For English Version Click Here
ಗುರುಕುಲದಲ್ಲಿ ಜೂನ್ ತಿಂಗಳಲ್ಲಿ ಹೊಸದಾಗಿ ದೀಕ್ಷಾ ಸ್ವೀಕಾರ ಮಾಡಿದ ಮಕ್ಕಳಿಗೆ ಮನೆಯ ನೆನಪು ಸಹಜವಾಗಿ ಬರುತ್ತಾ ಇರುತ್ತದೆ. ಹಗಲೆಲ್ಲಾ ಆಟಪಾಟಗಳಲ್ಲಿ ಕಳೆದು ಹೋದರೂ, ರಾತ್ರಿಯ ಊಟ ಆಗುತ್ತಲೇ ಮನೆಯ ನೆನಪು ಬರುತ್ತದೆ. ಅವರಿಗೆ ಏನಾದರೂ ಕಥೆಗಳನ್ನು ಹೇಳುವುದೋ, ಯಾವುದಾದರೂ ಘಟನೆಗಳನ್ನು ಹೇಳುತ್ತಲೋ ಇರುತ್ತೇವೆ.
ಹಿರಿಯ ಮಕ್ಕಳೂ ಕೇಳಲು ಉತ್ಸುಕರಾಗಿ ಕೇಳುತ್ತಾ ಇರುತ್ತಾರೆ. ಹಾಗೆಯೇ ಒಂದು ದಿನ ನಾನು ಎಂದಿನಂತೆ ನೀತಿಕಥೆ, ಪುರಾಣದ ಕಥೆ ನಂತರ “ಬೇರೆ ಏನಾದರೂ ವಿಷಯ ಹೇಳಿ ಮಾತೃಶ್ರೀ..” ಎಂದರು. ಹೇಳಲು ಪ್ರಾರಂಭಿಸಿದೆ ನನ್ನ ಜೀವನದ ಒಂದು ಘಟನೆಯನ್ನು….
ನನಗೆ ತೋಟಗಾರಿಕೆಯ ಹುಚ್ಚು ಹಿಡಿದಿತ್ತು.. ಎಷ್ಟೆಂದರೆ ಬೆಳದಿಂಗಳ ರಾತ್ರಿಯಲ್ಲಿ ಚಂದ್ರನ ಬೆಳಕಲ್ಲಿ ಗಿಡಗಳ ಬುಡದಲ್ಲಿ ಕಸ ತೆಗೆಯುತ್ತಾ ಕೂರುತ್ತಿದ್ದೆ. ಇದರ ಫಲ ಕಾಲಿನ ಪಾದಗಳಿಗೆ ಅಲರ್ಜಿಯಾಯಿತು. ಬಲ ಪಾದಕ್ಕೆ ತುರಿಕಜ್ಜಿಯಂತೆ ರಾಶಿ ಗುಳ್ಳೆಗಳು ಎದ್ದವು.
ಹಲವಾರು ವರ್ಷಗಳಿಂದ ನನ್ನ ಆರೋಗ್ಯದ ತೀವ್ರ ಕಾಳಜಿ ವಹಿಸಿರುವ “ಡಾಕ್ಟರ್ ಸುರೇಶ್ ನೆಗಳಗುಳಿ ಸರ್” ಇವರ ಬಳಿ ಹೋದೆ. ಅವರು ಪರೀಕ್ಷಿಸಿ, “ವೀಣನವರೇ.. ನಿಮ್ಮ ಮೇಲೆ ಒಂದು ಪ್ರಯೋಗ ಮಾಡ್ಲಾ.. ಇತರ ಮದ್ದುಗಳ ಜೊತೆ ಈ ಪ್ರಯೋಗದಿಂದ ಬೇಗ ಗುಣವಾಗುತ್ತದೆ ಎಂದು ನನಗೆ ನಂಬಿಕೆ ಇದೆ. ನೀವು ಒಪ್ಪಿದರೆ ಮಾತ್ರ..” ಎಂದರು. ನನಗಾದರೋ ಅವರ ಪ್ರಯೋಗಗಳ ಮೇಲೆ ವಿಪರೀತ ನಂಬಿಕೆ. “ಆಯ್ತು ಸರ್..” ಎಂದೆ.
ಅವರು ಆಗ ಆಳ್ವಾಸ್ ನಲ್ಲಿದ್ದರು . ಅವರ ಬಳಿ ಕಾರ್ಕಳದ ಡಾ. ತ್ರಿವೇಣಿ ಜೈನ್ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಅವರ ನೇತೃತ್ವದಲ್ಲಿ ಇತರ ವಿದ್ಯಾರ್ಥಿಗಳನ್ನು ಸೇರಿಸಿ ಜಿಗಣೆ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಅಂದರೆ ಅಲರ್ಜಿಯಾದ ಭಾಗಕ್ಕೆ ಜಿಗಣೆಯನ್ನು ಕಚ್ಚಿಸಿ ಅಲ್ಲಿರುವ ರಕ್ತವನ್ನು ಹೀರುವಾಗ ನಂಜು ಕಡಿಮೆಯಾಗುತ್ತದೆ.. ಎಂದು ಹೇಳಿದರು. ಸುಮಾರು ಹದಿನೈದು-ಇಪ್ಪತ್ತು ದಿನವಾದರೂ ಮದ್ದು ತೆಗೆದುಕೊಳ್ಳಬೇಕಿತ್ತೋ ಏನೋ.
ದಿನ ಬಿಟ್ಟು ದಿನ ನಡೆಸಿದ ಈ ಚಿಕಿತ್ಸೆಯಿಂದ ಒಂದು ವಾರದಲ್ಲಿ ಪೂರ್ತಿಯಾಗಿ ಗುಣವಾಯಿತು. ಮತ್ತೆ ಮೂರು-ನಾಲ್ಕು ದಿನಗಳಲ್ಲಿ ಒಂದೇ ಒಂದು ಗುಳ್ಳೆಯಾಗಲೀ, ಕಲೆಯಾಗಲೀ ಉಳಿದಿರಲಿಲ್ಲ.
ಈ ಘಟನೆಯನ್ನು ಮಕ್ಕಳಿಗೆ ಹೇಳಿ ನಮ್ಮ ಭಾರತೀಯ ವೈದ್ಯಕೀಯ ಪದ್ಧತಿಗಳು ಎಷ್ಟು ಶ್ರೇಷ್ಠ ಎನ್ನುವುದರ ಬಗ್ಗೆ ವಿವರಿಸಿದೆ. ಮತ್ತೆ ಮರೆತೆ.
ಮರುದಿನ ವಿರಾಮದ ಸಮಯ ಹೊಸ ವಿದ್ಯಾರ್ಥಿಗಳಲ್ಲಿ ಮೂರು-ನಾಲ್ಕು ಜನ ಸೇರಿ ಬಂದರು. ಹಿರಿಯ ವಿದ್ಯಾರ್ಥಿಗಳು ಕೆಲವರು ಮೊದಲೇ ನನ್ನ ಜೊತೆ ಹರಟೆ ಹೊಡೆಯುತ್ತಾ ಇದ್ದರು. ಹೊಸ ವಿದ್ಯಾರ್ಥಿಗಳಲ್ಲಿ ಒಬ್ಬನು (ಹೆಸರು ಮರೆತಿದ್ದೇನೆ) “ಮಾತೃಶ್ರೀ.. ನರೇಶ್ ಭಟ್ಟನ ಕಾಲಿನ ಹೆಬ್ಬೆರಳಿಗೆ ಎಷ್ಟೋ ದಿನಗಳಿಂದ ಕುರು ತರಹ ಏನೋ ಆಗಿದೆ..” ಎಂದು ಪೀಠಿಕೆ ಹಾಕಿದ.
ಅದಕ್ಕೆ ನಾನೆಂದೆ, “ನನಗೆ ಗೊತ್ತಿದ್ದ ವಿಷಯವೇ ಅಲ್ಲವಾ…? ನಾನೇ ದಿವಸಕ್ಕೆ ಮೂರು ಸಲ ಅರಿಶಿನ ಬಿಸಿ ಮಾಡಿ ಹಚ್ಚುತ್ತಿದ್ದೇನೆ. ಅಲ್ವಾ..? ಈಗ ಏನಾಯ್ತು? ಕಡಿಮೆ ಆಗ್ತಾನೂ ಇದೆ. ಇನ್ನೊಂದೆರಡು ದಿವಸ ನೋಡೋಣ.. ಆಗದೆ ಇದ್ರೆ.. ಡಾಕ್ಟರ್ ಹತ್ತಿರ ಹೋಗೋಣ..” ಎಂದೆ.
ಮುಖ ಮುಖ ನೋಡಿಕೊಂಡರು. ಹೇಳುವುದೋ ಬೇಡವೋ ಎಂಬ ದ್ವಂದ್ವ ಅವರ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು. ಹಿರಿಯ ವಿದ್ಯಾರ್ಥಿಗಳು ಆಸಕ್ತಿಯಿಂದ “ಹೇಳೋ.. ಮಾತೃಶ್ರೀ ಬೈಯುವುದಿಲ್ಲ…” ಎಂಬ ಆಶ್ವಾಸನೆಯನ್ನೂ ಕೊಟ್ಟರು.
ನರೇಶ್ ಭಟ್ಟ ಕೇಳಿದ, “ಮಾತೃಶ್ರೀ.. ಜಿಗಣೆ ಚಿಕಿತ್ಸೆಯಲ್ಲಿ ನಿಮಗೆ ನೋವಾಯ್ತಾ?” ಎಂದ.
ನಾನು “ಇಲ್ಲಾ ಪುಟ್ಟಾ.. ಒಂದು ತರಹ ಹಿತವಾದ ಅನುಭವವಾಯಿತು. ಸಾಮಾನ್ಯವಾಗಿ ತೋಟದಲ್ಲಿ ಸುತ್ತಿರುವಾಗ ಜಿಗಣೆ ಕಚ್ಚಿದರೆ ನೋವಾಗುವುದಿಲ್ಲ. ನೋಡು.. ಹಾಗೆಯೇ.. ನನಗೆ ಗೊತ್ತೇ ಆಗಲಿಲ್ಲ.” ಎಂದೆ.
ಆಗ ನನ್ನ ಮೊಬೈಲ್‌ನಲ್ಲಿ ಅದರ ವಿಡಿಯೋ ಇತ್ತು, ತೋರಿಸಿದೆ. ಹಿರಿಯ ವಿದ್ಯಾರ್ಥಿಗಳಲ್ಲಿ ಒಬ್ಬನು (ಲಕ್ಷ್ಮಣ ಸಿದ್ಧಿ ಇರಬೇಕು… ಸರಿಯಾಗಿ ನೆನಪಿಲ್ಲ) “ಮಾತೃಶ್ರೀ.. ಅವನಿಗೆ ಆಡಲಿಕ್ಕೆ, ಸ್ನಾನ ಮಾಡುವಾಗ, ನಡೆಯುವಾಗ ಎಲ್ಲಾ ನೋವಾಗುತ್ತದೆ. ನೀವು ನಿನ್ನೆ ಅದೇನೋ ಜಿಗಣೆ ಚಿಕಿತ್ಸೆ ಹೇಳಿದ್ದಿರಲ್ಲಾ… ಅದನ್ನು ಮಾಡುವನಾ…” ಎಂದ…
ನಮ್ಮ ಹೆಚ್ಚಿನ ಮಕ್ಕಳು ಏನಾದರೂ ಹೇಳಿದರೆ ಅದನ್ನು ಪ್ರಯೋಗ ಮಾಡಿ ನೋಡದಿದ್ದರೆ ಜೀವಕ್ಕೆ ಸಮಾಧಾನ ಇಲ್ಲದವರು.. ಹೆಸರು ಹೇಳಲು ಹೋದರೆ ಉದ್ದವಾದ ಒಂದು ಪಟ್ಟಿಯಾದೀತು… ನನಗೆ ಮಾತ್ರ ಯಾಕಾದರೂ ಹೇಳಿದೆನೋ… ಮಕ್ಕಳ ತಲೆಯಲ್ಲಿ ಜಿಗಣೆ ಕಚ್ಚಿ ಕೂತಿದೆಯಲ್ಲಾ… ಇದನ್ನು ಬಿಡಿಸಲು ಯಾವ ಸುಣ್ಣ ಹಾಕಲಿ, ಹೊಗೆಸೊಪ್ಪನ್ನು ಎಲ್ಲಿಂದ ತರಲಿ, ಅರಿಶಿನವನ್ನು ಹೇಗೆ ಉಪಯೋಗಿಸಲಿ…. ಎನ್ನುವ ಚಿಂತೆ ಪ್ರಾರಂಭವಾಯಿತು..
ಅದೇ ಚಿಂತೆಯಿಂದ ಅವನಿಗೆ “ಏಯ್… ಹೋಗೋ ಮಾರಾಯಾ.. ನಾನು ಡಾಕ್ಟರ್ ಅಲ್ಲಾ… ಚಿಕಿತ್ಸೆ ಅನುಭವಿಸಿ ಗೊತ್ತೇ ವಿನಃ ಚಿಕಿತ್ಸೆ ನೀಡಿ ಅನುಭವವಿಲ್ಲ. ಒಂದಕ್ಕೊಂದು ಆದರೆ… ಏನೂ ಬೇಡಾ… ಅಷ್ಟೇ ಅಲ್ಲ, ವೈವಿಧ್ಯಮಯ ಜಿಗಣೆಗಳಿವೆ. ವಿಷಪೂರಿತ ಜಿಗಣೆಗಳಿವೆ. ನಮಗೆ ಪರಿಚಯವಿಲ್ಲ.. ಅವುಗಳದ್ದು ಸರಿಯಾದ ಜ್ಞಾನವಿಲ್ಲದೆ ಯಾವುದೇ ಚಿಕಿತ್ಸೆಗಳನ್ನು ಮಾಡಬಾರದು…” ಹೀಗೆಲ್ಲಾ ಒಂದಷ್ಟು ಹೇಳಿದೆ.
ವಿರಾಮದ ಅವಧಿ ಮುಗಿಯಿತು.. ಎಲ್ಲರೂ ಅವರವರ ತರಗತಿಗಳಿಗೆ ಏನೂ ಹೇಳದೆ ಹೋದರು.
ಮರುದಿನ ಸಂಜೆಯ ವಿರಾಮದ ವೇಳೆಯಲ್ಲಿ ನಮ್ಮ ವಸತಿಗೆ ಬಂತು….. ಮುನ್ನಾ ದಿನ ಹರಟೆ ಹೊಡೆದ ಕಿರಿಯ, ಹಿರಿಯ ಶಿಷ್ಯವೃಂದ. ನಾನು ಹೊರಗೆ ಕೂತಿದ್ದೆ. ಎಲ್ಲರೂ ವಸತಿಯ ಒಳಗೆ ನುಗ್ಗಿದರು. ನಾನು ಏನು… ಯಾಕೆ ಎಂದು ಕೇಳುವ ಮೊದಲೇ ನನ್ನ ಕೈ ಹಿಡಿದು ಇಬ್ಬರು ಎಳೆದುಕೊಂಡೇ ಒಳಗೆ ಹೋದರು. ಬಾಗಿಲು ಹಾಕಿಯೂ ಆಯಿತು. ಬೇರೆ ಯಾರಿಗಾದರೂ ಗೊತ್ತಾದರೆ ಕಷ್ಟ ಎಂದುಕೊಂಡಿರಬೇಕು.
“ಮಾತೃಶ್ರೀ… ನೋಡಿ ಜಿಗಣೆ ತಂದಿದ್ದೇವೆ.. ಇದು ವಿಷದ್ದು ಅಲ್ಲಾ.. ನಾವು ಗುರುಕುಲಕ್ಕೆ ಬಂದು ನಾಲ್ಕು ವರ್ಷ ಆಗಿದೆ. ಇಂಥಹ ಜಿಗಣೆಗಳಿಂದ ನೂರಾರು ಸಲ ಕಚ್ಚಿಸಿಕೊಂಡಿದ್ದೇವೆ. ಏನೂ ಆಗಲ್ಲ.” ಎಂದರು.
ಈ ಮಕ್ಕಳು ಎಲ್ಲಾ ತೀರ್ಮಾನಿಸಿಯೇ ಬಂದಿದ್ದಾರೆ. ಏನು ಮಾಡಲಪ್ಪಾ ದೇವರೇ… ಅಂದುಕೊಂಡೆ.
“ಏನೋ ನರೇಶ್… ನೋವಾಗುತ್ತೆ… ನಂಜಾಗುತ್ತೆ.. ಅಪ್ಪ-ಅಮ್ಮ ಕೂಡಾ ಇಲ್ಲ, ಏನಾದರೂ ಹೆಚ್ಚು ಕಮ್ಮಿಯಾದರೆ ನನಗೂ ಕೆಟ್ಟ ಹೆಸರು… ನಿನ್ನ ಕಾಲಿಗೆ ಆಪತ್ತು..” ಹೀಗೆಲ್ಲಾ ಹೇಳಿ ಬೇರೆಬೇರೆ ರೀತಿಯಲ್ಲಿ ಹೆದರಿಸಿದರೂ ಜಪ್ಪಯ್ಯ ಎಂದು ತನ್ನ ತೀರ್ಮಾನದಿಂದ ಅಲುಗಾಡಲಿಲ್ಲ.
ಅವನು ಬಂದಾಗಿಲಿಂದ ಕಾಲಿನ ಹುಣ್ಣಿಗೆ ನಾನೇ ಉಪಚಾರ ಮಾಡುತ್ತಿದ್ದುದರಿಂದ ಅವನಿಗೆ ನನ್ನಲ್ಲಿ ಭಯಂಕರ ನಂಬಿಕೆ, ಒಲವು ಹುಟ್ಟಿಯಾಗಿತ್ತು. ಬಂದಾಗಿಲಿಂದ ಅವನು ಹುಣ್ಣಿಗೆ ಮದ್ದು ಹಚ್ಚಲು ಯಾರಿಗೂ ಬಿಡುತ್ತಿರಲಿಲ್ಲ. ಇಬ್ಬರು ಕಾಲನ್ನು ಹಿಡಿದು ತೊಳೆಯಬೇಕಿತ್ತು. ಕಾಲಿನಿಂದ ಒದ್ದು ಬಿಡುತ್ತಿದ್ದ. ನನಗೆ ಒಡೆಯಲು ಬಹುಶಃ: “ಅಯ್ಯೋ ಪಾಪ” ಅನಿಸುತ್ತಿತ್ತೋ ಏನೋ… ಸುಮ್ಮನೆ ಹೇಳಿದ ಹಾಗೆ ಕೇಳುತ್ತಿದ್ದ.
ಅದಕ್ಕೆ ಇವರೆಲ್ಲರೂ ಜಿಗಣೆ ಚಿಕಿತ್ಸೆಯನ್ನು ನನ್ನ ಸುಪರ್ದಿಯಲ್ಲಿ ಮಾಡುವ ಹೊಂಚು ಹಾಕಿರಬೇಕು. ಅವನಿಗೂ ಬ್ರೈನ್‌ವಾಶ್ ಮಾಡಿದ್ದರೆಂದು ಅನಿಸುತ್ತೆ…
ನಾನೂ ಜಿಗಣೆಯನ್ನು ನೋಡಿದೆ. ಅಪಾಯಕಾರಿಯಾದುದಲ್ಲ.. ಈ ಹುಡುಗರು ಅಡಿಕೆ ತೋಟದಿಂದ ತಂದಿದ್ದಾರೆ. “ಸರಿ” ಎಂದೆ.
ಅವನು ದಕ್ಷಿಣ ಕನ್ನಡ ಜಿಲ್ಲೆಯ ಹುಡುಗ. ಜಿಗಣೆಯ ಪರಿಚಯವಾದದ್ದೇ ಈ ಮಲೆನಾಡ ಮೂಲೆಗೆ ಬಂದ ಮೇಲೆ… ಪಾಪದ್ದು. ಶುದ್ಧ ಅರಿಶಿನದ ಪುಡಿಯನ್ನೂ ಶುಶ್ರೂಶಾಲಯದಿಂದ ತೆಗೆದುಕೊಂಡು ಬಂದಿದ್ದರು. ಅವನು ಕಾಲು ಚಾಚಿ ಕೂತ. ಅಡ್ಡಿಯಿಲ್ಲ. ಧೈರ್ಯ ಬಂದಿದೆ…. ಎಂದು ಅಂದುಕೊಂಡೆ.
ನನಗಾದರೋ ಜಿಗಣೆ ಅಂದರೆ ಮುಟ್ಟಲಿಕ್ಕೆ ಅಸಹ್ಯ… ಈ ಹುಡುಗನಾದರೋ ಗಾಯದ ಹತ್ತಿರ ಇಟ್ಟು ಅದನ್ನು ನಾನೇ ಕಚ್ಚಿಸಬೇಕಂತೆ… ಇನ್ಯಾರಿಗೂ ಮುಟ್ಟಲು ಬಿಡುವುದೂ ಇಲ್ಲ. “ಸರಿ” ಎಂದು.. ಕಾಲಿನ ಹುಣ್ಣಿಗೆ ಇಟ್ಟಂತೆ.. ಮಾಡಿ ಹಿಸುಕಿದೆ. ಬದಿಗೆ ಎಸೆದೆ… ಒಬ್ಬ “ನಾನು ಇಡ್ತೇನೆ” ಅಂದ.. ಅವನು ಇಟ್ಟ.. ಇವನು ಹೆದರಿಕೆಯಿಂದ ಯಥಾಪ್ರಕಾರ ಕಾಲು ಎಳೆಯುವುದು, ಒದೆಯುವುದು ಮಾಡಿದ.
ಈ ಗಲಾಟೆಯಲ್ಲಿ ಆ ಹುಣ್ಣಿ (ಕುರು)ನಿಂದ ದಪ್ಪ ಹಳದಿ ಬಣ್ಣದ ಬೀಜದಂತೆ ಹೊರಬಂತು. ಹಳದಿ-ಕೆಂಪು ಮಿಶ್ರ ಬಣ್ಣದ ರಕ್ತವೂ ಬಂದಿತು. ಮತ್ತೂ ಸ್ವಲ್ಪ ಒತ್ತಿದ ಕೂಡಲೇ ಕೆಂಪು ರಕ್ತವೂ ಬಂತು. ಅದನ್ನೆಲ್ಲಾ ಚೆನ್ನಾಗಿ ಒರೆಸಿ ಅರಿಶಿನ ಹಾಕಿ ತೊಳೆದು ಜಾತ್ಯಾದಿ ತೈಲ ಹಾಕಿ ಬ್ಯಾಂಡೇಜ್ ಮಾಡಿ ಕಳಿಸಿದೆ.
ಎದೆಯಲ್ಲಿ ಧವಧವ ಅನ್ನುತ್ತಿತ್ತು. ರಾತ್ರಿ ಹೆದರಿಕೆಯಿಂದಲೋ, ನೋವಿನಿಂದಲೋ ಜ್ವರ ಬಂದರೆ ಗುರುಕುಲದ ಎಲ್ಲರನ್ನೂ ಎದುರಿಸಬೇಕು. ನರೇಶ್‌ನ ಮನೆಯವರ ಬೇಸರಕ್ಕೆ, ಸಿಟ್ಟಿಗೆ ಗುರಿಯಾಗಬೇಕು. ನಾನು ಯಾಕಾದರೂ ಈ ಹುಡುಗರ ಮುಂದೆ ದೊಡ್ಡದಾಗಿ ಅನುಭವ ಕಥನ ಹೇಳಿದೆನೋ… ಎಂಬೆಲ್ಲಾ ನಾಳೆಯ ಚಿಂತೆಯಿಂದ ನಿದ್ದೆ ಬರದೆ ನನಗೆ ಜ್ವರ ಬರುವಂತಾಗಿತ್ತು.
ಮರುದಿನ ಐದು ಗಂಟೆಗೆ ಶಂಭೋದೋಷ ಆಡೂಡನೆ ಎದ್ದು ಮುಖ ತೊಳೆದು ಸ್ನಾನ ಮಾಡುವ, ವಸತಿ ಗುಡಿಸಿ ರಂಗವಲ್ಲಿ ಹಾಕುವ ಮುಂಜಾನೆ ಕೆಲಸಗಳನ್ನು ಮಾಡದೆ ನೇರ ಗುರುಕುಲದತ್ತ ಹೋಗಿ ನರೇಶನನ್ನು ನೋಡುವಾ.. ಎಂದು ಮುಂಬಾಗಿಲನ್ನು ತೆಗೆದರೆ ನನ್ನ ಮುನ್ನಾ ದಿನದ ತಂಡ ನಿಂತಿದೆ.
ನನಗೆ ಧಸಕ್ಕೆಂದಿತು. ಅಷ್ಟರಲ್ಲಿ ನರೇಶ್ ತುಂಬಾ ಖುಷಿಯಿಂದ “ಮಾತೃಶ್ರೀ… ಜಾದು.. ನೋಡಿ ನನ್ನ ಕಾಲು ಎಷ್ಟು ಕ್ಲೀನ್ ಆಗಿದೆ… ನೋಡಿ. ನೋವು, ಸಿಡಿತ ಏನೂ ಇಲ್ಲ.” ಎಂದು ಹಾರಿ, ನೆಗೆದು ತೋರಿಸಿದ. ನನಗೆ ಕಟ್ಟಿದ ಉಸಿರಾಟ ಸಲೀಸಾಯಿತು.
ಗುರುಕುಲದಲ್ಲೆಲ್ಲಾ ಜಿಗಣೆ ಚಿಕಿತ್ಸೆ ವಿಶೇಷ ಸುದ್ದಿಯಾಗಿ ಪಸರಿಸಿತು. ಅಂದಿನ ವಿಶ್ರಾಂತಿಯ ಹೊತ್ತಿನಲ್ಲಿ ಈ ಸುದ್ದಿಗೆ ಅಂತ್ಯ ಹಾಡದಿದ್ದರೆ.. ಈ ಚಿಕಿತ್ಸೆ ಒಂದು ದಿನ ಅಪಾಯಕ್ಕೆ ಹಾದಿಯಾಗಬಹುದೆಂದು ಯೋಚಿಸಿ ಎಲ್ಲರನ್ನೂ ಸೇರಿಸಿ.. ಹೇಳಿದೆ.
“ನರೇಶ್ ಭಟ್ಟನ ಕುರು ಗುಣ ಆದದ್ದು ಜಿಗಣೆ ಚಿಕಿತ್ಸೆಯಿಂದ ಅಲ್ಲ. ಜಿಗಣೆ ಚಿಕಿತ್ಸೆಯಿಂದ ರಾಜಕುರು ಕೂಡಾ ಗುಣವಾಗುತ್ತದೆಯಂತೆ. ಆದರೆ ಅದಕ್ಕೆ ಅದರದ್ದೇ ಆದ ರೀತಿನೀತಿಗಳಿವೆ.”
“ನರೇಶ್ ಕಾಲು ಮುಟ್ಟಲು ಬಿಡುತ್ತಿರಲಿಲ್ಲ. ಅವನ ಹುಣ್ಣಿನಿಂದ ಬೀಜ, ಕೆಟ್ಟ ರಕ್ತ ಹೊರ ತೆಗೆಯಲು ಬಿಟ್ಟರೆ ಯಾವತ್ತೋ ಗುಣವಾಗುತ್ತಿತ್ತು. ಅವನು ಬಿಡದೇ ಇದ್ದ ಕಾರಣ ಅದು ಎರಡು-ಮೂರು ಮರಿ ಇಟ್ಟು ಉಪದ್ರವ ಕೊಡುತ್ತಿತ್ತು. ಜಿಗಣೆಯ ನೆಪದಲ್ಲಿ ನಾನು ಹುಣ್ಣನ್ನು ಒತ್ತಿದೆ. ಜಿಗಣೆಗಳು ಪಾಪ ಸತ್ತುಹೋದವು. ಹಾಗಾಗಿ ಆದರೆ ನರೇಶ್ ಭಟ್ಟನ ಕುರುಕ್ಷೇತ್ರದ ಯುದ್ಧದಲ್ಲಿ ಶತ್ರು ಸಂಹಾರವಾಯಿತು. ಹಾಗಾಗಿ “ಜಿಗಣೆ ಚಿಕಿತ್ಸೆ”ಯಿಂದ ಎಂದು ಯಾರೂ ಪ್ರಚಾರ ಮಾಡಬೇಡಿ. ‘ಜಿಗಣೆ’ಯಿಂದ ಎಂದು ಬೇಕಾದರೆ ಹೇಳಿ” ಎಂದೆ.
ಗುರುಕುಲದ ತೋಟದಲ್ಲಿ ಅಡ್ಡಾಡುವಾಗ ಜಿಗಣೆಯ ನೆನಪು ಬೋಗಿಯೊಂದನ್ನು ‘ಧಡಕ್ ಧಡಕ್’ ಎಂಬ ಸದ್ದಿನೊಂದಿಗೆ ಸರಿಸಿ ಹೋಯಿತು. ಎಂದಿನಂತೆ ನಟ್ಟುಬೋಲ್ಟುಗಳು ಬಿದ್ದು ಹೋಗಿವೆ. ಬಣ್ಣ ಮಾತ್ರ ಇನ್ನೂ ಚೆನ್ನಾಗಿ ಉಳಿದಿದೆ..
By Veena Shanbhogue
Preservation by Sumanth Shanbhogue for Shanbhogue Publications

Leave a comment