ಜೀವನ ಸಂಧ್ಯಾರಾಗ – 3

ನಮ್ಮನೆಯವರು ಬಂದ ಕೂಡಲೇ.. “ವೃದ್ಧಾಶ್ರಮದಲ್ಲಿ ಹೆಡಿಗೆ ಭಟ್ಟರು ಸಿಕ್ಕಿದ್ರು. ನೀವು ಭೇಟಿಯಾಗಬೇಕಂತೆ..” ಎಂದೆ. ಅವರು ಒಂದು ಸಲ ಶಾಕ್ ಆದಂತೆ “ನಿನಗೆ ಹೇಗೆ ಗೊತ್ತು ಅವರೇ ಅಂತ… ಯಾರನ್ನ ನೋಡಿ ಯಾರೋ ಅಂದ್ಕೊಂಡು ಹೇಳಿದ್ದೀಯಾ ಎಂತ..” ಎಂದರು.

ಹೌದು ಸುಳ್ಳಲ್ಲ… ಅವರಿಗೆ ಅನುಮಾನ ಬರುವುದು.. ಅವರಷ್ಟು ಚೆನ್ನಾಗಿ ಮನುಷ್ಯರನ್ನು ನೆನಪಿಟ್ಟುಕೊಳ್ಳುವುದು… ನನ್ನಿಂದ ಸಾಧ್ಯವಿಲ್ಲ. ಹಲವಾರು ಬಾರಿ ಸಂಕಷ್ಟಕ್ಕೆ ಈಡು ಮಾಡಿದ..ದೊಡ್ಡ (ದಡ್ಡ) ಮನಿಷಿ…ಅಂದ್ರೆ ಅದು ನಾನೇ…? “ಇಲ್ಲಾರಿ… ನೀವಂದಂತೆ ನನಗೆ ಗುರ್ತು ಸಿಕ್ಕಲಿಲ್ಲಾ… ಅವರೇ ಸ್ವತಃ ಹೇಳಿದ್ರು…”

“ಹೌದಾ…ಹಾಗಾದರೆ ನಾಳೆಯೇ ಹೋಗೇನೆ…” “ನಾನೂ ಬರ್ಲಾ…” ಎಂದೆ. ನೀನು ಇವತ್ತು ಹೋಗಿ ಬಂದಿದ್ದಿಯಷ್ಟೇ…ಪುನಃ ಎಂತಕ್ಕೆ..” ಎಂದರು.

ನನ್ನ ಮೊಮ್ಮಗಳು “ಅಜ್ಜಾ.. ಅದೆಂತ ಹೆಸರು… ಹೆಡಿಗೆ ಭಟ್ಟರು.. ಅಂತೆ..” ಎಂದು ನಕ್ಕಳು. ನಮ್ಮನೆಯವರು “ಅವರ ಮುತ್ತಾತನ ಕಾಲದಲ್ಲಿ ದೇವಸ್ಥಾನಕ್ಕೆ ಬೇಕಾದಷ್ಟು ಹೆಡಿಗೆ (ಕುಕ್ಕೆ, ಬುಟ್ಟಿ) ಗಳನ್ನು ಹೆಣಿಸಿ ಕೊಡ್ತಿದ್ದರಂತೆ. ಅವರ ತೋಟದಲ್ಲಿ ಅಷ್ಟು ಬಿದಿರೂ ಇರ್ತಿತ್ತು… ಮಾಡಿ ಕೊಡಲಿಕ್ಕೆ ಕೆಲಸದವರೂ ಇದ್ದರು. ಈಗ ಬಿದಿರಿನ ಮೆಳೆಯೂ ಇಲ್ಲ… ಮಾಡಲಿಕ್ಕೆ ಬರುವ ಆಳುಗಳೂ ಇಲ್ಲ… ಹೆಸರು ಮಾತ್ರ ಇದೆ..”ಎಂದರು.

ಅವಳು “ಹೌದಾ…” ರಾಗ ಎಳೆದು ಹೋದರೂ ನಮ್ಮವರು ಅಲ್ಲಿಂದ ಹೊರಗೆ ಬರಲಿಲ್ಲ.. ಹೇಳ್ತಾ ಹೋದರು. “ಎಷ್ಟು ಶ್ರೀಮಂತರು.. ಎಲ್ಲವೂ ಪಿತ್ರಾರ್ಜಿತ.. ಇವರೂ ಹಾಳು ಮಾಡಿಲ್ಲ. ಚೆನ್ನಾಗಿಯೇ ರೂಢಿಸಿಕೊಂಡು ಬಂದಿದ್ದರು. ಅವರಪ್ಪ ಹೆಣ್ಣುಮಕ್ಕಳನ್ನು ಕೊಡುವಾಗ ಶ್ರೀಮಂತರ ಮನೆಗೆ ಕೊಡಬೇಕು. ತರುವಾಗ ಬಡವರ ಮನೆಯಿಂದ ತರಬೇಕು.” ಎಂದು ಯಾವಾಗಲೂ ನಮ್ಮ ಮಾವನವರ ಹತ್ತಿರ ಹೇಳುತ್ತಿದ್ದರಂತೆ. ಅಷ್ಟೇ ಅಲ್ಲ ಬಡವರ ಮನೆಯಿಂದ ತಂದರೂ ಕೂಡಾ..

ಆದರೆ ಆದದ್ದೇನು..? ಆಕೆಗಾದರೋ ತಾಯಿ ಮನೆಯವರ ಬಗ್ಗೆಯೇ ಕಾಳಜಿ ಹೆಚ್ಚು. ಮಾವ, ಅತ್ತೆ, ಗಂಡನೇ ಆಗಲೀ ಯಾರೂ ಏನೂ ಹೇಳುತ್ತಿರಲಿಲ್ಲ. ಹೆಣ್ಣುಮಕ್ಕಳಿಗೆ ಅದೆಲ್ಲಾ ಸಹಜ ಎಂದುಕೊಂಡು ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಒತ್ತಾಸರೆ ನೀಡುತ್ತಿದ್ದರು. ಹೇಗೂ ನಾಲ್ಕು ಸಂಸಾರ ಸಾಕುವ ಯೋಗ್ಯತೆಯೂ ಇತ್ತು. ಹಿಂದಿನಿಂದಲೂ ನಮ್ಮ ಅಂಗಡಿಯ ಕಾಯಂ ಗಿರಾಕಿಗಳು..

ಇತ್ತೀಚೆಗೆ ಒಮ್ಮೆ ಅವರ ವಿಷಯ ಮಾತುಮಾತಲ್ಲಿ ಬಂದಾಗ ಭಾವನವರು “ಅವರ ನಾಲ್ಕೂ ಗಂಡು ಮಕ್ಕಳಿಗೆ ಮದುವೆಯಾದ ಮೇಲೆ ಸೊಸೆಯಂದಿರಲ್ಲಿ ಜಗಳ ಆಗಿ ತೋಟ ಐದು ಪಾಲಾಗಿ ಬೇರೆಬೇರೆ ಮನೆಯೂ ಆಯಿತು. ಹೆಂಡತಿ ತನಗೂ ಒಂದು ಪಾಲು ಬೇಕು ಅಥವಾ ಹಣ ಬೇಕೆಂದು ಹಠ ಮಾಡಿ ಪಾಲಿನ ಹಣವನ್ನು ತೆಗೆದುಕೊಂಡು ಅಣ್ಣನ ಮನೆಗೆ ಖಾಯಂ ಆಗಿ ಅಲ್ಲೇ ಇರುತ್ತೇನೆಂದು ಹೋದಳು.

ಮತ್ತೆ ಒಂದು ವರ್ಷ ಭಟ್ಟರು ತಮ್ಮ ಪಾಲನ್ನು ನೋಡಿಕೊಳ್ಳುತ್ತಾ ಇದ್ದು ಆಮೇಲೆ ಅದನ್ನು ಪಕ್ಕದ ತೋಟದ ಹೆಬ್ಬಾರರಿಗೆ ಮಾರಿದರಂತೆ. ಇಷ್ಟು ಆದ ಮೇಲೆ ಆ ಪುಣ್ಯಾತ್ಮ ಎಲ್ಲಿ ಹೋದನೆಂದೇ ಗೊತ್ತಿಲ್ಲ. ಮಕ್ಕಳಿಗಾಗಲೀ ಹೆಂಡತಿಗಾಗಲೀ… ಚಿಂತೆಯೇ ಇಲ್ಲ.. ನನಗೂ ಒಂದು ಮಾತು ಹೋಗುವಾಗ ಹೇಳಲಿಲ್ಲ ನೋಡು. ಒಂದು ವಾರ ಮೊದಲು ಸಿಕ್ಕಿದಾಗ ಹೆಬ್ಬಾರರಿಗೆ ತೋಟ ಮಾರಿದ ವಿಷಯ ಹೇಳಿದರು. ಮುಂದೆ ಎಂತ ಮಾಡ್ತೀರಿ ಕೇಳಿದರೆ… ಯೋಚಿಸಲಿಲ್ಲ.. ಎಂದರು ಭಾರೀ ಬೇಸರದಲ್ಲಿದ್ದರು.. ಪಾಪ.. ನಾಲ್ಕು ಜನರಿಗೆ ಸಹಾಯ ಮಾಡುವ ಮನಸ್ಸಿನವರಾಗಿದ್ದರು..” ಹೇಳಿದ್ದರಂತೆ.

ಹೆಂಡತಿಗೂ ಬುದ್ದಿಯಿಲ್ಲ ನೋಡು…ಈ ವಯಸ್ಸಿನಲ್ಲಿ ಗಂಡನನ್ನು ಬಿಟ್ಟು ಅಲ್ಲಿ ಹೋಗಿ ನಿಂತಿದ್ದಾರಲ್ಲಾ.. ಇವರು ಇಲ್ಲಿ ಇರುವ ವಿಷಯ ಊರಲ್ಲಿ ಯಾರಿಗೂ ಗೊತ್ತಿಲ್ಲ.. ನೋಡು.. ಇಲ್ಲದಿದ್ದರೆ ನಾನು ನಿನ್ನನ್ನು ಬಿಟ್ಟು ಬರುವಾಗ ಅವರ ಹತ್ತಿರ ಮಾತನಾಡಿ ಬರ್ತಿದ್ದೆ. ಈಗಲೇ ಅಣ್ಣನಿಗೆ ಫೋನ್ ಮಾಡಿ ಹೇಳೇನೆ..” ಎಂದು ಹೇಳಿ ಎದ್ದರು.

ನಾನು “ಬೇಡಾರಿ.. ಅವರು ಹೇಳದೇ ಬಂದಿದ್ದಾರೆ… ಅಂದ ಮೇಲೆ ಅವರಿಗಿಷ್ಟವಿಲ್ಲವೋ ಏನೋ..? ನಾಳೆ ಅವರ ಹತ್ತಿರ ಮಾತನಾಡಿ ಆ ಮೇಲೆ ಅವರ ಒಪ್ಪಿಗೆ ಇದ್ದರೆ ಮಾತ್ರ ಹೇಳಿ.. ಮತ್ತೆ ನಿಮ್ಮ ಇಷ್ಟ ಇದು ಕೇವಲ ನನ್ನ ಅಭಿಪ್ರಾಯ…” ಎಂದೂ ಹೇಳಿದೆ.

ಅವರಿಗೂ ಹೌದು ಅನಿಸಿತೋ ಏನೋ…ಸುಮ್ಮನಾದರು. ಮರುದಿನ ಅವರ ಜೊತೆ ನಾನೂ ಹೊರಟೆ…ಅವರ ನಡುವೆ ನಾನಿದ್ದರೆ ಮುಜುಗರವಾಗಬಹುದೆಂದು ನನ್ನ ಗೆಳತಿಯ ಹತ್ತಿರ ಮಾತನಾಡಲು ಹೋದೆ.

ಇವರ ಮಾತುಕತೆ ಮುಗಿದ ಮೇಲೆ ನನ್ನನ್ನೂ ಕರೆದೊಯ್ಯಲು ಬಂದರು. ಗಾಡಿಯವರೆಗೆ ಭಟ್ಟರೂ ಬಿಡಲು ಬಂದರು.

ಮತ್ತೆ ಗಾಡಿಯಲ್ಲಿ ಬರುವಾಗ ಇವರು ಅದೇ ಭಾವ ಹೇಳಿದಷ್ಟನ್ನೇ ಹೇಳಿ “ಊರು ಬಿಟ್ಟವರು ಹಣವನ್ನಷ್ಟೂ ಠೇವಣಿಯಾಗಿಟ್ಟು ತೀರ್ಥ ಕ್ಷೇತ್ರಗಳನ್ನೆಲ್ಲಾ ಸುತ್ತಾಡಿ ಬಂದು ವೃದ್ಧಾಶ್ರಮದಲ್ಲಿಯೇ ಉಳಿದ ಜೀವನ ತೆಗೆಯುವ ಯೋಚನೆಯಿಂದ ಇಲ್ಲಿಗೆ ಬಂದು ಸೇರಿದರು”.

ನಾನು ನಡುವೆ ಬಾಯಿಹಾಕಿ “ಅವರು ತೋಟದ ಕೆಲಸದಲ್ಲಿ ಇಡೀ ದಿನ ಇರ್ತಾರೆ…ನಾನು ಕೆಲಸದವರೆಂದು ಕೊಂಡಿದ್ದೆ” ಎಂದೆ.

ಅದಕ್ಕೆ “ಅವರಿಗೆ ಆ ಕೆಲಸ ಅಂದ್ರೆ ಜೀವ…ಅದರಲ್ಲಿ ಇರುವ ಖುಷಿ ನೆಮ್ಮದಿ…ಇನ್ಯಾವುದರಲ್ಲೂ… ಇಲ್ಲ.. ಹಾಗಾಗಿ ಯಾರ ಜೊತೆಯೂ ಸೇರದೆ.. ಜಪತಪ, ಯೋಗ ವ್ಯಾಯಾಮ, ಭಜನೆ ಯಾವುದರಲ್ಲೂ ಭಾಗವಹಿಸದೆ ಸದಾ ಇದೇ ಕೆಲಸದಲ್ಲಿ ತೊಡಗಿರುತ್ತೇನೆ ಎಂದು ಇಲ್ಲಿ ಸೇರುವಾಗಲೇ ತಮ್ಮ ಶರತ್ತು ಹಾಕಿದ್ದರಂತೆ” ಹೇಳಿದರು.

ಇನ್ನೂ ಏನೋ ಹೇಳುತ್ತಲೇ ಇದ್ದರು… ನನಗೆ ಮಾತ್ರ ಒಂದೂ ಕಿವಿಗೆ ಬೀಳುತ್ತಿರಲಿಲ್ಲ… ಮನಸ್ಸಿನಲ್ಲಿಯೇ “ನಾವು ಹೇಗಿದ್ದರೇನು..? ಏನು ಮಾಡಿದರೇನು..? ಪೂರ್ವಜನ್ಮದ ಕರ್ಮವೋ…ಈ ಜನ್ಮದ ಮರ್ಮವೋ…ಏನೇನು ಅನುಭವಿಸಬೇಕೋ ಅದನ್ನೆಲ್ಲಾ ಅನುಭವಿಸಲೇಬೇಕಲ್ವಾ… ನೀರಿನ, ಅನ್ನದ ಋಣ ಎಲ್ಲೆಲ್ಲಿ ಇರುತ್ತದೋ ಅಲ್ಲಿ ಇರಲೇ ಬೇಕಲ್ಲಾ… ಎಂದೆಲ್ಲಾ ಯೋಚಿಸುತ್ತಲೇ ಮನೆ ತಲುಪಿದೆ..


ವೀಣಾ ಶಾನುಭೋಗ್

Preservation by Sumanth Shanbhogue for Shanbhogue Publications

Response

  1. ಜೀವನ ಸಂಧ್ಯಾರಾಗ – 2 – Shanbhogue Publications Avatar

Leave a comment