ಯಾರೋ ಹುಟ್ಟು ಹಾಕಿದ ಉಚಿತವಾಗಿ ಇರಬಹುದಾದ ವೃದ್ಧಾಶ್ರಮದಲ್ಲಿ ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಾ ಇರುವವರ ಕತೆ ಏನು ಎನ್ನುವ ಯೋಚನೆ ಬರುತ್ತಿತ್ತು. ಅಲ್ಲಿಯ ಜವಾಬ್ದಾರಿಯುತ ಸ್ಥಳದಲ್ಲಿ ಬೇಜವಾಬ್ದಾರಿಯಿಂದ ತಮ್ಮ ಸ್ವಾರ್ಥಕ್ಕಾಗಿ ವೃದ್ಧಾಶ್ರಮವನ್ನು ಬಳಸುತ್ತಿರುವವರ ಬಗ್ಗೆ ಸಿಟ್ಟು ಬರುತ್ತದೆ.
ಅಂತಹ ಕಡೆಯೂ ಕಾರಣಾಂತರಗಳಿಂದ ಹೋಗಿದ್ದೆ. ಒಳ್ಳೆಯ ಹುದ್ದೆಯಲ್ಲಿರುವವರ ಹೆತ್ತವರು ಇಲ್ಲಿ ಅನಾಥರಂತೆ ಕೊರಗುತ್ತಿರುವಾಗ ಕಣ್ಣಲ್ಲಿ ನೀರು ಬರುತ್ತಿತ್ತು. ಹೆತ್ತಮಕ್ಕಳನ್ನು ನಂಬುವುದು ತಪ್ಪಾ ಅನಿಸುತಿತ್ತು.
ವೃದ್ಧಾಶ್ರಮಗಳ ಬಗ್ಗೆ ನನಗೆ ಕೋಪ ಬರುತಿತ್ತು. ಇಂತಹ ವೃದ್ಧಾಶ್ರಮಗಳಿವೆಯೆಂಬ ಕಲ್ಪನೆಯೂ ಇರಲಿಲ್ಲ. ಈಗ ನನ್ನ ಗೆಳತಿಯಿಂದ ಇದನ್ನೂ ನೋಡುವ ಭಾಗ್ಯ ಸಿಕ್ಕಿತು. ಹಾಗಾದರೆ ವೃದ್ಧಾಶ್ರಮಗಳು ಇದ್ದರೆ ಪರವಾಗಿಲ್ಲ.
ಹುಟ್ಟಿಸಿದ ಮಕ್ಕಳು ತಮ್ಮ ಹೆತ್ತವರನ್ನು ತೀರಾ ಬಳಲಿಸದೆ, ತಮ್ಮನ್ನು ಈ ಸ್ಥಾನಕ್ಕೆ ಹತ್ತಲು ತಾವು ಮೆಟ್ಟಲಾಗಿ ಸವೆದಿದ್ದಾರೆ ಎನ್ನುವ ಭಾವನೆಯಿಂದ ಕೊನೆಯ ಪಕ್ಷ ಋಣ ತೀರಿಸಲಾದರೂ ಸತ್ತ ಮೇಲೆ ಸಾವಿರಾರು ಜನರಿಗೆ ಹೆತ್ತವರ ಹೆಸರಿನಲ್ಲಿ ಊಟ ಹಾಕದೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ದೇಣಿಗೆ ಕೊಟ್ಟು ದೊಡ್ಡದಾಗಿ ಹೆಸರು ಬರೆಸುವ ಬದಲಿಗೆ ಇಂಥಹ ವೃದ್ಧಾಶ್ರಮಗಳಿಗೆ ಸೇರಿಸಬಹುದಲ್ವಾ..ಎಂದು ನನ್ನೊಳಗೇ ತೀರ್ಮಾನಕ್ಕೆ ಬಂದೆ. ನಮ್ಮವರೊಂದಿಗೆ ಹೇಳಿಯೂ ಬಿಟ್ಟೆ.
ಅವರು “ಅಂದರೆ ನಿನ್ನ ಅಭಿಪ್ರಾಯದಲ್ಲಿ ಎಲ್ಲೆಡೆ ವೃದ್ಧಾಶ್ರಮಗಳು ಇರಬೇಕೆಂದೋ..” ಎಂದರು.
“ಹಾಗಲ್ಲಾರೀ.. ವೃದ್ಧಾಶ್ರಮಗಳೆಂದರೆ ನನಗೆ ಮೈ ಉರಿಯುತಿತ್ತಲ್ವಾ, ಆ ಭಾವನೆಯಿಂದ ಈಗ ಹೊರ ಬಂದಿದ್ದೇನೆ. ಅವುಗಳಿದ್ದರೆ ತಾನೇ ಮಕ್ಕಳು ಹೊರಗಟ್ಟುವುದು. ಇಲ್ಲಾ ಅಂದ್ರೆ ಮನೆಯಲ್ಲಿಟ್ಟುಕೊಳ್ಳುವುದು ಅನಿವಾರ್ಯ ಅನಿಸುತಿತ್ತು. ಆ ಭಾವನೆ ಬದಲಾಯಿತು.” ಎಂದೆ.
“ಮನೆಯಲ್ಲಿಟ್ಟುಕೊಂಡು ಹೊಟ್ಟೆಗೆ ಹಿಟ್ಟು ನೀಡದವರೆಷ್ಟು ಮಂದಿ ಇದ್ದಾರೆ. ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಕೊಡುವವರೆಷ್ಟು ಮಂದಿ ಇದ್ದಾರೆ. ಮನೆಗೊಂದು ಬಿಟ್ಟಿ ಆಳು ಸಿಕ್ಕಿತು.. ಎನ್ನುವವರೆಷ್ಟಿದ್ದಾರೆ.. ಗೊತ್ತಿಲ್ವಾ.. ನಿನಗೆ. ಇಂತವರಿಗಾಗಿಯೇ ಈ ವೃದ್ಧಾಶ್ರಮಗಳು ಹುಟ್ಟಿಕೊಂಡವು. ಇರುವುದು ತಪ್ಪಲ್ಲ ನಾವು ಅದನ್ನು ಬಳಸಿಕೊಳ್ಳುವ ರೀತಿ ತಪ್ಪು. ಎಲ್ಲವೂ ಅಷ್ಟೇ. ಸಮಸ್ಯೆಗಳಿಗಾಗಿ ಪರಿಹಾರಗಳು ಸಿಕ್ಕುತ್ತವೆ. ಆದರೆ ಮನುಷ್ಯ ಜಾತಿ ಆ ಪರಿಹಾರದಲ್ಲಿ ನೂರು ಸಮಸ್ಯೆ ಹುಟ್ಟಿಸುತ್ತದೆ… ದುರುಪಯೋಗ ಮಾಡಿಕೊಳ್ಳುತ್ತದೆ. ಅಷ್ಟೇ…” ಎಂದರು.
ನಮ್ಮನೆಯವರ ಹತ್ತಿರ ಹೆಚ್ಚು ವಾದ ಮಾಡಲಿಕ್ಕೆ ಹೋಗಲಿಲ್ಲ.. ಅವರ ಮಾತುಗಳಿಗೆ ಒಪ್ಪಿದಂತೆ ಸುಮ್ಮನಾದೆ. ಮನೆ ತಲುಪಿದ ನಂತರ ಸೊಸೆಯ ಬಳಿ ನನ್ನ ಮತ್ತು ವೃದ್ಧಾಶ್ರಮದ ನಡುವಿನ ದ್ವಂದ್ವಗಳನ್ನು ಹೇಳಲು ಪಕ್ರಮಿಸಿದೆ. ಅವಳಿಗೆ ನನ್ನ ಮತ್ತು ನನ್ನ ಸ್ನೇಹಿತೆಯ ನಡುವೆ ನಡೆದ ಸಂಭಾಷಣೆಯನ್ನು ಹೇಳಿ.. “ಅವಳಿಗೆ ಎಲ್ಲವೂ ಚೆನ್ನಾಗಿದ್ದರೂ ಅಲ್ಲೇ ಇರ್ತೇನೆ ಎಂದಳು…ನೋಡು..”ಎಂದೆ.
“ಅವರಿಗೇ ಇಷ್ಟವಿಲ್ಲವೆಂದ ಮೇಲೆ ನಿಮಗ್ಯಾಕೆ ಬೇಜಾರು. ಬಿಡಿ.. ಅವರ ಮಗ ಸೊಸೆಯಾದರೂ ನೆಮ್ಮದಿಯಿಂದ ಇರಲಿ..” ಎಂದಳು.
ನಾನು ಸರಕ್ಕೆಂದು “ಹಾಗಾದರೆ ಅತ್ತೆಯಂದಿರು ಜೊತೆಯಲ್ಲಿದ್ದರೆ ನೆಮ್ಮದಿಯಿಂದ ಇರುವುದು ಕಷ್ಟ ಎಂದು ನಿನ್ನ ಅಭಿಪ್ರಾಯವೇ…ನೀನು ಹೀಗೆ ಹೇಳ್ತಿ ಅಂತ ಅಂದ್ಕೊಂಡಿರಲಿಲ್ಲ ..ನೋಡು. ನಾವೆಲ್ಲ ನಿಮ್ಮ ಹಾಗೆ ಯೋಚನೆ ಮಾಡಿದ್ದಾದರೆ…”
ನನ್ನ ಮಾತುಗಳು ಮುಗಿಯಬೇಕಾದರೆ ಅವಳು “ಅಯ್ಯೋ ನಾನು ಹಾಗೆ ಹೇಳಿದ್ದಲ್ಲ… ಅವರಾಗೇ ಸಿಟ್ಟು ಮಾಡಿಕೊಂಡು ಹೋದದ್ದು ತಾನೇ.. ಅವರಾದರೂ ಎಷ್ಟೊಂದು ಬೇಡಿಕೊಂಡರೂ ತಿರಸ್ಕರಿಸಿದ್ದು ಅವರೇ ಅಲ್ವಾ… ಅವರಿಗಾಗಿ ನಾವ್ಯಾಕೆ ತೂ…ತೂ ಮೈ.. ಮೈ ಶುರು ಮಾಡೋದು. ನಿಮ್ಮ ಮೂಡ್ ಹಾಳಾಗಿದೆ…ಚಹಾ ಕುಡಿದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ..”ಎಂದು ಚಹಾ ತಂದು ಕೊಟ್ಟಳು.
ನಿಜ ನನ್ನ ಮನಸ್ಥಿತಿ ಕೆಟ್ಟುಹೋದ ಹಾಗಿತ್ತು. ಸುಮ್ಮನೆ ಒಂದು ಪುಸ್ತಕ ಕೈಯಲ್ಲಿ ಹಿಡಿದು ಕೂತೆ… ಮನಸ್ಸು ಮಾತ್ರ ಏನೇನೋ ಯೋಚನೆ ಮಾಡುತಿತ್ತು. ಹಿಂದಿನ ಹಾಗೆ ಅವಿಭಕ್ತ ಕುಟುಂಬಗಳಿದ್ದರೆ ಈ ಸಮಸ್ಯೆಗಳೇ ಇರುತ್ತಿರಲಿಲ್ಲವೋ ಏನೋ.. ನಾನು ಕಂಡ ಅವಿಭಕ್ತ ಕುಟುಂಬಗಳ ಒಳಗೆ ಹೊಕ್ಕು ಕೆದಕ ತೊಡಗಿದೆ.
ಹೌದು ಪ್ರತಿಯೊಂದು ಕುಟುಂಬದಲ್ಲೂ ಗಂಡಸರು ಹೇಗೇ ಇರಲಿ… ಅಲ್ಲಿ ಹೆಂಗಸರ ವಿಷಯ ಹೇಳುವುದಾದರೆ ಲಲಿತಾ ಸಮಾನಭಾವದಿಂದ ನೋಡುವ ನಿಸ್ವಾರ್ಥಿಯಾದರೆ ತನಗೆಂದು ತನ್ನ ಗಂಡ ಮಕ್ಕಳಿಗೆಂದು ಎತ್ತಿಡುವ ರಜಿತಾಳು ಇದ್ದಳು. ಯಾರೇ ಆಗಲಿ ಸೇವೆಯನ್ನು ಮಾಡುವ ಎಲ್ಲರ ಮನಸ್ಸನ್ನು ಗೆಲ್ಲುವ ನಿವೇದಿತಾಳು ಇರುತಿದ್ದಳು. ಮಮತಾಳು ಇರುತಿದ್ದಳು. ಗಂಡ ಮಕ್ಕಳು ಇದ್ದೂ ಇಲ್ಲದಂತಿರುವ ಸವಿತಾಳೂ ಇರುತ್ತಿದ್ದಳು. ಎಲ್ಲರನ್ನೂ ಕಳೆದುಕೊಂಡ ಕವಿತಾಳೂ ಇದ್ದಳು. ಆದರೆ ಮನಸ್ಸಿನಲ್ಲಿ ಎಷ್ಟೇ ಸಿಟ್ಟು ಅಸೂಯೇ ಇದ್ದರೂ ಇಷ್ಟು ಜನರಲ್ಲಿ ಒಬ್ಬಳಾದರೂ ಇನ್ನೊಬ್ಬಳಿಗೆ ಕಷ್ಟದಲ್ಲೋ, ದುಃಖದಲ್ಲೋ ಸಹಾನುಭೂತಿ ತೋರಿಸುತ್ತಿದ್ದಳು. ಇವರೆಲ್ಲರ ನಡುವೆ ಒಬ್ಬಳು ಮಂಥರೆಯು ಇದ್ದರೂ ಎರಡು ಹೊತ್ತಿನ ಕೂಳಂತೂ ಇರುತ್ತಿತ್ತು. ಅದಕ್ಕಿಂತಲೂ ಹೆಚ್ಚಿನ ಅಪೇಕ್ಷೆ ಅಂದಿನ ಹೆಣ್ಣುಮಕ್ಕಳಿಗೆ ಇರಲಿಲ್ಲ.
ಆದರೆ ಈಗ ಕಾಲ ಬದಲಾಗಿದೆ.. ಹೆಣ್ಣು ಗಂಡಿಗೆ ಸರಿಸಮಾನವಾಗಿ ದುಡಿಯುವ ಆಕಾಂಕ್ಷೆ ಹೊಂದಿದ್ದಾಳೆ. ಹಿಂದೆಯೂ ಅವಳು ಸರಿಸಮಾನವಾಗಿ ದುಡಿಯುತ್ತಿದ್ದಳು. ಆದರೆ ಅದಕ್ಕೆ ಬೆಲೆ ಇರಲಿಲ್ಲ. ಆಧುನಿಕತೆ ಬೆಳೆದಂತೆ ಅವುಗಳ ಅಪೇಕ್ಷೆಯೇ ತನ್ನದೇ ಸ್ವತಂತ್ರ ಸಾಮ್ರಾಜ್ಯವನ್ನು ಸ್ಥಾಪಿಸುವ ಬಯಕೆಯನ್ನು ಈ ಅವಿಭಕ್ತ ಕುಟುಂಬ ಬೆಂಬಲಿಸುವ ಮನಸ್ಸು ಹೊಂದಿರುತ್ತದೆಯೇ.. ಹೋಗಲಿ ಪ್ರತಿಭೆ ಇದ್ದರೂ ಅದನ್ನು ಬೆಂಬಲಿಸುವವರು ಇರುತ್ತಿದ್ದರೆ… ತಾನು ಸಾಧಿಸಲಾಗದುದನ್ನು ಇನ್ನೊಬ್ಬರು ಮಾಡಲೆಂದು ಬಯಸುವ ಮನೋಭಾವದವರು ಇರುವಂತೆಯೇ. ತನ್ನಿಂದ ಸಾಧ್ಯವಾಗದನ್ನು ಇನ್ನೊಬ್ಬರು ಮಾಡಬಾರದೆನ್ನುವುದಷ್ಟೇ ಅದಕ್ಕೆ ಅಡ್ಡಗಾಲು ಹಾಕುವವರು ಸಾಕಷ್ಟು ಮಂದಿ ಇರುತ್ತಾರೆ. ಯಾವುದೇ ಪ್ರತಿಭೆ ಹೊರಹೊಮ್ಮಲು ಅವಕಾಶವಿತ್ತೇ… ಭೇದಭಾವ, ತಾರತಮ್ಯ, ಅಧಿಕಾರ ದಾಹ, ಸ್ವಾರ್ಥ, ಇಂತಹವುಗಳನ್ನು ನೋಡುವಾಗ ವಿಭಕ್ತ ಕುಟುಂಬ ಲೇಸು ಅನಿಸುತ್ತದೆ. ಹಾಗಾದರೆ ವೃದ್ಧಾಶ್ರಮಗಳಿಗೆ ವಿಭಕ್ತ ಕುಟುಂಬಗಳು ಕಾರಣ ಅಲ್ಲವೇ..?
ಛೇ.. ಬೇಸರ ಕಳೆಯಲು ಚಹ ಕುಡಿದು ಪುಸ್ತಕ ಹಿಡಿದವಳಿಗೆ ಇನ್ನೂ ತಲೆ ಕೆಟ್ಟು ಮೊಸರಿನ ಮಡಿಕೆಯಾಯಿತು. ನನ್ನ ಸೊಸೆ ಬಂದು “ಸಾಕು ಓದಿದ್ದು..ಆಗಲಿಂದ ನೋಡ್ತಿದ್ದೇನೆ.. ಒಂದೇ ಒಂದು ಪುಟ ಮಗುಚಲಿಲ್ಲ.. ಇಷ್ಟು ಹೊತ್ತಿಗೆ ಆ ಪುಸ್ತಕ ಮುಗಿಸಿ ಬದಿಗಿಡಬೇಕಿತ್ತು. ನಿಮ್ಮ ಟಿ.ವಿ. ಸೀರಿಯಲ್ ಸಮಯ ಆಯಿತು. ಹೊರಗೆ ಬನ್ನಿ” ಎಂದಳು. ನಾನು “ಎಲ್ಲಾ ಸೀರಿಯಲ್ಗಳಲ್ಲಿ ಒಂದು ಎಂಟರಿಂದ
ಮೂವತ್ತೈದು ಜನರಿರುವ ಸಂಸಾರ. ಅವರ ನಡುವೆ ಇರುವ ಕಿರಿಕಿರಿಗಳು ಸಾವಿರಾರು. ಎಲ್ಲರಿಗೂ ಪ್ರೀತಿಸಲಿಕ್ಕೆ ಒಬ್ಬಳು. ಮದುವೆ ಮಾಡಿಕೊಳ್ಳಕ್ಕೆ ಒಬ್ಬಳು..ಟಿ.ವಿ.ನೂ ಬೇಡಾ ಏನೂ ಬೇಡಾ..” ಎಂದೆ.
ನನ್ನ ಸೊಸೆ ಯಾವತ್ತೂ ಏನೂ ಹೇಳದವಳು..ಬಾಯಿ ಬಿಟ್ಲು… “ನೀವು ಎಲ್ಲರಿಗೂ ದೊಡ್ಡದಾಗಿ ಹೇಳೀರಿ. ನಕಾರಾತ್ಮಕ ಚಿಂತನೆಗಳಿರುವವರ ಜೊತೆ ಮಾತನಾಡುವಾಗ.. ಕಾಲ ಕಳೆಯುವಾಗ ಯಾವಾಗಲೂ ನಾವು ಸಕಾರಾತ್ಮಕ ಚಿತ್ತದಿಂದ ಇರಬೇಕು. ಇಲ್ಲದಿದ್ದರೆ ನಮ್ಮ ಮನಸ್ಸು ಹಾಳಾಗುತ್ತದೆಯೆಂದು. ನೀವು ಹೋಗಿ ಅಲ್ಲಿಂದ ಬೇಡದ ಯೋಚನೆಗಳನ್ನು ತರ್ತೀರಿ. ಮನೆಗೆ ಬಂದ ಮೇಲೆ ಮಗ, ಸೊಸೆ, ಗಂಡ ಎಲ್ಲರ ಮೇಲೂ ಏನೋ ಸಂಶಯ, ನೆಮ್ಮದಿ ಇಲ್ಲದ ಹಾಗೆ ಇರುವ ಬದಲಿಗೆ ಹೋಗದಿದ್ದರೆ ಒಳ್ಳೆಯದು. ಇನ್ನು ಮುಂದೆ ಅಲ್ಲಿಗೆಲ್ಲಾ ಹೋಗಬೇಡಿ. “ಅತ್ತೆಗೊಂದು ಕಾಲ ಸೊಸೆಗೊಂದು ಕಾಲ” ಅನ್ನುವುದು ಹೇಳಲಿಕ್ಕೆ ಮಾತ್ರ ಅಲ್ಲ. “ನನ್ನ ಸೊಸೆಗೆ ಸೊಸೆ ಬರುವ ಕಾಲ ಬಂತು ಅವಳು ಅತ್ತೆಯಂತೆ ಕೆಲವು ಸಮಯ ಇರಲಿ’ ಎನ್ನುವ ವಿಶಾಲ ಮನೋಭಾವ ಇರಬೇಕು. ಅವಳೂ ಇನ್ನೊಂದು ಮನೆಯಿಂದ ಸರ್ವಸ್ವವನ್ನೂ ಬಿಟ್ಟು ಇದೇ ತನ್ನ ಮನೆ ಎಂದು ಭಾವಿಸಿ ಬರ್ತಾಳೆ. ಯಾಕೆ ಅತ್ತೆಯೂ ಒಂದು ದಿನ ಈ ಮನೆಗೆ ಸೊಸೆಯಾಗಿಯೇ ಬಂದವಳಲ್ಲವಾ..? ಗಯ್ಯಾಳಿ ಅತ್ತೆ ಸಿಕ್ಕಿದರೆ ತನಗೆ ಸೊಸೆ ಬಂದ ಮೇಲೆ ತಾನು ಗಯ್ಯಾಳಿಯಾಗದೆ ಪ್ರೀತಿಯಿಂದ ನೋಡಿಕೊಳ್ಳಬಾರದೆ.. ಗಾದೆ ಮಾತು ಇರುವುದು..ಇವತ್ತು ನೀನು ನಿನ್ನ ಸೊಸೆಗೆ ತಾಯಿಯಂತಿದ್ದರೆ ನಾಳೆ ನಿನಗೆ ವಯಸ್ಸಾದಾಗ ಅವಳು ಮಗಳಾಗಿರುತ್ತಾಳೆ ಅಂತ ಹೊರತು..ಅತ್ತೆಯಾಗಿ ಕಾಟ ಕೊಡು ಅಂತ..ಅಲ್ಲ. ವೃದ್ಧಾಶ್ರಮಗಳು ಹುಟ್ಟಲು ನಮ್ಮ ನಮ್ಮ ಮನಸ್ಥಿತಿಯೇ ಕಾರಣ.. ಯಾರ ಯಾರ ಜೊತೆಯೋ ಹೊಂದಿಕೊಂಡು ಹೋಗುತ್ತೇವೆ.. ದಾರಿಯಲ್ಲಿ, ಬಸ್ಸಲ್ಲಿ ಯಾರಾದರೂ ಅನಾವಶ್ಯಕ ಬೈದರೆ ಜಗಳ ಬೇಡಾ ಅಂತ ತೆಪ್ಪಗಿರುವ ಅತ್ತೆಗೂ ಸೊಸೆಗೂ ಮನೆಯಲ್ಲಿ ಸ್ವಲ್ಪ ಸಹಿಸಿಕೊಂಡು ಹೊಂದಿಕೊಂಡು ಹೋಗಲಾಗುವುದಿಲ್ಲವೇ..? ಹೋದೆಡೆ ಅಡುಗೆ ಸ್ವಲ್ಪ ಹಾಳಾಗಿದ್ದರೆ ಬಾಯಿ ಮುಚ್ಚಿ ತಿನ್ನುವವರಿಗೆ ಮನೆ ಅಡುಗೆ ಆಕಸ್ಮಿಕವಾಗಿ ಏನಾದರೂ ಆದರೆ ಒಂದು ದಿನ ಸಹಿಸಿಕೊಳ್ಳಲಾಗುವುದಿಲ್ಲವೇ.. ? ತಾಯಿಗೆ ನೋವಾಗುತ್ತದೆ ಎಂದು ಚಿಂತಿಸುವ ಸೊಸೆಗೆ “ತನ್ನ ತಾಯಿಯಂತೆ ಅತ್ತೆಯೂ ಒಬ್ಬಳು ತಾಯಿ.. ಅತ್ತೆಯಂತೆ ತಾನೂ ಒಬ್ಬಳು ತಾಯಿ..” ಎನ್ನುವ ಯೋಚನೆ ಇರಬೇಕು. ಮಾಯಿ..ನಾನು ಇದನ್ನೆಲ್ಲಾ ನಿಮಗೆಂದು ಹೇಳಿದ್ದಲ್ಲ ಮತ್ತೆ ನೀವು ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿ. ನಿಮ್ಮದೇ ರೀತಿಯಲ್ಲಿ ಸಕಾರಾತ್ಮಕ ಯೋಚನೆ ಮಾಡಿ.. ನೀವು ಯಾವತ್ತು ಆ ಗೆಳತಿಯನ್ನು ಭೇಟಿ ಮಾಡಲು ಪ್ರಾರಂಭಿಸಿದಿರೋ ನಿಮ್ಮ ತಲೆ ತುಂಬಾ ವೃದ್ಧಾಶ್ರಮಗಳೇ ತುಂಬಿವೆ. ಅವುಗಳಿಗೆ ಕಾರಣ ಹುಡುಕುವುದೇ ಆಗಿದೆ. ಕಾರಣಗಳು ಅವರವರ ಮನೋಭಾವ. ಯೋಚನೆ ಮಾಡುವ ರೀತಿಗಳು..”
ಇನ್ನೂ ಇವಳು ಬಾಯಿ ಮುಚ್ಚದಿದ್ದರೆ ನನ್ನ ಅತ್ತೆಯ ಸ್ಥಾನವನ್ನು ಇವಳು ಆಕ್ರಮಿಸಿಕೊಂಡರೆ ಹೆದರಿಕೆಯಿಂದ ನಾನು ಬೇಗ “ ಹೌದು.. ನಾನೂ ಹಾಗೇ ಯೋಚಿಸಿದ್ದೇನೆ.. ನಮ್ಮವ್ವಾ..” ಎಂದು ನಗುತ್ತಾ ಹೇಳಿ.. “ನಿನಗಿಂತಲೂ ಮೊದಲು ನಾನೇ ಹಾಗೇ ಯೋಚಿಸಿದ್ದೇನೆ..” ನೀನು ಹೇಳುವ ಅಗತ್ಯವಿಲ್ಲ.. ವೆಂಬಂತೆ ಒಂದೇ ವಾಕ್ಯದಲ್ಲಿ ಅವಳಿಗೆ ಉತ್ತರಿಸಿ.. ನನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದಷ್ಟೇ ಅಲ್ಲ ಆ ದಿಕ್ಕಿಗೆ ಕಣ್ಣೂ ಹಾಯಿಸಿಲ್ಲ…
ಮೊದಲು ನಮ್ಮನ್ನು ನಾವು ತಿದ್ದಿಕೊಂಡು ಮನುಷ್ಯರಾಗುವುದು ಮುಖ್ಯ. ಒಂದು ಕುಟುಂಬದ ಎಲ್ಲಾ ಸದಸ್ಯರು ಇಂತಹ ಒಂದು ವ್ಯವಸ್ಥೆಗೆ ಕಾರಣರಾಗಿರುತ್ತಾರೆ. ಹಿರಿಯರು, ಕಿರಿಯರು, ಗಂಡಸರು, ಹೆಂಗಸರು.. ಎಂದು ಹೇಳುವಂತಿಲ್ಲ… ಅನಿಸಿತು
ವೀಣಾ ಶಾನುಭೋಗ್
Preservation by Sumanth Shanbhogue for Shanbhogue Publications
Leave a comment