ಜೀವನ ಸಂಧ್ಯಾರಾಗ – 4

ಮತ್ತೆ ಕೆಲವು ದಿನಗಳೇ ಕಳೆದವು. ಹಬ್ಬಗಳು ಪೂಜೆ ಪಾರಾಯಣ, ದೇವಸ್ಥಾನ ಅಲ್ಲಿ ಇಲ್ಲಿ ತಿರುಗಾಟದಲ್ಲಿ ಗೆಳತಿಯ ನೆನಪು ಬಂದರೂ ವೃದ್ಧಾಶ್ರಮದತ್ತ ಹೋಗಲಾಗಲಿಲ್ಲ. ಹೋಗುವುದೆಂದರೆ ನನಗೆ ಒಂದೆರಡು ಗಂಟೆಗಳಂತೂ ಬೇಕು. ಹಾಗೆ ಹೋಗಿ ಹೀಗೆ ಬರುವುದೆಂದರೆ ನನ್ನ ಸ್ವಭಾವಕ್ಕೆ ಹೊಂದುವ ವಿಷಯವಲ್ಲ. ಇವತ್ತು ಹೋಗುವ ಅನಿಸಿತು. ಇವತ್ತು ಹೋಗಲಾಗದಿದ್ದರೆ ಮತ್ತೆ ದೀಪಾವಳಿ, ಅಲ್ಲಲ್ಲಿ ತುಳಸೀದೀಪ, ಉತ್ಸವ, ಲಕ್ಷ ದೀಪೋತ್ಸವ ಅಂತ ಹೊತ್ತು ಸಿಕ್ಕಲಾರದೆಂದು ಹೊರಟೆ. ನಮ್ಮನೆಯವರೂ ಹೊರಟರು.

ಅವರಿಗೆ ಬೇಕಾದವರಿದ್ದರಲ್ಲ… ಅವರನ್ನು ವಿಚಾರಿಸಲೆಂದೋ ಅಥವಾ ಸಮಯವಿತ್ತೋ.. ಏನೇ ಇರಲಿ ನನಗೆ ಅನುಕೂಲವಾಯಿತೆಂದು ಸಂತೋಷವಾಯಿತು.. ಹೋದೆವು. ನಮ್ಮವರು ಗಂಡಸರ ವಿಭಾಗಕ್ಕೆ ಹೋದರೆ ನಾನು ಹೆಂಗಸರ ವಿಭಾಗಕ್ಕೆ ಹೋದೆ.

ಗೆಳತಿಯ ಕೋಣೆಗೆ ಹೋಗಲು ಅವಳು ಚೆನ್ನಾಗಿಯೇ ಇದ್ದಳಷ್ಟೇ. ಮುಖದಲ್ಲಿ ಸಂತೋಷ, ಶಾಂತಿ, ನೆಮ್ಮದಿ ಎಲ್ಲವೂ ಎದ್ದು ಕಾಣುತಿತ್ತು. ನನ್ನನ್ನು ನೋಡಿ ಅವಳಿಗೆ ತುಂಬಾ ಖುಷಿಯಾಯಿತು. ನನ್ನನ್ನು ಪಕ್ಕದಲ್ಲಿಯೇ ಕೂರಿಸಿ ತುಂಬಾ ದಿನವಾಯಿತಲ್ವಾ.. ನೀನು ಬಂದು.. ಗಮ್ಮತ್ತಾ ನವರಾತ್ರಿ.. ಇಲ್ಲೂ ತುಂಬಾ ಒಳೊಳ್ಳೆಯ ಕಾರ್ಯಕ್ರಮಗಳಿದ್ದವು. ಹೊತ್ತು ಹೋದದ್ದೇ ಗೊತ್ತಾಗಲಿಲ್ಲ.” ಎಂದಳು.

ಮತ್ತೆ ನನ್ನ ಖಾಲಿ ಕೈ ನೋಡಿ “ನನ್ನ ಸೊಸೆ ಏನನ್ನೂ ಕಳಿಸಿಲ್ಲವಾ..?” ಎಂದಳು. ನಾನು ಆಶ್ಚರ್ಯದಿಂದ ಅವಳನ್ನೇ ನೋಡಿದೆ. ಅದಕ್ಕೆ ಅವಳು “ಹಾಗೆಂತ ನೋಡ್ತೀ…ನೀನು ತಂದ ತಿಂಡಿಗಳೆಲ್ಲಾ ನನ್ನ ಸೊಸೆಯೇ ಮಾಡಿ ಕಳಿಸಿದ್ದು ಎಂದು ನನಗೆ ಗೊತ್ತಿದೆ. ಅವಳಿಗೆ ಎಲ್ಲಾ ನಾನೇ ಅಲ್ವಾ ಕಲಿಸಿದ್ದು. ಮದುವೆಯಾಗಿ ಬರುವಾಗ ಅವಳಿಗೆ ಚಹಾ, ಕಾಫಿ ಮಾಡಲು ಬಿಡು ಹಾಲು ಕಾಯಿಸಲು ಬರುತ್ತಿರಲಿಲ್ಲ. ಹಾಗಾಗಿ ನನ್ನ ಕೈ ರುಚಿಯೇ ಅವಳ ಅಡುಗೆಗಳಿಗೆ ಇರುತ್ತದೆ.” ಎಂದಳು.

ನಾನು ಪೆಚ್ಚಾಗಿ ನಕ್ಕು “ಇರಲಿ ಬಿಡು.. ಸೊಸೆಯ ಜೊತೆ ಇಲ್ಲದಿದ್ದರೂ ಕೈರುಚಿ ಗೊತ್ತಾಗಿದೆಯಲ್ವಾ..” ಎಂದೆ.

ಅವಳು “ಅಷ್ಟೇ ಅಲ್ಲ ನೀನು ಆವತ್ತು ನೀನು ಒಬ್ಬರ ಹತ್ತಿರ ಹೇಳಿದ್ದಿಯಲ್ಲಾ…ನಾನು ಚೆನ್ನಾಗಿ ಮಾಗಿದ ಮೇಲೆ ನನ್ನನ್ನು ಮನೆಗೆ ಹೋಗುವಂತೆ ಮಾಡುತ್ತೇನೆ.. ಎಂದೂ.. ನನ್ನ ಮಗ ಸೊಸೆ ನನ್ನ ಬರುವಿಕೆಗಾಗಿ ಕಾಯುತ್ತಿದ್ದಾರೆಂದೂ.. ಗೊತ್ತಾಗಿದೆ..” ಎಂದಳು.

ನನಗಾದರೋ ಭೂಮಿ ಬಾಯ್ದಿಡಬಾರದೇ ಅನಿಸಿತು. ನನಗೆ ಏನೂ ಹೇಳಲು ತೋಚಲಿಲ್ಲ. ತಲೆ ತಗ್ಗಿಸಿದೆ. ಅವಳೇ ಮುಂದುವರಿಸಿದಳು..
“ಅಲ್ಲಾ ನಾನು ಎಷ್ಟೋ ವರ್ಷದಿಂದ ರೂಢಿಸಿಕೊಂಡ ನನ್ನ ಸ್ವಭಾವ, ನಾಯಕತ್ವ ಗುಣ ಹೋಗುತ್ತಾ. ನೀವೆಲ್ಲಾ ದುರಭಿಮಾನ ಅನ್ನಿ, ಅಹಂಕಾರ ಅನ್ನಿ . ನಾನು ನನ್ನ ಸ್ವಭಾವವನ್ನು ಸ್ವಾಭಿಮಾನ, ನನ್ನತನ ಎನ್ನುತ್ತೇನೆ. ಅದು ನನ್ನ ಜೊತೆಯೇ ಹೋಗುವುದೇ ಹೊರತು ಅದನ್ನು ಬಿಡಲಾಗುತ್ತದೆಯೇ..” ಎಂದು ನಕ್ಕಳು.

ನನಗೆ ನಗು ಬರಲಿಲ್ಲ. ನನ್ನ ಗ್ರಹಚಾರ ಕೆಟ್ಟಿದೆ.. ಬೆಳಿಗ್ಗೆ ಎದ್ದೊಡನೆ ಯಾರ ಮುಖ ನೋಡಿದ್ದೋ.. ಭಗವಂತಾ ನೀನೇ ಕಾಯಬೇಕಪ್ಪಾ.. ಎಂದು ಮನಸ್ಸಿನಲ್ಲೇ ಅಂದ್ಕೊಳ್ತಾ ತೆಪ್ಪಗಿದ್ದೆ.
ಮತ್ತೆ ಅವಳೇ ಹೇಳಿದಳು.. “ನೀನು ಬೇಜಾರು ಮಾಡಿಕೊಳ್ಳಬೇಡಾ… ನಾನಿಷ್ಟು ಹೇಳಿದ್ದೇನೆ ಎಂದು.. ನನಗನಿಸಿದ್ದನ್ನು ನಿನ್ನ ಹತ್ತಿರ ಹೇಳದೆ ಯಾರ ಹತ್ತಿರ ಹೇಳುವುದು. ಎಲ್ಲವನ್ನೂ ಹೇಳಬೇಕೆನಿಸಿತು. ಮನಸ್ಸಿನಲ್ಲಿ ಇಟ್ಟುಕೊಳ್ಳುವುದನ್ನು ಬಿಟ್ಟು ಹೊರಗೆ ಹಾಕಲೇಬೇಕು ಅನಿಸಿತು.”

“ಇಲ್ಲಪ್ಪಾ ನನಗೇನೂ ಬೇಸರವಿಲ್ಲ… ನಿನಗನಿಸಿದ್ದನ್ನು ನೀನು ಹೇಳಿದಿಯಷ್ಟೇ…ಅದರಲ್ಲಿ ಯಾವುದೇ ವೈಯಕ್ತಿಕ ವಿಷಯ ಯಾವುದೂ ಇಲ್ಲದ ಕಾರಣ ಬೇಸರ ಪಡುವುದ್ಯಾಕೆ..? ಹೋಗಲಿ ಬಿಡು.. ನೀನೀಗ ಮತ್ತೆ ಮನೆಗೆ ಹಿಂದಿರುಗುವ ಯೋಚನೆ ಮಾಡಿದ್ದೀಯಾ…ಹೇಗೆ…..? ಅಲ್ಲಾ ನಾನು ನಿನಗೆ ಹೇಳುವುದೆಂತದೂ ಇಲ್ಲ..ನನಗಿಂತಲೂ ಎಂಟತ್ತು ವರ್ಷ ದೊಡ್ಡವಳು ನೀನು.. ನಿನಗಿರುವಷ್ಟು ಸಂಸಾರದ ಜ್ಞಾನವಾಗಲೀ.. ಬದುಕಿನ ತಿಳುವಳಿಕೆಯಾಗಲೀ.. ನನಗಿಲ್ಲ. ಮತ್ತೆ ನೀನು ನನಗೆ ಉತ್ತರ ಕೊಡದಿದ್ದರೂ ನಾನು ಬೇಸರ ಪಡುವುದಿಲ್ಲ.. ನೀನುಂಟು ನಿನ್ನ ಮಕ್ಕಳುಂಟು.. ನನ್ನ ಹರಕು ಬಾಯಿ ತನ್ನ ಸ್ವಭಾವದಂತೆ ನಿನ್ನನ್ನು ಕೇಳಿ ಬಿಟ್ಟಿತು..ನೋಡು..?? ಬಾಯಿಯಿಂದ ಹೊರಟ ಮಾತು, ಒಡೆದ ಮುತ್ತು. ಬತ್ತಳಿಕೆಯಿಂದ ಹೊರಟ ಬಾಣ, ಚೆಲ್ಲಿದ ಮೊಸರು, ಒಡೆದ ಹಾಲು ಇವೆಲ್ಲಾ ಯಾವತ್ತೂ ಸರಿ ಪಡಿಸಲು ಸಾಧ್ಯವಿಲ್ಲ… ಅಲ್ವಾ..” ಅವಳ ಮಾತುಗಳನ್ನು ಕೇಳಿ ನನಗೂ ಯಾಕೋ ಬೇಸರವಾಗಿತ್ತು…

ನನ್ನ ಮಾತುಗಳಿಗೆ ಪ್ರತ್ಯುತ್ತರವೆಂಬಂತೆ “ನಾನು ಇಲ್ಲೇ ಇರುವ ನಿರ್ಧಾರ ಮಾಡಿದ್ದೇನೆ. ಒಂದು ಸಲ ಬಿಟ್ಟ ಮೇಲೆ ಮತ್ತೆ ಹೋದರೆ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಂತಾಗುವುದು. ಅದಕ್ಕಿಂತಲೂ ನಾನು ಇಲ್ಲಿ ಕಂಡ ಹಲವು ಜನರ ಸಮಸ್ಯೆಗಳನ್ನು ನೋಡುವಾಗ ನನ್ನದು ಸಮಸ್ಯೆಯೇ ಅಲ್ಲ. ಹೆಚ್ಚಿನವರು ಇನ್ನೂ ಮಕ್ಕಳು ಮೊಮ್ಮಕ್ಕಳ ಜೊತೆ ದಿನಗಳನ್ನೇ ಕಳೆದಿಲ್ಲ.. ಅಷ್ಟರಲ್ಲೇ ತಮ್ಮ ಸ್ವಾರ್ಥಕ್ಕೆ ಅಕ್ಷರಶಃ ಮನೆಯಿಂದ ಹೊರಗೆ ತಳ್ಳಲ್ಪಟ್ಟಿದ್ದಾರೆ. ಅವರನ್ನು ನೋಡುವಾಗ ನನಗೆ ತುಂಬಾ ಬೇಸರವಾಗುತ್ತದೆ. ಕೆಲವರಿಗೆ ಊಟತಿಂಡಿ ಕೂಡಾ ಮಾಡಲು ಮನಸ್ಸಿಲ್ಲದಂತೆ ಮನೆಯ ಕೊರಗನ್ನು ಹಚ್ಚಿಕೊಂಡಿದ್ದಾರೆ. ನನಗೆ ಹಾಗೇನೂ ಇಲ್ಲ. ನಾನು ಇಲ್ಲಿ ಬಂದು ಒಳ್ಳೆಯದನ್ನೇ ಮಾಡಿದ್ದೇನೆಂದು ಅನಿಸುತ್ತಿದೆ. ಹಿಂದಿನ ಕಾಲದಲ್ಲಿ ವಾನಪ್ರಸ್ಥಕ್ಕೆಂದು ತಮ್ಮ ಗುರುಗಳ ಆಶ್ರಮಕ್ಕೆ ಹೋಗುತ್ತಿದ್ದರೆಂದು ಓದಿದ್ದೆ. ಇದೂ ಒಂದು ತರಹ ಹಾಗೇ ಇದೆ. ಯೋಗ, ವ್ಯಾಯಾಮ, ಜಪ, ಭಜನೆ, ಪ್ರವಚನ ಹೀಗೆ ಇದುವರೆಗೂ ನಿಯಮಿತವಾಗಿ ಮಾಡಲಾಗದ್ದನ್ನೆಲ್ಲಾ ಇಲ್ಲಿ ಮಾಡಬಹುದು. ಚಿಂತನೆಗೂ ಸಾಕಷ್ಟು ಸಮಯ ಸಿಕ್ಕುತ್ತದೆ. ಬೇಕಾದಷ್ಟು ಸಮಯವಿರುವ ಕಾರಣ ಬೇಕಾದಷ್ಟು ಓದಬಹುದು, ಏನಾದರೂ ಕೆಲಸವನ್ನೂ ಮಾಡಬಹುದು, ಹರಟೆ ಹೊಡೆಯಲು ಸಾಕಷ್ಟು ಸಮವಯಸ್ಕರೂ ಸಿಕ್ಕಿದ್ದಾರೆ. ಅದೂ ಅಲ್ಲದೆ ಪಕ್ಕದಲ್ಲೇ ಇರುವ ಗೋಶಾಲೆಗೋ, ಅನಾಥಾಶ್ರಮಕ್ಕೋ ಹೋದರೆ ನನಗೆ ಸಮಯ ಹೇಗೆ ಕಳೆದು ಹೋಗುತ್ತದೆ ಎಂದೇ ಗೊತ್ತಾಗುವುದಿಲ್ಲ. ಹಾಗೆ ಅನಿವಾರ್ಯವಾದರೆ ಮತ್ತೆ ಮರಳಿ ಮನೆಗೆ ಬರುವೆನೆಂದು ಸೊಸೆಗೂ ಮಗನಿಗೂ ಹೇಳಿದ್ದೇನೆ. ಅವರೂ ಆಗಾಗ ಬಂದು ಹೋಗುತ್ತಾರೆ. ನಾನು ಮಾಡಿದ್ದು ಸರಿಯಾಗಿಯೇ ಇದೆಯಲ್ವಾ…ಏನಂತಿಯಾ..?” ಎಂದಳು.

ನಾನು “ನಿನ್ನ ಇಷ್ಟ…ನಿನಗೆ ಸರಿ ಅನಿಸಿದ ಹಾಗೆ ಮಾಡು..” ಎಂದೆ.

ಅಷ್ಟರಲ್ಲಿ ನಮ್ಮವರ ಕರೆ ಬಂತು.. ಹೊರಟೆ. ದಾರಿಯುದ್ದಕ್ಕೂ ನಮ್ಮನೆಯವರು ಗಂಡಸರ ವಿಭಾಗದಲ್ಲಿ ಅವರ ಪರಿಚಯದ ಇನ್ನೂ ಕೆಲವರು ಸಿಕ್ಕಿದ ಬಗ್ಗೆ ಹೇಳುತ್ತಾ ಇದ್ದರು. ಹೆಚ್ಚಿನವರು ಅದೇ…ಪ್ರೀತಿಯಿಂದ ಸರ್ವಸ್ವವನ್ನೂ ಮಕ್ಕಳಿಗಾಗಿಯೇ ದುಡಿದು ಕಲಿಸಿ ಉನ್ನತ ಸ್ಥಾನಕ್ಕೆ ತಲುಪಿಸಿ, ಅವರಿಂದಲೇ ತಿರಸ್ಕೃತರಾಗಿ ಬಂದವರೇ.

ಆದರೆ ನನ್ನ ಗೆಳತಿ ಹೇಳಿದಂತೆ ಸಾಕಷ್ಟು ಡೆಪೋಸಿಟ್ ಇಟ್ಟು, ಕೈ ತುಂಬಾ ಹಣವಿದ್ದವರಿಗೆ ಇಲ್ಲಿಯ ವ್ಯವಸ್ಥೆಯಿಂದ ಯಾವುದೇ ಶ್ರಮವಿಲ್ಲದೆ ವಾನಪ್ರಸ್ಥಕ್ಕೆ ಬಂದವರಂತೆ ಇರಬಹುದು. ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಿ ಸಲಹಿ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡಿದವರ ಗತಿ? ತಮಗಾಗಿ ಯಾವುದೇ ನಿವೃತ್ತಿ ವೇತನ, ಯಾವುದೇ ಉಳಿತಾಯ ಖಾತೆ ಇಲ್ಲದ,ಯಾವುದೇ ಕೆಲಸ ಮಾಡಲು ಶಕ್ತರಲ್ಲದವರ ಕತೆ …?


ವೀಣಾ ಶಾನುಭೋಗ್

Preservation by Sumanth Shanbhogue for Shanbhogue Publications

Leave a comment