ಅಂದು…..
ಬಾಗಿಲು ಹಾರುಹೊಡೆದಿತ್ತು…
ಹೊರಗಿನಿಂದ ಯಾರೋ ಕರೆದರು..“ಅಮ್ಮಾ…ಅಮ್ಮಾ…”
ನಮ್ಮತ್ತೆ ಹೊರಗೆ ಹೋದರು. “ಒಳಗೆ ಬನ್ನಿ”
“ಅಮ್ಮಾ.. ನಾವು ಅಡಿಕೆ ಮಂಡಿಗೆ ಅಡಿಕೆ ಹಾಕಲು ಹೋಗಿದ್ದೆವು. ಬರುವಾಗ ತಡವಾಯಿತು. ನಮ್ಮದು ಹೊರನಾಡು. ಶ್ಯಾನಭೋಗರಿಗೆ ನಮ್ಮ ಪರಿಚಯ ಉಂಟು. ಕತ್ತಲೆಯಲ್ಲಿ ತುಂಬಿದ ಹೊಳೆ ದಾಟಲು ಆಗುವುದಿಲ್ಲ. ಹಾಗಾಗಿ ಇಲ್ಲಿಗೆ ಬಂದೆವು.”
“ಸರಿ.. ಶ್ಯಾನಭೋಗರು ಇಲ್ಲ.. ಪರವಾಗಿಲ್ಲ. ನಿಮ್ಮ ಊಟ ಆಗಿರಲಿಕ್ಕಿಲ್ಲ. ಬನ್ನಿ ಕೈ ಕಾಲು ತೊಳ್ಕಳ್ಳಿ.. ಎಲೆ ಹಾಕುತ್ತೇನೆ” ಎಂದರು.
ಸರಿ..ಅವರ ಊಟ ಉಪಚಾರ ಆಯಿತು.
ನನ್ನನ್ನು ಕರೆದು..”ಅವರಿಗೆ ಹೊರಗಿನ ಹಾಲಿನಲ್ಲಿ ಮಲಗುವ ವ್ಯವಸ್ಥೆ ಮಾಡು. ಕಂಬಳಿ ಕೊಡು ಮಳೆ ಬೇರೆ ಸುರೀತಿದೆ. ಒಂದು ಚಿಮಣಿ ಸಣ್ಣದಾಗಿ ಉರಿಯುವಂತೆ ಇಡು. ಒಂದು ಚೆಂಬಲ್ಲಿ ನೀರು ಇಡು… ಪಾಪ. ರಾತ್ರಿ ಬೇಕಾದೀತು…”ಎಂದರು..
ಹಾಗೆ ಅವರತ್ತ ತಿರುಗಿ “ನಿಮಗೆ ಏನಾದರೂ ಬೇಕಾದರೆ ಕರೆಯಿರಿ..ನಾನೋ ನನ್ನ ಸೊಸೆಯೋ ಬರುತ್ತೇವೆ..”ಎಂದರು.
ನಾನು” ಆಯಿತು” ಎಂಬಂತೆ ಕತ್ತಾಡಿಸಿದೆ.
ಇಂದು…..
ಬಾಗಿಲು ಹಾಕಿತ್ತು… ಕರೆಗಂಟೆಯ ಸದ್ದು ಕೇಳಿಸಿತು.
ನನ್ನ ಸೊಸೆ “ಯಾರು?” ಎಂದು ಕೇಳುತ್ತಲೇ ಬಾಗಿಲು ತೆರೆದಳು.
“ನೀವು ಯಾರು? ಯಾರು ಬೇಕಿತ್ತು?”
“ನಾವು ಶ್ಯಾನಭೋಗರ ಸ್ನೇಹಿತರು. ಬೆಂಗಳೂರಿನಿಂದ ಬಂದಿದ್ದೇವೆ. ನಮಗೆ ಬಸ್ಸ್ ಮಿಸ್ಸು ಆಯಿತು. ಹೋಟೆಲ್ಗಳಲ್ಲೂ ರೂಂ ಸಿಗಲಿಲ್ಲ. ಹಾಗಾಗಿ ಇಲ್ಲಿಗೆ ಬಂದೆವು ಮೇಡಂ.”
“ನೋಡಿ ಶ್ಯಾನಭೋಗರು ಇಲ್ಲ. ನಿಮ್ಮ ಪರಿಚಯ ನಮಗೆ ಇಲ್ಲವಲ್ಲ. ಫೋನ್ ಮಾಡಿ ಕೇಳುತ್ತೇನೆ.”
ಗಂಡನಿಗೆ ಕರೆ ಮಾಡಿ ಕೇಳಿದಳು. ವಿವರಗಳನ್ನು ಕೇಳಿ ಹೇಳಲು ಗಂಡ ಬಹುಶಃ ಒಪ್ಪಿಗೆ ಕೊಟ್ಟಿರಬೇಕು.
“ಸರಿ.. ಒಳಗೆ ಬನ್ನಿ.”
ಹಾಲಿನಲ್ಲಿ ಮಲಗುವ ವ್ಯವಸ್ಥೆ ಮಾಡಿದಳು.
ನನ್ನನ್ನು ಕರೆದು “ನೋಡಿ ಯಾರೋ ಏನೋ… ಇವರು ಹೇಳಿದರು ಅಂತ ಒಳಗೆ ಬಿಟ್ಟಿದ್ದೇನೆ. ನೀವು ಬಾಗಿಲಿಗೆ ಚಿಲಕ ಹಾಕಿ ಮಲಗಿ. ಟಾರ್ಚ್, ಮೊಬೈಲು ಪಕ್ಕದಲ್ಲೇ ಇಟ್ಟುಕೊಳ್ಳಿ. ಅಮ್ಮುಣು ಇವತ್ತು ಅವಳ ರೂಮಲ್ಲಿ ಒಬ್ಬಳೇ ಮಲಗಿಕೊಳ್ಳುವುದು ಬೇಡ. ಮಾವ ಬೇರೆ ಊರಲ್ಲಿ ಇಲ್ಲ. ನಿಮ್ಮ ಜೊತೆ ಮಲಗಿಸಿಕೊಳ್ಳಿ. ಯಾರೋ ಏನೋ ನಂಬುವುದು.. ಹೇಗೆ..? ಹಾಂ..ಒಂದು ಕೋಲು, ಚಾಕು ಕೂಡಾ ಪಕ್ಕದಲ್ಲಿ ಇಟ್ಟುಕೊಳ್ಳಿ. ಯಾರಾದರೂ ಕರೆದರೆ ಸುಮ್ಮನೆ ಮಲಗಿಕೊಳ್ಳಿ. ಬಾಗಿಲು ತೆರೆಯಬೇಡಿ..” ಎಂದು ಮರೆಯಲ್ಲಿ ಕರೆದು ಹೇಳಿದಳು.
ಅವರಿಗೆ “ಗುಡ್ ನೈಟ್” ಎಂದು ಹೇಳಿದಳು.
ನಾನು “ಆಯಿತು “ ಎಂಬಂತೆ ಕತ್ತಾಡಿಸಿದೆ.
ವೀಣಾ ಶಾನುಭೋಗ್
Preservation by Sumanth Shanbhogue for Shanbhogue Publications

Leave a Reply