For English Click Here
ನನ್ನ ಬಾಲ್ಯ ಗೆಳತಿ ಸುಮಾ ಮನೆಗೆ ಹೋಗಿದ್ದೆ. ನಾನು ಒಳಗೆ ಹೋಗಿದ್ದಷ್ಟೇ… ಸುಮಾಳ ಮಗಳು ಪ್ರಣತಿಯ ಗೆಳತಿ ಪ್ರಿಯಾಂಕ ನಮ್ಮಿಬ್ಬರನ್ನೂ ಗಮನಿಸದೆ ಸಿಡುಕುತ್ತಾ “ಎಷ್ಟು ಸೊಕ್ಕು ನಿನಗೆ…ನೀನು ನಮ್ಮ ಮನೆಗೆ ಬಂದಾಗ ಎಲ್ಲಾ ಕಡೆ ಓಡಾಡುತ್ತಿ … ನಾನೇನಾದರೂ ಹೇಳ್ತೇನಾ ..? ನಾವು ಮೇಲಿನ ಜಾತಿಯವರೆಂದು ಯಾವತ್ತಾದರೂ ನಿನ್ನ ಜೊತೆ ಆ ರೀತಿ ನಡೆದುಕೊಂಡಿಲ್ಲ..” ಎಂದು ಹೇಳುತ್ತಾ ಹೋಗುತ್ತಿದ್ದಳು.
ಪ್ರಣತಿ “ಇಲ್ಲ ಕಣೆ… ಪ್ಲೀಸ್ ತಪ್ಪು ತಿಳಿದುಕೊಳ್ಳಬೇಡಾ… ನನಗೆ ಅದು ಇಷ್ಟ ಆಗಲ್ಲ.. ನೀನು ಫ್ರೆಂಡ್ ಆಗಿ ಅಷ್ಟೂ ಅರ್ಥ ಮಾಡಿಕೊಳ್ಳದಿದ್ದರೆ ನಮ್ಮ ಗೆಳತನಕ್ಕೆ ಏನರ್ಥವಿದೆ.. ಮೇಲು ಕೀಳು, ಜಾತಿಪಂಗಡಗಳು ಈಗ ಎಲ್ಲಿವೆ..? ಯಾಕೆ ಹೀಗಾಡ್ತೀ..?” ಎಂದು ಗೋಗರೆಯುತ್ತಾ ಅವಳ ಹಿಂದೆಯೇ ಹೋಗಿ… ಅವಳನ್ನು ಸಮಾಧಾನ ಮಾಡಲಾಗದೇ ಸೋತು ಅಳುತ್ತಾ ಕೋಣೆಗೆ ಹೋದಳು.
ನಾನು ಅವಳ ಕೋಣೆಯತ್ತ ಹೋಗಬೇಕೆಂದು ಹೊರಟಾಗ ಸುಮಾ ತಡೆದಳು.
ನಾನು ಆಶ್ಚರ್ಯದಿಂದ ಅವಳ ಕಡೆ ನೋಡಿದೆ.
ಅವಳು ನನ್ನ ಪಕ್ಕದಲ್ಲಿ ಕುಳಿತು “ನನ್ನ ಮಗಳ ಬಗ್ಗೆ ನಿನಗೆ ಗೊತ್ತಿದೆಯಲ್ಲಾ.. ಅವಳ ಬಟ್ಟೆ, ಓಲೆ , ಸರ, ತಟ್ಟೆ, ಲೋಟ ಯಾವುದನ್ನೂ ಯಾರೂ
ಬಳಸಬಾರದು. ಅವಳ ಹಾಸಿಗೆಯ ಮೇಲೆ ಕೂರಲೂ ಬಾರದು… ಕೂತರೆ ಇಷ್ಟ ಆಗುವುದಿಲ್ಲ… ಅಷ್ಟೇ ಅಲ್ಲ.. ಕೂಡಲೇ ಅದನ್ನು ತೆಗೆದು ಬೇರೆ ಹಾಸುತ್ತಾಳೆ.. ಇದೆಲ್ಲಾ ಅವಳ ಅಪ್ಪನಿಂದ ಅವಳಿಗೆ ಬಂದ ಸ್ವಭಾವ..” ಎಂದಳು.
ನಾನು “ಸರಿ..ಅದರಲ್ಲೇನೂ ತಪ್ಪಿಲ್ಲವಲ್ಲ.. ಪ್ರಿಯಾಂಕನ ಸಿಟ್ಟಿಗೂ ಇವಳ ಬೇಸರಕ್ಕೂ ಇದೇನಾ ಕಾರಣ..” ಎಂದೆ.
“ಹೌದು..ಅವಳು ಬಂದರೆ ಅವಳಿಗೆ ಮಂಚದ ಮೇಲೆ ಕೂತು ಮಾತನಾಡುವ ಆಸೆ, ಇವಳ ಹೊಸ ಬಟ್ಟೆ ಕಂಡರೆ ಒಂದು ಸಲ ಕೊಡು ಎನ್ನುವ ಚಪಲ.. ಇವಳು ಒಂದೆರಡು ಸಲ ಕೊಟ್ಟಿದ್ದಾಳೆ. ಅದನ್ನು ಮತ್ತೆ ಹಿಂದೆ ಕೊಟ್ಟಾಗ ಬೇಡಾ.. ಅಂದಿದ್ದಾಳೆ. ಇವತ್ತು ಹೊಸದಾಗಿ ತಂದ ಹಾಸಿಗೆಯ ಚಾದರವನ್ನು ಹಾಸಿ ಚಂದ ಮಾಡಿದ್ದಳು. ಪ್ರಿಯಾಂಕ ಬಂದವಳು ನೇರವಾಗಿ ಹೋಗಿ ಅದರ ಮೇಲೆ ಕೂತಿದ್ದಾಳೆ.. ಅಷ್ಟಕ್ಕೇ ಇವಳು ಸಿಟ್ಟು ಮಾಡಿ…ಇನ್ನೊಂದು ಮಂಚದ ಮೇಲೆ ಕೂತ್ಕೋ ಎಂದಳು.
ಪ್ರಿಯಾಂಕನಿಗೆ ಸಿಟ್ಟು ಬಂತು.. ಇದು ಆಗಾಗ ಆಗುವ ಸಂಗತಿಯೇ.. ಯಾವಾಗಲೂ ನಾನು ಇಬ್ಬರ ನಡುವೆ ಹೋಗಿ ಸಮಾಧಾನ ಮಾಡುತ್ತಿದ್ದೆ. ಕಾಲೇಜಿಗೆ ಬಂದ ಮೇಲೂ ಹೀಗೆ ಮುಂದುವರಿತಾ ಇದೆ. ಎಲ್.ಕೆ.ಜಿಯಿಂದ ಒಟ್ಟಿಗೆ ಇದ್ದಾರೆ. ಹದಿಮೂರು ವರ್ಷದಿಂದ ಇದೇ ಕಥೆ.. ಈ ಸಲ ಇನ್ನು ಇಬ್ಬರ ಗೆಳತನವೂ ಮುಗೀತದೆ ಅನಿಸುತ್ತಿದೆ. ನನಗೂ ಇಬ್ಬರ ಗೆಳತನಕ್ಕೂ ಕೊಂಡಿ ಹಾಕಿ, ಬೆಸುಗೆ ಹಾಕಿ ಸಾಕಾಗಿ ಹೋಗಿದೆ.” ಎಂದು ನಿಟ್ಟುಸಿರು ಬಿಟ್ಟಳು.
ಅವಳ ನಿಟ್ಟುಸಿರಿನಲ್ಲಿ ನನ್ನ ನೆನಪಿನ ಹಳಿಯೂ ಅದರಲ್ಲಿ ಧಡಕ್.. ಧಡಕ್.. ಎಂದು ಒಂದು ಬೋಗಿಯೂ ಬಂತು.
ಈ ಸುಮಾ ನನಗೆ ಒಂದನೇ ಕ್ಲಾಸ್ ನಿಂದಲೇ ಗೆಳತಿಯಾಗಿದ್ದಳು. ಅವಳು ನಮ್ಮ ಮನೆಗೆ ಬಂದರೆ ಅಂಗಳದಲ್ಲಿಯೇ ನಿಲ್ಲಬೇಕಿತ್ತು. ಅಲ್ಲಿ ಕಲ್ಲು ಚಪ್ಪಡಿಗಳನ್ನು ಹಾಕಿ ಕೂರುವ ವ್ಯವಸ್ಥೆ ಮಾಡಿದ್ದರು. ಮಣ್ಣು ಸಗಣಿಯ ಮಿಶ್ರಣದ ಎರಡು ಮರಗಳಿಗೆ ಕಟ್ಟೆಯನ್ನು ಕಟ್ಟಲಾಗಿತ್ತು. ಅವಳು ಬಂದರೆ ನಾವಿಬ್ಬರೂ ಒಂದೇ ಕಟ್ಟೆಯ ಮೇಲೆ ಕೂರುವಂತಿರಲಿಲ್ಲ.
ನನಗೆ ನೋಟ್ಸ್ ಕೂಡಾ ಅವಳದ್ದು ನಾನು ತೆಗೆದುಕೊಂಡಲ್ಲಿ, ನನ್ನ ಪುಸ್ತಕಗಳನ್ನು ಅವಳು ಉಪಯೋಗಿಸಿ ತಂದರೂ, ಹೂವುಹಣ್ಣುಗಳನ್ನು ತಂದರೂ ಅದರ ಮೇಲೆ ತೀರ್ಥವನ್ನು ಚಿಮುಕಿಸಿ ಒಳಗೆ ತರಬೇಕಿತ್ತು. ಅವಳ ಮನೆಯಿಂದ ಬೇಯಿಸಿದ ಅಡುಗೆಗಳಂತೂ ಬರುವಂತಿಲ್ಲ, ತರುವಂತಿಲ್ಲ. ಅವಳಿಗೆ ತಿಂಡಿಕೊಡುವುದಾದರೂ, ಕಾಫಿ ಕೊಡುವುದಾದರೂ ಬೇರೆಯೇ ಲೋಟ ತಟ್ಟೆಗಳಲ್ಲಿ ಕೊಡಬೇಕಿತ್ತು.
ಅದರೂ ಒಂದು ದಿನವೂ ಅವಳು ಬೇಜಾರು ಮಾಡಿಕೊಂಡಿದ್ದೇ ಆಗಲೀ ಸಿಡುಕಿದ್ದಾಗಲೀ ಇಲ್ಲ.. ನನ್ನ ಬೋಗಿ ಕಣ್ಣೆದುರು ಹೋಗ್ತಾ ಇರಬೇಕಾದರೆ ಸುಮಾ “ಏನೇ..ಎಲ್ಲೋ ಕಳ್ದು ಹೋದಾಗೆ ಕಾಣಿಸ್ತಿದೆ… ತಗೋ ನಿನಗಿಷ್ಟ ಅಂತ
ಈರುಳ್ಳಿ ಪಕೋಡಾ ಮತ್ತು ಟೀ ತಂದಿದ್ದೇನೆ…ತಿನ್ನುತ್ತಾ ಮಾತನಾಡೋಣ “ ಎಂದಳು.
“ಏನಿಲ್ಲ..ಹಳೆಯ ನೆನಪುಗಳು ಬಂದ್ವು … ಅಷ್ಟೇ..” ಎಂದೆ.
“ಓಹ್… ನಾನೂ ಅದೇ ಯೋಚನೆ ಮಾಡ್ತಾ ಪಕೋಡಾ ಮಾಡ್ತಿದ್ದೆ… ಕಣೆ… ನೀನು ನಮ್ಮನೆಗೆ ಬಂದಾಗ ನಮ್ಮಪ್ಪ ನಿನ್ನನ್ನು ಒಳಗೆ ಜಗಲಿವರೆಗೂ ಬಿಡದೆ… ಅಂಗಳದಲ್ಲಿ ನಿಲ್ಲಿಸಿ ಹೇಳಿದ್ದ ಮಾತುಗಳು ಇನ್ನೂ ಕಿವಿಯಲ್ಲಿ ಗುಂಯುಗುಟ್ಟುತ್ತಿವೆ…
ನೀನು “ಅವರಿಗೆ ಏನೇ ನಮ್ಮನೇಲಿ ಮಾತ್ರ ಹೀಗೆ ಅಂದ್ಕೊಂಡ್ರೆ.. ನೀವು ಹಾಗೇ ಮಾಡ್ತಿದ್ದೀರಲ್ವಾ. ಎಂದು ಕೇಳಿದ್ದು..” ಎಂದು ಹೇಳ್ತಾ ಹೇಳ್ತಾ ನಗತೊಡಗಿದಳು.
ನಾನು “ಹೌದು.. ನನಗೂ ನೆನಪಿದೆ.. ನಮ್ಮನೆಯಲ್ಲಿ ಇರುವ ಭೂತದ ಮಂಚ, ಭಂಡಾರ ಇವೆಲ್ಲಕ್ಕೂ ನೀವು ಒಳಗೆ ಬಂದರೆ ಅಪಚಾರ ಆದ್ರೆ ನಾವು ಅನುಭವಿಸಬೇಕು. ಈಗಿನ ಮಕ್ಕಳಿಗೆ ಮಡಿ ಮೈಲಿಗೆ ಯಾವುದೂ ಇಲ್ಲ… ಹೇಳಿದ್ರೆ ಅರ್ಥನೂ ಆಗಲ್ಲ…” ಎಂದು ನಿನ್ನ ಅಪ್ಪ ನನಗೆ ಹೇಳುತ್ತಾ ನಿನ್ನ ಹತ್ತಿರ “ಸುಮಾ ನಿನ್ನ ದೋಸ್ತಿ ಬಂದಿದ್ದಾಳೆ ನೋಡು.. ಅವಳಿಗೆ ಬೊಂಡ (ಎಳನೀರು) ತಂದುಕೊಡು..” ಎಂದು ಹೇಳಿ ಉಪಚಾರ ಮಾಡಿದ್ದರು.
ನಾನೂ ಮನೆಗೆ ಹೋದ ಮೇಲೆ ಹಿತ್ತಲು ಕಡೆಯಿಂದ ಹೋಗಿ ಸ್ನಾನ ಮಾಡಿ ಒಳಗೆ ಹೋಗಬೇಕಾಯಿತು.
ನಾವು ಒಟ್ಟಿಗೆ ಸಿನೆಮಾ ನೋಡಲು ಹೋದರೆ ಅವಳು ಅವಳ ಮನೆಯಲ್ಲೂ, ನಾನು ನಮ್ಮ ಮನೆಯಲ್ಲೂ ಸ್ನಾನ ಮಾಡಿ ಒಳಗೆ ಹೋಗಬೇಕಾಗುತ್ತಿತ್ತು. ನಾವು ಹರಟೆ ಹೊಡೆಯಲು ಅವರ ಮನೆಯ ಅಥವಾ ನಮ್ಮ ಮನೆಯ ಹೊರಗಿನ ಕಟ್ಟೆಯನ್ನು ಆಶ್ರಯಿಸುತ್ತಿದ್ದೆವು. ನಮಗೆ ಯಾವುದೇ ಕೀಳರಿಮೆ ಆವರಿಸುತ್ತಿರಲಿಲ್ಲ.
ಇಂಥಹ ಹಲವಾರು ನೆನಪುಗಳನ್ನು ಹಂಚಿಕೊಂಡೆವು..
ಸುಮಾ “ಅಲ್ಲ ಕಣೆ.. ನನಗೆ ನಮ್ಮ ಚಿಕ್ಕಂದಿನ ಗೆಳತನ ದಿನವೂ ನೆನಪಿಗೆ ತರಿಸುತ್ತವೆ…ನನ್ನ ಮಗಳನ್ನೂ, ಅವಳ ಸ್ನೇಹಿತೆಯನ್ನೂ ನೋಡುವಾಗ.. ಗೊತ್ತಾ..? ನಮ್ಮ ಸ್ನೇಹಕ್ಕೆ ಅಂದಿನಿಂದ ಇಂದಿನವರೆಗೂ ಯಾವುದೇ ಕೊರಗನ್ನು ಜಾತಿಪದ್ಧತಿಗಳು ತರಲಿಲ್ಲ.. ಅಲ್ವಾ.. ನಮ್ಮ ಮನೆಯ ಪದ್ಧತಿಗಳಿಗೆ ನೀನೂ, ನಿಮ್ಮ ಶಾಸ್ತ್ರ ಸಂಪ್ರದಾಯಕ್ಕೆ ನಾನೂ ಹೇಗೆ ಹೊಂದಿಕೊಂಡಿದ್ದೆವು. ಈಗ ಅದ್ಯಾವುದೂ ನಮ್ಮ ಮನಸ್ಸಲ್ಲೂ ಇಲ್ಲ.. ಅಲ್ವಾ.. ಈಗ ನಾವು ಆಧುನಿಕರು… ನವನಾಗರಿಕರು.. ವಿಶಾಲಮನೋಭಾವದವರು… ಎಲ್ಲವನ್ನೂ ಮೀರಿದ್ದೇವೆ… ನಿಮ್ಮ ಹಾಗೇ ಚೀಪ್ ಮೆಂಟಾಲಿಟಿಯವರು ಅಲ್ಲಾ … ಎಂದು ಬಾಯಲ್ಲಿ ಹೇಳುವರೇ ಹೊರತು… ನೋಡು ಮನಸ್ಸು ಮಾತ್ರ ಸಂಕುಚಿತವೇ” ಎಂದಳು.
ಅಷ್ಟೊತ್ತಿಗೆ ನಮ್ಮನೆಯವರು ಕರೆದೊಯ್ಯಲು ಬಂದ್ರು…
ವೀಣಾ ಶಾನುಭೋಗ್
Preservation by Sumanth Shanbhogue for Shanbhogue Publications

Leave a comment