For English Version Click Here
ನನಗೆ ಗುರುಕುಲದಲ್ಲಿ ಕೋಣೆಯಲ್ಲಿ ಪಾಠ ಮಾಡುವುದಕ್ಕಿಂತಲೂ ಮರಗಳ ಬುಡದಲ್ಲಿ ಮಾಡುವುದರಲ್ಲಿ ಏನೋ ಒಂದು ಅನಿರ್ವಚನೀಯ ಆನಂದ ಸಿಗುತ್ತಿತ್ತು. ಮಳೆಗಾಲದ ದಿನಗಳನ್ನು ಬಿಟ್ಟರೆ ಹೆಚ್ಚಿನ ಪಾಠಗಳು ಪ್ರಕೃತಿಯ ಮಡಿಲಲ್ಲೇ ಆಗುತ್ತಿದ್ದವು…
ಮಕ್ಕಳಿಗೂ ಅಷ್ಟೇ… “ಮಾತೃಶ್ರೀ…” ಯಾವುದಾದರೂ ಮರದ ಹೆಸರು ಹೇಳಿ “ಅದರ ಬುಡದಲ್ಲಿ ಕೂರೋಣ” ಎನ್ನುತ್ತಿದ್ದರು.
ಹಾಗೆಯೇ ಒಂದು ದಿನ ಒಂದು ಮರದ ಬುಡದಲ್ಲಿ ಕುಳಿತೆವು. ಅಷ್ಟರಲ್ಲಿ ಕೆಲವು ಮಂಗಗಳು.. ನನ್ನ ಪಾಠದ ಆಕರ್ಷಣೆಗೋ ಅಥವಾ ನಮ್ಮಂತವರು ಹಲವರು ಇದ್ದಾರೆ ಎಂದೋ ಬಂದವು. ಅವು ಬಂದರೂ ಗಮನಿಸಲಿಲ್ಲ… ನಮ್ಮ ಮಕ್ಕಳು… ಅವುಗಳನ್ನು ದಿನವೂ ನೋಡುತ್ತಿದ್ದರಿಂದ ಅಂತಹ ಆಕರ್ಷಣೆಯೇನೂ ಇರಲಿಲ್ಲ.
ಆದರೆ ಬಹುಶಃ ಆ ಕೋತಿಗಳಿಗೆ… ತಮ್ಮ ಚೇಷ್ಟೆಯನ್ನು ಈ ಮಾನವರು ನೋಡದೆ ಅವಮಾನ ಮಾಡಿದರು… ತಮ್ಮನ್ನು ಉಪೇಕ್ಷಿಸಿದರು…ಅಂತ ಅನಿಸಿತೋ ಏನೋ… ಬೇಲಿಯ ಮೇಲಿದ್ದ ಹಣ್ಣಾದ ಬಿಳೀ ಹಲಸಿನ ಹಣ್ಣುಗಳನ್ನು ಕಿತ್ತು.. ಕಿತ್ತು… ಎಸೆಯತೊಡಗಿದವು..
ಸಾಕಲ್ಲವೇ ನನ್ನ ಮಕ್ಕಳಿಗೆ… ಚೇಷ್ಟೆ ಮಾಡಲು ಬೇಕೇ ಬೇರೆ ಆಹ್ವಾನ…
ಅವತ್ತು ಪಾಠದಿಂದ ಆಟಕ್ಕೆ ಹೋಯಿತು ನಮ್ಮ ಅವಧಿ.
ಆ ಪಾಠವನ್ನು ರಾತ್ರಿ ಅಭ್ಯಾಸದ ಅವಧಿಯಲ್ಲಿ… ಅವರವರ ವಸತಿಗೆ ಹೋಗಿ ಮಾಡಬೇಕಾಯಿತು… ಮನೆಪಾಠದಂತೆ… ಆದರೆ ಅದರಲ್ಲೂ ಖುಷಿಯಿರುತ್ತಿತ್ತು. ಆವತ್ತೇ ನನ್ನ ಪಾಠ ಮುಗಿಸದಿದ್ದರೆ..ಮುಂದಿನ ಪಾಠ ಮಾಡಲು ಕಷ್ಟವಾಗುತ್ತಲ್ಲ..
ಅಷ್ಟಮಿ, ಅಮಾವಾಸ್ಯೆ, ಹುಣ್ಣಿಮೆಗೆ ಅನಧ್ಯಯನ ಅಂದರೆ ಪಾಠಪ್ರವಚನಗಳಿಗೆ ರಜೆ ಇರುತ್ತಿತ್ತು. ಆ ದಿನ ಎಲ್ಲಿಯಾದರೂ ತಿರುಗಾಟ, ಸ್ವಚ್ಛತೆ, ವಿಶೇಷವಾದ ತಿಂಡಿಗಳ ತಯಾರಿ… ಹೀಗೆಲ್ಲಾ ಗಮ್ಮತ್ತು ಮಾಡುವ ಅವಕಾಶವಿತ್ತು. ಈ ಕಪಿಚೇಷ್ಟೆಯ ಪರಿಣಾಮ ಮುಂದಿನ ಅನಧ್ಯಯನದ ದಿನ ಆ ಮರದ ಬಲಿತ ಹಣ್ಣುಗಳನ್ನೆಲ್ಲಾ ತೆಗೆದು ಹಪ್ಪಳವನ್ನು ತಯಾರಿಸಿದೆವು.
ಆಗ ನನ್ನ ಬಳಿ ನಿಂತರೆ ಹತ್ತು – ಹದಿನೈದು ವಯಸ್ಸಿನ ಮಕ್ಕಳ ತಲೆ ಸವರಲು ಸಿಗುತ್ತಿತ್ತು… ಕೆಲವೇ ವರ್ಷಗಳಲ್ಲಿ ದೈಹಿಕವಾಗಿಯೂ, ಮಾನಸಿಕವಾಗಿಯೂ ತಲೆ ಸವರಲಾರದಷ್ಟು ಎತ್ತರ ಬೆಳೆದಿದ್ದಾರೆ… ಹತ್ತು ಹನ್ನೆರಡರ ವಯಸ್ಸಿನ ಮಕ್ಕಳು ಇಂದು ಇಪ್ಪತ್ತು ಇಪ್ಪತ್ತೆರಡರ ತರುಣರಾಗಿದ್ದಾರೆ…
ಆದರೆ ನನ್ನ ಜೊತೆಗಿನ ವರ್ತನೆ ಅಂದಿನಂತೆಯೇ ಇಂದೂ ಇತ್ತು.. ನೆನಪುಗಳು ಅವರಲ್ಲೂ ಇದ್ದವು…
ಗಂಗಾಸಮಾರಾಧನೆಯ ದಿನ ಸರಿದು ಹೋದ ಬೋಗಿಯೊಂದು ಬಂದು ಮತ್ತೆ ಸರಿದು ಹೋಯಿತು. ಈ ಬೋಗಿಯಲ್ಲಿ ಇರುವ ಎಲ್ಲಾ ನಟ್ಟುಬೋಲ್ಟುಗಳ ಹೆಸರು ನೆನಪಿಲ್ಲ… ಬರಿಯ ಬೋಗಿ ಮಾತ್ರ ಉಳಿದಿದೆ.
By Veena Shanbhogue
Preservation by Sumanth Shanbhogue for Shanbhogue Publications

Leave a comment