ಬೋಗಿ – 11

For English Click Here


ಬೆಳಗ್ಗೆ ಮಕ್ಕಳಿಗೆ ತಿಂಡಿ, ಶಾಲೆಗೆ ಒಯ್ಯಲು ಟಿಫಿನ್ ಎಂದು ಗಡಿಬಿಡಿಯಲ್ಲಿರುವಾಗ ಫೋನ್ ರಿಂಗ್ ಆಯಿತು. ಮೊಮ್ಮಗಳು ಓಡಿಹೋಗಿ ಅಡುಗೆಕಟ್ಟೆಯ ಬಳಿ ತರಲು “ಸ್ಪೀಕರ್ ಆನ್ ಮಾಡು.. ಕೈಗೆ ಬಿಡುವಿಲ್ಲ..” ಎಂದೆ.
“ಅನಮಾ ಡೆನ್ಮಾರ್ಕಿನಿಂದ ಚಿಕ್ಕಪ್ಪ ಮಾಡಿದ್ದಾನೆ ”ಎಂದಳು. 

ನನ್ನ ತಂಗಿಯ ಮಗ ಆಗಾಗ ಅಲ್ಲಿಂದ ಏನಾದರೂ ಅಡುಗೆ ಮಾಡುವ ಬಗ್ಗೆ ವಿಚಾರಿಸಲು ಮಾಡುತ್ತಿದ್ದ. ಇಂದೂ ಹಾಗೆಯೇ ಮಾಡಿರಬೇಕು..ಎಂದುಕೊಂಡೆ..
ನನ್ನ ಮೊಮ್ಮಗಳು ಸ್ಪೀಕರ್ ಹಾಕಿದಳು.
ನಾನು “ಏನೋ ಹೇಳು…” ಎಂದೆ.
ಅವನು “ದೊಡ್ಡಮ್ಮ ಇಲ್ಲಿ ಒಳ್ಳೆಯ ಮೊಸರು ಸಿಕ್ಕುತ್ತದೆ.. ನೀನು ಮೊಸರಿನ ಇಡ್ಲಿ ಮಾಡ್ತಿಯಲ್ಲಾ..ಅದನ್ನು ಹೇಗೆಂದು ಹೇಳು..”ಎಂದ.

ನನಗಿಂತಲೂ ಮೊದಲೇ ನನ್ನ ಮೊಮ್ಮಗಳು “ ಅಯ್ಯೋ..ನಿನಗೆ ಅಷ್ಟೂ ಗೊತ್ತಿಲ್ಲವಾ..? ಇಷ್ಟು ದೊಡ್ಡವ ಆಗಿದ್ದಿ.. ನೀನೇ ಅಡುಗೆ ಮಾಡ್ತೀನೆ..ಎಂದು ಕೊಚ್ಚಿಕೊಳ್ಳುತಿಯಾ…ಇಷ್ಟು ಸಿಂಪಲ್ ಆಗಿರೋ ಮೊಸರಿಡ್ಲಿ ಗೊತ್ತಿಲ್ಲವಂತೆ..” ಎಂದಳು.

ಅವನು “ಹೌದಮ್ಮಾ…ನನಗೆ ಗೊತ್ತಿಲ್ಲ.. ನಿನಗೆ ಬರುತ್ತದಾದ್ರೆ ನೀನೇ.. ಹೇಳೇ ಸುಬ್ಬಿ…” ಎಂದ.
ಇವಳು “ಇಡ್ಲಿ ಸಾಂಬಾರ್ ಮಾಡಿದಾಗ ಇಡ್ಲಿ ಉಳಿಯುತ್ತದಲ್ಲ , ನೆಕ್ಸ್ಟ್ ಡೇ ಆ ಇಡ್ಲಿಯನ್ನು ತಟ್ಟೆಯಲ್ಲಿ ಹಾಕಿಕೋ…ಅದಕ್ಕೆ ಮೊಸರನ್ನು ಹಾಕು. ಅದರ ಜೊತೆ ಚಟ್ನಿ ಪುಡಿಯನ್ನೋ, ಸಕ್ಕರೆಯನ್ನೋ ಹಾಕಿದರೆ ಆಯಿತು. ಮೊಸರಿಡ್ಲಿ ರೆಡಿ.. ಇಷ್ಟೂ ಗೊತ್ತಿಲ್ಲವಾ..” ಎಂದು ಹ್ಹ.. ಹ್ಹ.. ಎಂದು ನಕ್ಕಳು..

ಅವನು “ಹೋ …ಹೌದಾ..ಹಾಗಾದರೆ ಇನ್ನೂ ನಿನಗೆ ಏನೇನು ಬರುತ್ತೆ… ಹೇಳು..” ಎಂದು ನಗುತ್ತಾ ಹೇಳಿದ.
“ಓ…ನನಗೆ ನೀರು ದೋಸೆ, ಪನಪೋಳೋ (ಕೊಂಕಣಿಯಲ್ಲಿ ನೀರು ದೋಸೆಗೆ ಹೇಳುವುದು.), ಸಾನ್ನ ಕೊಟ್ಟೋ, ರವೆ ದೋಸೆ.. ಹೀಗೇ ಇನ್ನೂ ಸುಮಾರೆಲ್ಲಾ ಬರುತ್ತೆ..” ಎಂದು ಇಲ್ಲಿಂದ ಉತ್ತರ ಹೋಯಿತು.

“ಹಾಗಾದರೆ ಹೇಳು ನೋಡೋಣ..” ಎಂದ.

“ನೀರುದೋಸೆ ಎಂದರೆ ಬಿಳಿ ಬಣ್ಣದ ಯಾವುದೇ ಹಿಟ್ಟು ಆಗುತ್ತದೆ. ಅದಕ್ಕೆ ತುಂಬಾ ನೀರು ಸುರಿದು ದೋಸೆ ಕಾವಲಿ ಮೇಲೆ ದೋಸೆ ಹಾಕುವುದು.. ನಿನಗೆ ಡೆನ್ಮಾರ್ಕ್‌ನಲ್ಲಿ ದಪ್ಪ ಚಂದ ಹಾಲು ಸಿಕ್ಕುತ್ತದಲ್ಲಾ.. ಅದನ್ನೇ ದೋಸೆ ಕಾವಲಿ ಮೇಲೆ ಹಾಕಿ ಕೂಡ ಮಾಡಬಹುದು ಅನಿಸುತ್ತದೆ. ಯಾಕಂದ್ರೆ ನೀರು ದೋಸೆ ಹಿಟ್ಟು ಹಾಲಿನ ಹಾಗೆಯೇ ಬಿಳಿ ಇರ್ತದೆ…ಮಾಡಿ ನೋಡು..ಆ ಮೇಲೆ ಫೋಟೋ ತೆಗೆದು ವಾಟ್ಸಾಪ್‌ನಲ್ಲಿ ಕಳಿಸು. ಯಾವಾಗಲೂ ಏನಾದರೂ ಮಾಡಿ ಕಳಿಸ್ತಿಯಲ್ಲಾ…. ಹಾಗೇನೇ….ಹೀ…ಹೀ…ಹೀ…

ಸಾನ್ನಪೋಳೋ ಎಂದರೆ ಕೆಂಪು ಬಣ್ಣದ (ನಮ್ಮನೆಯಲ್ಲಿ ಘಟ್ಟ‌ದಿಂದ ತರುವ ಕೆಂಪಕ್ಕಿಯನ್ನು ದೋಸೆಗಾಗಿ ಉಪಯೋಗಿಸುವುದು) ಅಕ್ಕಿಯನ್ನು ಮಿಕ್ಸಿಗೆ ಹಾಕಿ ಆ ಹಿಟ್ಟನ್ನು ಕಾವಲಿ ಮೇಲೆ ಹಾಕಿ ದೋಸೆ ಮಾಡಿ ಎಲೆಯ ಮೇಲೆ ಹಾಕಬೇಕು.. (ಎಲೆಗೆ ಕೊಂಕಣಿಯಲ್ಲಿ ‘ಪಾನ’ ಎನ್ನುವುದು.) ಅದನ್ನು ಪಾನಪೋಳೋ ಎನ್ನುವುದು. ಅದನ್ನು ಮಾಡ್ಲಿಕ್ಕೆ ಗೊತ್ತಿಲ್ಲವಾ…ನಿನಗೆ ಪೆದ್ದ ಅಂದ್ರೆ ಪೆದ್ದ..” ಎಂದಳು.

ಅವನು ಜೋರಾಗಿ ನಗುತ್ತಾ” ಆಯ್ತಮ್ಮಾ.. ನನಗೆ ಬಾಳೆ ಎಲೆ ಸಿಕ್ಕಲ್ಲವಲ್ಲಾ.. ಏನು ಮಾಡ್ಲಿ.. ಪಾನಪೋಳೋ ಕ್ಯಾನ್ಸಲ್ ..ಇನ್ನು ರವಾದೋಸೆ ಹೇಳು… ಅದಾಗುತ್ತಾ ನೋಡೇನೆ..”ಎಂದ.

“ಎಲೆ ಇಲ್ಲದಿದ್ದರೆ ಪರವಾಗಿಲ್ಲ.. ಪ್ಲೇಟಲ್ಲೂ ಹಾಕಬಹುದು.ಹಿಂದಿನ ಕಾಲದಲ್ಲಿ ಪ್ಲೇಟ್ ಇರಲಿಲ್ಲ ಅಲ್ಲಾ…ಎಲೆ ಮೇಲೆ ಹಾಕುವುದಿತ್ತಂತೆ ..ಅದಕ್ಕೆ ಹಾಗೆ ಹೇಳ್ತಾರೆ.

ಇನ್ನು ರವೆ ದೋಸೆ ಭಾರೀ ಈಸೀ… ರವೆ ಉಪ್ಪಿಟ್ಟು ಮಾಡ್ತಿಯಲ್ವಾ.. ಅದು ಉಳಿದಾಗ ಆ ಉಪ್ಪಿಟ್ಟಿಗೆ ತುಂಬಾ ನೀರು ಹಾಕಿ ದೋಸೆ ತೆಗೆದರೆ ಆಯಿತು..ರವೆ ದೋಸೆ… ಆಗ್ತದೆ .. ಪಾಪ ನಿಂಗೆ ಇಷ್ಟು ಸಿಂಪಲ್ ದೋಸೆ, ಇಡ್ಲಿ ಬರುವುದಿಲ್ಲ ಅಂದ್ರೆ, ಇನ್ನು ಏನು ತಿಂತಿಯಾ… ಅದೂ ಅನಮಾ ಪಿರಿಪಿರಿ ಮಾಡ್ತಾ ಇರ್ತಾರೆ.. ಈಗಿನ ಹುಡುಗರಿಗೆ ಹುಡುಗಿ ಸಿಕ್ಕಲ್ಲ. ಸಿಕ್ಕಿದರೂ ಅಡುಗೆ ಬರಲ್ಲ..ಅಂತ. ನೀನು ಎಲ್ಲಾ ಮಾಡ್ಲಿಕ್ಕೆ ಕಲಿಯದಿದ್ದರೆ ಅನಮಾ ಹೇಳುವ ಹಾಗೆ ಹೋಟೆಲ್ ಊಟವೇ ಗತಿ…ನೋಡು…” ಎನ್ನುವಷ್ಟರಲ್ಲಿ ಶಾಲೆಗೆ ಹೋಗಲು ರಿಕ್ಷಾ ಹಾರನ್ ಕೇಳಿಸಿತು.. ಜೊತೆಯಲ್ಲಿಯೇ ಅಜ್ಜನ “ಇನ್ನೂ ಹೊರಡಲಿಲ್ಲವಾ..?” ಎನ್ನುವ ಆವಾಜ್ ಕೇಳಿಸಿ “ಪಾಪ ಬಪ್ಪ..” ಎನ್ನುತ್ತಾ ಮೊಬೈಲ್ ಕೊಟ್ಟು ಓಡಿದಳು… ನಮ್ಮ ಪಾಕಪ್ರವೀಣೆ..

ಇಷ್ಟೆಲ್ಲಾ ನಡೆಯುವಾಗ ನನ್ನ ನೆನಪಿನ ಹಳಿಯಲ್ಲಿ ಬೋಗಿಯೊಂದು ಧಡಕ್.. ಧಡಕ್ ಎಂದು ಬಂತು.
ನಾನಿನ್ನೂ ನಾಲ್ಕನೇ ತರಗತಿಯಲ್ಲಿರಬೇಕು. ನಮ್ಮ ಶಾಲೆಗೆ ಯಾಕೋ ರಜೆಯಿದ್ದ ಕಾರಣ ಅಪ್ಪನ ಜೊತೆಗೆ ಅವರ ಶಾಲೆಗೆ ಹೋಗಿದ್ದೆ.. ಅಲ್ಲಿ ಒಬ್ಬರು ಟೀಚರ್ ಮಧ್ಯಾಹ್ನ ಪದಾರ್ಥ ಏನು ಎಂದು ಕೇಳಿದರು. ನಾನು “ಪತ್ರೋಡೆ ಮತ್ತು ದಾಳಿತೊವ್ವೆ”ಎಂದೆ.

ಅವರು “ಓಹೋ.. ಹೌದಾ ಪತ್ರೊಡೆ ಮಾಡ್ಲಿಕ್ಕೆ ನಿನಗೆ ಬರುತ್ತಾ..” ಎಂದು ಕೇಳಿದರು. ನಾನು “ಹೌದು” ಎನ್ನಲು… “ಹೇಗೆ…ನನಗೂ ಹೇಳು..” ಎಂದರು.

ನಾನು ಹೆಮ್ಮೆಯಿಂದ “ಕುಟ್ಟೆ ಬಂದ ಧಾನ್ಯ… ಬೇಯಿಸಿದರೆ ಬೇಯದಂತಹ ಕಾಳುಗಳು, ವಾಸನೆ ಬರುವ ಹಾಳಾದ ತೆಂಗಿನ ಕಾಯಿ ಎಲ್ಲವನ್ನೂ ಮೆಣಸು ಹಾಕಿ ರುಬ್ಬಿ… ಆ ಮಸಾಲೆಯನ್ನು ಹತ್ತು ಎಲೆಗೆ (ತುಳು ಭಾಷೆಯಲ್ಲಿ ಪತ್ತು ಎಂದರೆ ಹತ್ತು ಎಂದರ್ಥ) ಹಚ್ಚಿ ಹಾಸಿಗೆಯ ಹಾಗೆ ಸುತ್ತಿ ಬೇಯಿಸಬೇಕು..” ಎಂದೆ.
ಅವರು ನಗುತ್ತಾ “ಮಾಸ್ಟ್ರೆ … ನಿಮ್ಮಲ್ಲಿ ಹಾಳು ಮೂಳು ಹಾಕಿ ಪತ್ರಡೆ ಮಾಡುವುದಾ…ಅದೂ ಹತ್ತೇ ಎಲೆಯಲ್ಲಿ…ಮಾಡಬೇಕಾ…” ಎಂದು ನಗಾಡಿದರು.
ಅಪ್ಪ ಮನೆಗೆ ಬಂದು ಅಮ್ಮನ ಹತ್ತಿರ ಹೇಳಿದರು. ಅಜ್ಜಿ ಅದಕ್ಕೆ “ಅಲ್ಲಾ ಮಾರಾಯ ನಿನ್ನೆ ತೆಂಗಿನ ಕಾಯಿ ಚೆನ್ನಾಗಿಲ್ಲ… ಹುಳಿ ಮಾಡಿದರೆ ವಾಸನೆ ಬರುತ್ತೋ ಏನೋ ತೊಳೆದು ಪತ್ರಡೆಗೆ ಹಾಕುವ ಎಂದಿದ್ದೆ. ಹಾಗೆಯೇ ಅಲಸಂದೆ ಕಾಳು ಹೋದ ತಿಂಗಳು ತಂದದ್ದು ಒಂದು ಮುಷ್ಟಿ ಉಳಿದಿದೆ.. ಬೇಯುತ್ತೋ ಇಲ್ಲವೋ..ತಂದು ತಿಂಗಳಾಯ್ತು..ಕುಟ್ಟೆ ತಾಗಿದ್ರೆ ಯಾತಕ್ಕೂ ಉಪಯೋಗವಿಲ್ಲ… ಅದನ್ನೂ ಅಕ್ಕಿ ಜೊತೆ ನೆನಸಿಬಿಡು..ಎಂದಿದ್ದೆ.. ನಿನ್ನ ಮಗಳು ಅದನ್ನೆಲ್ಲಾ ಕೇಳಿಸಿಕೊಂಡು ಹೇಳಿರಬೇಕು..” ಎಂದು ಅಪ್ಪನಿಗೆ ಸಮಜಾಯಿಸಿ ನೀಡಿ ನನಗೆ ಚೆನ್ನಾಗಿ ಬೈದಿದ್ದು… ಈಗ ನೆನಪಿನ ಹಳಿಯಲ್ಲೊಂದು ಬೋಗಿ ಸರಿದು ಹೋಯಿತು.


ವೀಣಾ ಶಾನುಭೋಗ್

Preservation by Sumanth Shanbhogue for Shanbhogue Publications

Leave a comment