For English Click Here
ಪುರಸಭಾ ಚುನಾವಣೆಯಲ್ಲಿ ಮತದಾನ ಮುಗಿದಿಷ್ಟೇ.. ನಾಮಪತ್ರ ಸಲ್ಲಿಸುವ ಕೆಲವು ದಿನಗಳ ಮೊದಲಿನಿಂದಲೇ ಪ್ರಾರಂಭವಾದ ಧಾವಂತಗಳಿಗೂ…ಟೆನ್ಷನ್ಗಳಿಗೂ ಕೊನೆಯಿರಲಿಲ್ಲ..
ಇವತ್ತು ದಿನ ಮತಎಣಿಕೆ ಪ್ರಾರಂಭ. ಹಾಗಾಗಿ ಇಷ್ಟುದಿನದ ಅನುಭವಗಳಿಗೂ, ಪಿಸುಮಾತುಗಳಿಗೂ ಈಗ ಜೀವ ಕೊಡುತ್ತಿದ್ದರು… ಕಾರ್ಯಕರ್ತರು.. ಫಲಿತಾಂಶಕ್ಕಾಗಿ ಕಾಯುತ್ತಾ.. ಮತ್ತು ಉಮೇದುವಾರರು…
ನನ್ನ ನೆನಪಿನ ಹಳಿಯಿಂದ ಬೋಗಿಯೊಂದು “ಧಡಕ್..ಧಡಕ್” ಎಂದು ಸದ್ದು ಮಾಡುತ್ತಾ ಬಂತು.
ಅಕ್ಕಪಕ್ಕದಲ್ಲಿರುವ ಮನೆಯಾದ ಕಾರಣ ನಾವಿಬ್ಬರೂ ಒಳ್ಳೆಯ ಗೆಳತಿಯರಾಗಿದ್ದರು. ನೆರೆ ಹೊರೆಯಾಗದೆ ಮನಸ್ಸಿಗೆ ಅಚ್ಚುಮೆಚ್ಚಾಗಿತ್ತು. ಪ್ರತಿದಿನ ಸಂಜೆ ಗಾಳಿ ಸೇವನೆಗೆ ಹೋಗುತ್ತಿದ್ದೆವು. ಬೇರೆಬೇರೆ ರಸ್ತೆಗಳಲ್ಲಿನ ವಾಯುಗುಣವನ್ನು ಪರಿಶೀಲಿಸಲೆಂಬಂತೆ ದಿನಕ್ಕೊಂದು ದಿಕ್ಕಿನಲ್ಲಿ ಬೇರೆಬೇರೆ ರಸ್ತೆಗಳಲ್ಲಿ ನಮ್ಮ ಸವಾರಿ ಹೊರಡುತ್ತಿತ್ತು. ಇಬ್ಬರಿಗೂ ಆ ಏರಿಯಾ ಹೊಸದಾಗಿತ್ತು. ತಿಂಗಳು ಕಳೆಯಬೇಕಾದರೆ ಎಲ್ಲಾ ರಸ್ತೆಗಳನ್ನಷ್ಟೇ ಅಲ್ಲ.. ಮರಗಿಡಗಳು, ಮನೆಗಳು, ಮನೆಮಂದಿಯ ಪರಿಚಯವೂ ಆಗಿತ್ತು.
ಒಂದು ದಿನ ನಮ್ಮ ವಾಕಿಂಗು ಒಂದು ಏರಿಯಾಕ್ಕೆ ತಲುಪಿತು. ಅದು ಸರ್ಕಾರದಿಂದ ಸಿಕ್ಕಿದ ಮೂರು ಸೆಂಟ್ಸ್ ಮನೆಗಳಿಂದ ತುಂಬಿದ ಪುಟ್ಟ ಊರಿನಂತಿತ್ತು….ಎನ್ನಬಹುದು. ಸುಮಾರು ಮೂವತ್ತು ಮನೆಗಳಿದ್ದವು. ಒಂದು ಖಾಲಿ ಮೈದಾನ ಅಲ್ಲೊಂದು ಸುತ್ತಲೂ ಕಟ್ಟಿ ಕಟ್ಟಿದ ಮರ. ಎಂಟು ಮನೆಗಳಿಗೊಂದು ನಲ್ಲಿ.
ನಾವು ಸಂಜೆ ಹೋಗುವಾಗ ಹೆಚ್ಚಿನವರು ಕೂಲಿ ಕೆಲಸ ಮುಗಿಸಿ ಮನೆಗೆ ಮರಳುವ ಹೊತ್ತಾಗುತ್ತಿತ್ತು.. ಮಕ್ಕಳೂ ಅಲ್ಲಲ್ಲಿ ಮಣ್ಣಲ್ಲಿ ಆಡುವುದು ಜಗಳ ಮಾಡುವುದೂ ನಡೆಯುತ್ತಿತ್ತು.
ಹೆಂಗಸರು ನಲ್ಲಿ ನೀರಿಗೆ ಬಂದವರು ನೀರಿಗಾಗಿ ಕಾದಾಡುವುದೂ ಆಗುತ್ತಿತ್ತು. ಆ ನಲ್ಲಿಗಳಲ್ಲೂ ಯಾವಾಗಂದರೆ ಅವಾಗ ನೀರು ಬರುತ್ತಿತ್ತು. ಅದೂ ಬೇಸಿಗೆಯಲ್ಲಿ ಪೂರ್ತಿಯಾಗಿ ಮುಷ್ಕರ ಹೂಡುತಿತ್ತು..ಒಟ್ಟಾರೆ ಏನೋ ಒಂದು ರೀತಿಯಲ್ಲಿ ಕಷ್ಟಕರವಾದ ಜೀವನ ಸಾಗಿಸುತ್ತಿದ್ದರು… ಅಲ್ಲಿಯ ಜನರು.
ನಮಗಿಬ್ಬರಿಗೂ ಎಲ್ಲಾ ರಸ್ತೆಗಳ ಪರಿಚಯವಾಗಿ… ಈ ಏರಿಯಾಕ್ಕೆ ಬರುವಾಗ ಇಲಾಖೆ ಸ್ವಲ್ಪ ಸುಧಾರಣೆ ಮಾಡಬಾರದು ಎಂದು ಅನಿಸಿತು. ಮೊದಲು ಮಕ್ಕಳ ಸ್ನೇಹ ಬೆಳೆಸಿದೆವು. ಮಕ್ಕಳಿಗೆ ಆಟ, ಶ್ಲೋಕ, ದೇಶಭಕ್ತಿಗೀತೆ,ಭಕ್ತಿಗೀತೆ, ಭಗವದ್ಗೀತೆ, ಶಾಲೆಯ ಪಾಠಗಳನ್ನು ಅಂದಿನಂದೇ ಕಲಿಸುವುದು… ಹೀಗೆ ಆರಂಭವಾದ ಸಮಾಜಸೇವೆ ಹೆಂಗಸರವರೆಗೂ ಹೋಯಿತು.
ನೀರಿಗಾಗಿ ಅರ್ಜಿ ಕೊಟ್ಟು ಇನ್ನೊಂದಷ್ಟು ನಲ್ಲಿ ಹಾಕಿಸಿ ಕೊಳ್ಳಲು ಪ್ರೇರೇಪಿಸಿದೆವು. ಅಲ್ಲಲ್ಲಿ ಕಸ ಎಸೆದು ಕೊಳಕು ಮಾಡದಂತೆ ಅಲ್ಪಸ್ವಲ್ಪ ಪರಿಶ್ರಮ ಪಟ್ಟು ಒಂದು ಹಂತಕ್ಕೆ ತಂದೆವು. ಇಲ್ಲಿ ನಮಗೆ ಯಾವುದೇ ಉದ್ದೇಶ ಇರಲಿಲ್ಲ.. ಒಟ್ಟಾರೆ ಸಂಜೆ ಒಂದು ಹೊತ್ತುಕಳೆಯುವ ಸಾಧನವಾಗಿತ್ತು… ಅಲ್ಲಿ ಮಾಡುವ ಕೆಲಸಗಳು.
ಹಾಗೆಯೇ ನಮ್ಮ ಮಾತೃಮಂಡಳಿಯಿಂದ ಸಂಕ್ರಾಂತಿ, ಯುಗಾದಿ, ಗುರುಪೂರ್ಣಿಮೆ, ರಕ್ಷಾಬಂಧನ, ವಿಜಯದಶಮಿ.. ಹೀಗೆ ಹಬ್ಬಗಳನ್ನು ನಮ್ಮ ಸಂಸ್ಕೃತಿಗಳ ಗುತ್ತಿಗೆ ತೆಗೆದುಕೊಂಡವರಂತೆ.. ಆಚರಿಸುತಿದ್ದೆವು.
ಹೀಗೆ ಒಂದೆರಡು ವರ್ಷ ಕಳೆದಿತ್ತೋ ಏನೋ.. ಪುರಸಭೆಯ ಚುನಾವಣೆ ಬಂದಿತ್ತು. ಅಷ್ಟು ಹೊತ್ತಿಗೆ ನಾವು ಬಹಳ ಪ್ರಸಿದ್ಧಿಯನ್ನು ಪಡೆದಿದ್ದೆವು… ಸಮಾಜ ಸೇವೆ ಮಾಡುವುದರಲ್ಲಿ.. ನಮ್ಮ ರಾಷ್ಟ್ರೀಯ ಪಕ್ಷವೊಂದು ನನ್ನನ್ನು ಚುನಾವಣಾ ಕಣಕ್ಕೆ ಇಳಿಯುವಂತೆ ಒತ್ತಾಯಿಸಿತು. ನನ್ನ ಮಾತೃಮಂಡಳಿಯ ಮಾತೆಯರೂ ಪ್ರೋತ್ಸಾಹ ಕೊಟ್ಟರು.
ನಮ್ಮ ವಾರ್ಡಿಗೇ ನಮ್ಮ ಮೂರು ಸೆಂಟ್ಸ್ ಮನೆಗಳ ಏರಿಯಾವು ಸೇರಿತ್ತು. ಅಲ್ಲಿ ನಮಗಿರುವ ಒಟ್ಟು ಮತದಲ್ಲಿ ಶೇಕಡಾ ಎಪ್ಪತ್ತೈದು ಇತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮತ ನನಗೇ ಬೀಳುವುದರಲ್ಲಿ ಸಂಶಯವಿರಲಿಲ್ಲ… ಹಾಗಾಗಿ ಯಾವುದೇ ವಿಷಯದಲ್ಲಿ ಹಿಂದೇಟು ಹಾಕುವಂತಿರಲಿಲ್ಲ.
ನಾಮಪತ್ರವನ್ನು ಸಲ್ಲಿಸಿ ಬಂದೆ. ಬೆಳಿಗ್ಗೆ ಏನೋ ಒಂದು ಬೇಯಿಸಿಟ್ಟು, ಹೊರಗೆ ಹೊರಟರೆ ರಾತ್ರಿ ಎಷ್ಟೋ ಹೊತ್ತಿಗೆ ಬರುತ್ತಿದ್ದೆ.. ಬರುವಾಗಲೇ ಆಯಾಸವಾಗಿರುತ್ತಿತ್ತು. ಯಾರ ಬಳಿಯೂ ಮಾತುಕತೆಯಿಲ್ಲದೆ.. ಕೇವಲ ಚುನಾವಣೆಯ ಚಿಂತೆ ಮಾತ್ರ..
ಮತದಾನದ ದಿನವೂ ಬಂತು. ಮತಕಟ್ಟೆಯ ಹೊರಗೆ ವೀಕ್ಷಣೆಗೆ ನಿಂತಿದ್ದೆ. ಎಲ್ಲರೂ ಮತ ಹಾಕಿ ಹಿಂದಿರುಗುವಾಗ ಅಮ್ಮ, ಅಕ್ಕಾ, ಆಂಟಿ..ಎಂದು ಮಾತನಾಡಿಸಿ ಹೋಗುತ್ತಿದ್ದರು.
ಎರಡುದಿನಗಳ ಬಳಿಕ ಮತಗಣನೆ ನಡೆಯಿತು. ನಾನು ಮತಗಣನಾ ಕೇಂದ್ರಕ್ಕೆ ಹೋಗದೆ ಮನೆಯಲ್ಲಿಯೇ ವಿಶೇಷ ಅಡುಗೆಯ ತಯಾರಿಯಲ್ಲಿದ್ದೆ. ಮಕ್ಕಳಿಗೆ ಪಾಪ ಒಂದು ಒಳ್ಳೆಯ ಊಟ ಹಾಕದೆ….ತುಂಬಾ ದಿನಗಳಾಗಿದ್ದವು.
ಮಧ್ಯಾಹ್ನದ ಹೊತ್ತಿಗೆ ನಮ್ಮ ವಾರ್ಡಿನ ಫಲಿತಾಂಶ ಬರಬಹುದೆಂದು ಊಹಿಸಿ ಜಯ ನನ್ನದೇ ಎಂದು ನಿಶ್ಚಿಂತೆಯಿಂದ ಇದ್ದೆ. ನಮ್ಮನೆಯವರು ಫೋನಿನ ಪಕ್ಕದಲ್ಲೇ ಕೂತಿದ್ದರು. ಹಾಗಾಗಿ ನಾನು ಫೋನಿನ ಚಿಂತೆ ಕೂಡಾ ಮಾಡದೆ ನೆಮ್ಮದಿಯಿಂದ ಇದ್ದೆ..
ಸರಿಯಾಗಿ ಒಂದು ಗಂಟೆಗೆ ಎಲ್ಲರೂ ಊಟ ಮಾಡಿದೆವು. ನನ್ನ ಗೆಳತಿಯೂ ನನ್ನ ಜೊತೆಯೇ ಇದ್ದಳು.
ನಮ್ಮನೆಯವರೂ ಹೊರಗೆಲ್ಲೂ ಹೋಗದೆ ಪೋನ್ ಮಾಡ್ತಾರೆ… ಇಲ್ಲೇ ಇರು ಎನ್ನುತ್ತಿದ್ದರೇ ಹೊರತು.. ಅವರೂ ಹೋಗಲಿಲ್ಲ.. ನನ್ನನ್ನೂ ಬಿಡಲಿಲ್ಲ.. ಫಲಿತಾಂಶದ ಬಗ್ಗೆ ಫೋನ್ ಬರದೆ ನನಗೆ ಆತಂಕ ಪ್ರಾರಂಭವಾಯಿತು. ಆದರೂ ಕಾಯುತ್ತಾ ಕುಳಿತಿದ್ದೇ ನಮ್ಮವರು ಹೇಳಿದ್ದರಲ್ಲಾ..
ಮೂರು ಗಂಟೆಗೆ ಮನೆಯ ಮುಂದೆ ಗದ್ದಲ ಕೇಳಿಸಿತು. ಎಲ್ಲರೂ ನನಗೆ ಫೋನ್ ಮಾಡಿ ಹೇಳದೆ ನೇರವಾಗಿ ಅಭಿನಂದನೆಗಳನ್ನು ಹೇಳಲು ಬಂದಿದ್ದಾರೆ… ಎಂದು ಕೊಂಡು ಗಂಭೀರವದನೆಯಾಗಿ ಹೊರಗೆ ಬಂದೆ.
ಆದರೆ ಅಲ್ಲಿ ನೋಡುತ್ತೇನೆ… ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಕೆ ಕೈಯಲ್ಲಿ ಸಿಹಿತಿನಿಸಿನ ಡಬ್ಬಿಯನ್ನು ನನಗೆ ಕೊಡಲೆಂದು ಬಂದಿದ್ದಳು. ಬಂದು ಅಪ್ಪಿ ಹಿಡಿದು “ಅಕ್ಕಾ…ನಾನು ಗೆದ್ದು ಬಿಟ್ಟೆ. ನಾನು ಗೆಲ್ಲಲು ಕಾರಣರಾಗಿದ್ದ ನಿಮಗೇ ಮೊದಲು ಸಿಹಿ ಕೊಟ್ಟು ಹೋಗೋಣವೆಂದು ಇಲ್ಲಿಗೇ ಬಂದಿದ್ದೇನೆ..”ಎಂದಳು. ಕಾಲಿಗೆ ನಮಸ್ಕಾರ ಮಾಡಿ ಹೋದಳು.
ನನಗೋ ಏನೂ ಅರ್ಥವಾಗದೆ ಅಯೋಮಯವಾಗಿತ್ತು.. ಅವಳಿಗೇನೂ ಹೇಳದೆ ವಿಗ್ರಹದಂತೆ ನಿಂತಿದ್ದೆ. ಅವರೆಲ್ಲರೂ ಹೊರಟು ಹೋದರು. ಎಲ್ಲರೂ ಹೋದ ಮೇಲೂ ನಾನು ಮಾತಿಲ್ಲದೆ.. ನಿಂತದ್ದು ನೋಡಿ.. ನನ್ನ ಗೆಳತಿ, ನಮ್ಮನೆಯವರು ಒಳಗೆ ಕರೆದೊಯ್ದರು…ಸ್ವಲ್ಪ ನೀರು ಕೊಟ್ಟರು.
ನಾನು ಮನಸ್ಸಿಗೆ ಈ ವಿಷಯವನ್ನು ತೆಗೆದುಕೊಂಡಿದ್ದೇನೆ ಎಂದು ನಮ್ಮನೆಯವರಿಗೆ ಅರ್ಥವಾಗಿತ್ತು. ಸಮಾಧಾನವಾಗಿ ಹೇಳಲು ಬಾಯಿ ತೆರೆದಾಗ ಇದುವರೆಗೆ ಮೌನವಾಗಿದ್ದ ನಾನು ಒಂದೇ ಸಮನೆ ಅಳುತ್ತಾ.. ಇದೆಲ್ಲಾ ಏನು… ನಿಮಗೆ ಮೊದಲೇ ನಾನು ಸೋಲುತ್ತೇನೆ ಎಂದು ಗೊತ್ತಿತ್ತಾ.. ಅದಕ್ಕೆ ನನ್ನನ್ನು ಮನೆಯಲ್ಲೇ ನೈಸಾಗಿ ಮಾತನಾಡುತ್ತಾ ಉಳಿಸಿಕೊಂಡಿದ್ದು.. ನನ್ನ ಮೇಲೆ ಎಲ್ಲರಿಗಿಂತಲೂ ನಿಮಗೆ ಹೊಟ್ಟೆಕಿಚ್ಚು ಇತ್ತು… ಬಹುಶಃ ನೀವೂ ನನಗೆ ಮತ ಹಾಕಿರಲಿಕ್ಕಿಲ್ಲ… ನಾನು ನನ್ನ ವಾರ್ಡಿನಲ್ಲಿ ಯಾವುದೇ ಆಸೆ ಇಲ್ಲದೆ ಎಷ್ಟೊಂದು ಕೆಲಸ ಮಾಡಿದ್ದೇನೆ… ಯಾರಿಗೂ ಓಟು ಹಾಕುವಾಗ ನನ್ನ ನೆನಪೇ ಬರಲಿಲ್ಲ.. ಅದೂ ಒಂದು ರಾಷ್ಟ್ರೀಯ ಪಕ್ಷದಿಂದ ನಿಮ್ಮೆಲ್ಲರ ಒತ್ತಾಯಕ್ಕೆ ನಿಂತದ್ದಲ್ಲವೇ? ಹೀಗಾಗಲು ಕಾರಣವೇನು..? ಮಾತನಾಡುತ್ತಲೂ.. ಅವಮಾನದಿಂದ ಅಳುತ್ತಲೂ ಇದ್ದೆ.
ಸಂಜೆ ನಾಲ್ಕು ಗಂಟೆಯಾದರೂ ನನ್ನ ಅಳು ಜೊತೆಗೆ ಎಲ್ಲರಿಗೂ ಬೈಯ್ಯುವುದು ನಿಲ್ಲಲೇ ಇಲ್ಲಾ..
ನನ್ನ ಮಗ “ಅಮ್ಮ.. ನೀನು ದತ್ತು ತೆಗೆದುಕೊಂಡ ಕಾಲೋನಿಯವರು ಬಂದಿದ್ದಾರೆ… ನೋಡು. ಹೊರಗೆ ಬರದಿದ್ದರೆ ಎಲ್ಲರೂ ರೂಮಿಗೆ ನುಗ್ಗುತ್ತಾರೆ.. ನಿನ್ನ ಹತ್ತಿರ ಅವರೆಲ್ಲರೂ ಮಾತನಾಡಲೇ ಬೇಕು… ಎಂದು ಬಂದಿದ್ದಾರಂತೆ..”
ನಾನು “ಎಲ್ಲಾ ಮುಗಿದ ಮೇಲೆ ಏನು ಮಾತನಾಡಲು ಏನು ಉಳಿದಿದೆಯಂತೆ…ನಾನು ಎಲ್ಲೂ ಬರಲ್ಲ..” ಎಂದೆ.
ನಮ್ಮನೆಯವರು… “ಸುಮ್ಮನೆ ಹಠ ಮಾಡದೆ ಹೊರಗೆ ಬಾ… ನಿನ್ನ ಅಳುಮೋರೆ ತೋರಿಸುವುದು.. ಬೇಡಾ. ಮುಖ ತೊಳೆದು ಬಾ.. ನಮ್ಮ ನೋವು ಬೇರೆಯವರಿಗೆ ಗೊತ್ತಾಗದಂತಿರಬೇಕು ಎಂದು ಎಲ್ಲರಿಗೂ ಉಪದೇಶ ನೀಡ್ತೀ..” ಎಂದು ಹೇಳಿದರೋ ಹಂಗಿಸಿದರೋ ಗೊತ್ತಾಗಲಿಲ್ಲ.
ಹೊರಗೆ ಬಂದೆ.. ಅಬ್ಬಾ ಕಾಲನಿಯವರು.. ಅವರ ಜೊತೆ ನಮ್ಮ ವಾರ್ಡಿನ ಇತರರರೂ ಇದ್ದರು..
ಒಬ್ಬರು ಮುಂದೆ ಬಂದು ನನ್ನೆದುರು ಕುಳಿತು “ನಮ್ಮನ್ನು ದಯವಿಟ್ಟು ಕ್ಷಮಿಸಿ..ಎಂದು ನಾವು ಹೇಳುವುದಿಲ್ಲ. ನೀವು ಉಮೇದುದಾರರಾಗಲು ಉಮೇದು ಕೊಟ್ಟದ್ದು, ಒತ್ತಾಯಿಸಿದ್ದು ಎಲ್ಲಾ ನಾವೇ.. ಆದರೆ ಸೋಲಲು ಕೂಡಾ ನಾವೇ ಕಾರಣರಾದೆವು.. ನೀವು ಮತ ಕೇಳಲು ನಡೆಸಿದ ಓಡಾಟದಲ್ಲಿ ನಮಗೆ ಅರ್ಥವಾಯಿತು. ನೀವು ಈ ಚುನಾವಣೆಯಲ್ಲಿ ಕೌನ್ಸಿಲರ್ ಆದರೆ ಮುಂದೆ ಎಮ್ಮೆಲೇ, ಎಂಪಿ, ಮಂತ್ರಿಯಾದರೆ ನೀವು ನಮಗೆ ಸಿಕ್ಕುವುದಿಲ್ಲ… ನಿಮನ್ನು ಕಳಕೊಳ್ಳಲು ನಮಗಿಷ್ಟವಿಲ್ಲ, ನಿಮಗೆ ಅಧಿಕಾರ, ಪದವಿ ಇಲ್ಲದಿದ್ದರೂ ನಮ್ಮ ಕೆಲಸವನ್ನು ಮಾಡಿಸಿಕೊಡುತ್ತೀರಿ… ಎಂದು ನಮಗೆ ಅನುಭವದಿಂದ ತಿಳಿದಿದೆ. ನೀವು ನಮ್ಮ ಜೊತೆಯೇ ಸದಾ ಇರಬೇಕು… ಈ ರಾಜಕೀಯದ ಕೊಳಚೆಗೆ ಇಳಿಯುವುದು ಬೇಡಾ.. ನಿಮ್ಮನ್ನು ತಿಳಿದವರು ಕೂಡಾ ರಾಜಕೀಯಕ್ಕೆ ನೀವಿಳಿದೊಡನೆ ನಿಮ್ಮ ಬಗ್ಗೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸುವುದನ್ನು ಕೇಳಿ ನಾವೆಲ್ಲ ಪಕ್ಷೇತರ ಅಭ್ಯರ್ಥಿಯನ್ನೇ ಗೆಲ್ಲಿಸಬೇಕೆಂಬ… ತೀರ್ಮಾನ ತೆಗೆದುಕೊಂಡೆವು. ಅವರೂ ನೀವು ಒಂದೇ ಪಕ್ಷದವರಾದ ಕಾರಣ ಅವರು ಹೇಗೂ ಆ ಪಕ್ಷಕ್ಕೆ ಸೇರುವ ಕಾರಣ ಪಕ್ಷಕ್ಕೇನೂ ನೀವು ಸೋಲುವುದರ ಪರಿಣಾಮವೇನೂ ಆಗಲ್ಲ.. ನೀವು ಮಾತ್ರ ಯಾವಾಗಲೂ ಹಿಂದಿನಂತೆ ನಮ್ಮ ಜೊತೆ ಇರಬೇಕು..” ಎಂದು ಪ್ರೀತಿಯಿಂದ ಮನವಿ ಮಾಡುವಾಗ ಅವರ ಆಲೋಚನೆಗಳಿಗೆ ಸೋತು ಹೋದೆ.
ಎಡಗಾಲನ್ನು ಇಟ್ಟು ರಾಜಕೀಯಕ್ಕೆ ಕಾಲಿಟ್ಟೆ… ಬಲಗಾಲನ್ನು ಹೊರಗಿಟ್ಟು ನನ್ನ ಹಳೆಯ ಹವ್ಯಾಸಗಳಲ್ಲಿ ತೊಡಗುವ ನಿರ್ಧಾರ ಮಾಡಿದೆ… ನಡುವೆ ಏನೇನೋ ಕನಸುಗಳನ್ನು ಕಂಡೆ..
ಇವತ್ತು ಫಲಿತಂಶಕ್ಕಾಗಿ ಕಾಯುತ್ತಿರುವಾಗ… ಈ ಬೋಗಿಯೊಂದು…. ಸದ್ದು ಮಾಡುತ್ತಾ… ಹೊಸಬಣ್ಣಗಳಿಂದ ಕೂಡಿ.. ಸರಿದು ಹೋಯಿತು..
ವೀಣಾ ಶಾನುಭೋಗ್
Preservation by Sumanth Shanbhogue for Shanbhogue Publications

Leave a comment