬೇಡದ ತಂಟೆ ಮಾಡಿ ಅಡಗಿ ಕುಳಿತುಕೊಳ್ಳಲು ತುಂಬಾ ಉಪಯೋಗವಾಗುತ್ತಿತ್ತು.

ಹಲಸಿನ ಹಣ್ಣುಗಳಾಗುವ ಸಮಯದಲ್ಲಿ ಮಕ್ಕಳಿಗೆಲ್ಲ ಹಲಸಿನ ಹಣ್ಣನ್ನು ಹೆಚ್ಚಿ ಕೊಡುತ್ತಿದ್ದರು. ನಮ್ಮ ಹಿರಿಯ ಹುಡುಗರು ಹೆಚ್ಚುವಾಗ ಬಹಳ ಪಾಪದವರಂತೆ, ತುಂಬಾ ಒಳ್ಳೆಯವರಂತೆ ಚಿಕ್ಕಮಕ್ಕಳಿಗೆ ಉಳಿದ ಎಲ್ಲಾ ಹಣ್ಣುಗಳನ್ನು ಹಂಚಿ ಬಿಡುತ್ತಿದ್ದರು. ನನಗೂ ಕೊಡುತ್ತಿರಲಿಲ್ಲ.

“ಇರಿ… ಮಾತೃಶ್ರೀ… ನಿಮಗೆ ಮತ್ತೆ ಕೊಡುತ್ತೇವೆ” ಎನ್ನುತ್ತಿದ್ದರು. “ಎಲ್ಲಾ ಖಾಲಿಯಾಯ್ತಲ್ಲ… ನಿಮಗೇಲ್ಲೋ… ಬೇಡ್ವಾ..” ಎಂದರೆ ಮುಖಮುಖಿ ನೋಡಿ “ಕಿಸಕ್” ಎಂದು ನಗುತ್ತಿದ್ದರು.

ನಾನು ಹೋಗಿ ನಮ್ಮನೆಯವರ ಹತ್ತಿರ “ಹಿರಿಯ ವಿದ್ಯಾರ್ಥಿಗಳೆಲ್ಲಾ ಈ ಕಿರಿಯರ ಮೇಲೆ ಎಷ್ಟು ಪ್ರೀತಿ ನೋಡಿ…. ಪಾಪ. ತಮಗೆಂದು ಇಟ್ಟುಕೊಳ್ಳುವ ಆಸೆಯೇ ಇಲ್ಲ…” ಎಂದು ಹೇಳಿದೆ. ಅವರೂ ಅಣಕದ ನಗೆಯನ್ನು ನಕ್ಕು “ನೋಡ್ತಾ ಇರು…” ಎಂದರು.

ಕಿರಿಯರೆಲ್ಲರೂ ಸಾಕಷ್ಟು ತಿಂದು ಹೋದ ಮೇಲೆ, ಆಚಾರ್ಯರಿಗೆಲ್ಲ ಎತ್ತಿಟ್ಟ ಮೇಲೆ ಕೊನೆಗೆ ಅಡಗಿಸಿಟ್ಟ ಹಣ್ಣುಗಳನ್ನು ತಂದು ಹೆಚ್ಚುತ್ತಿದ್ದರು. ಅದನ್ನು ಹಿರಿಯ ವಿದ್ಯಾರ್ಥಿಗಳು ತಿನ್ನುತ್ತಿದ್ದರು. ನನಗೂ ಕೊಡುತ್ತಿದ್ದರು. ಮೊದಲ ಸಲ ಯಾಕೆಂದು ಗೊತ್ತಾಗಿರಲಿಲ್ಲ. ಮತ್ತೆರಡು ಸಲ ಇದೇ ಕ್ರಮ ಮುಂದುವರಿದಾಗ ಗೊತ್ತಾಯಿತು… ಅಡಗಿಸಿಡುವ ಹಣ್ಣು ಈ “ವೇದವೃಕ್ಷ”ದ ಹಲಸಿನ ಹಣ್ಣು. ಪ್ರತಿವರ್ಷ ಇದು ಯಾರು ಹಿರಿಯ ವಿದ್ಯಾರ್ಥಿಗಳಿರುತ್ತಾರೋ ಅವರ ಕ್ರಮ ಹೀಗೆಯೇ ಅಂತೆ… ಇದರಷ್ಟು ರುಚಿಯಾದ, ಸಿಹಿಯಾದ ನೋಡಲು ಆಕರ್ಷಕವಾದ ಹಣ್ಣುಗಳನ್ನು ಮತ್ತೆಂದೂ… ತಿನ್ನಲಿಲ್ಲ.

ಇದೆಲ್ಲಾ ಈ ಮರದ ಕೆಳಗೆ ಕುಳಿತುಕೊಂಡಾಗ ನೆನಪಾಯಿತು. ಹೆಚ್ಚಿನ ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ಬರದಿದ್ದರೂ… ಬಂದವರೆಲ್ಲರೂ ತಮಗೆ ಕೊಟ್ಟ ಜವಾಬ್ದಾರಿಯಂತೆ ಕೆಲಸಕಾರ್ಯಗಳ ನಡುವೆ… ಬಂದು “ಹರ ಓಂ ಮಾತೃಶ್ರೀ…” ಎಂದು ಅಂದರೇ ಪ್ರೀತಿ, ಮಮತೆ, ವಾತ್ಸಲ್ಯ, ಗೌರವ, ಭಯಭಕ್ತಿಯಿಂದ ಬಂದು ಮಾತನಾಡಿಸುವಾಗ ಅಬ್ಬರವನ್ನಲ್ಲ, ನೋಡುವುದಕ್ಕಣ್ಣೇಯೇ “ಗಂಗಾಸಮಾರಾಧನೆ” ನಂಬರಲ್ಲಿ ಬಂದ ನನಗೆ ಧನ್ಯತಾಭಾವ ಆವರಿಸಿತು…

ಈ ಬೋಗಿ ಯಾವುದೋ ತುಕ್ಕುಹಿಡಿಯದೇ, ನೆನಪುಗಳೆಂಬ ಹಳಿಯಲ್ಲಿ ಹಳಿಗಳಲ್ಲಿ ಇನ್ನೂ ಚೆನ್ನಾಗಿವೆ… ಎನ್ನುವ ಭಾವ ಸ್ಮರಿಸಿತು….


By Veena Shanbhogue

Preservation by Sumanth Shanbhogue for Shanbhogue Publications

Leave a comment