ಚೊಚ್ಚಲು ಹೆರಿಗೆ ಸಂಭ್ರಮ


ಅಂದು…..

ನನ್ನ ನಾದಿನಿ ಚೊಚ್ಚಲು ಹೆರಿಗೆಗೆ ಬಂದಿದ್ದಳು. ಮನೆಗೇ ಸೂಲಗಿತ್ತಿ ಬಂದು ಹೆರಿಗೆ ಸುಸೂತ್ರವಾಗಿ ನಡೆಯಿತು.

ನಮ್ಮತ್ತೆ ತಮ್ಮ ಮಗಳಿಗೆ ಹೇಳುತ್ತಿದ್ದರು.. “ಎರಡು ತಿಂಗಳಿಲ್ಲದೆ ಇದ್ದರೂ ನಲ್ವತ್ತೈದು ದಿವಸವಾದರೂ ನೀನು ಈ ಕೋಣೆಯಿಂದ ಹೊರಗೆ ಬರ್ಲಿಕ್ಕಿಲ್ಲ. ಮಗುವನ್ನು ಹೊರಗೆ ತರಲಿಕ್ಕೆ ಇಲ್ಲ.. ಕತ್ತಲೆ ಅಂತ ಕಿಟಕಿ ಬಾಗಿಲು ತೆರೆದಿಡುವುದು ಬೇಡ.. ಗಾಳಿಗೆ ಥಂಡಿ ಆದೀತು..ಗೊತ್ತಾಯ್ತಾ..”
ನನ್ನ ಸೀರೆ, ಅಪ್ಪನ ಪಂಚೆ ಎಲ್ಲಾ ನೊರೆಕಾಯಿ ಹಾಕಿ ಒಗೆದು, ಬಿಸಿಲಿನಲ್ಲಿ ಒಣಗಿಸಿ ಮಡಚಿ ಇಟ್ಟಿದ್ದೇನೆ. ಅದನ್ನೇ ತೆಗಿ. ಮಗುವಿಗೆ ಅವರಿವರು ಹೇಳ್ತಾರೆ ಅಂತ ಆಸ್ಪತ್ರೆ.. ಮದ್ದೆಲ್ಲಾ ಕೊಡುವುದು ಬೇಡಾ.. ನಾನು ಹೇಳಿದ್ದೇನೆಲ್ಲಾ… ಅದನ್ನೇ ತೇದು ಕೊಡು.. ಮಗುವಿಗೆ ನಿನ್ನ ಹಾಲು ಕಡಿಮೆಯಾಗಿ ಅತ್ತರೆ, ನೀನು ಸ್ನಾನಕ್ಕೆ ಹೋಗುವಾಗ ಬೇಕಾದರೆ ಚಿಂತೆ ಬೇಡಾ.. ಹಸುವಿನ ಹಾಲು ಕುಡಿಸಿ ಕೊಡುತ್ತೇನೆ” ಹೀಗೆ ಇನ್ನೂ ಒಂದು ರಾಶಿ ಸಲಹೆಗಳನ್ನು ಕೊಡುತ್ತಾ ಇದ್ದರು.


ನಡುವೆ ಏನೋ ನೆನಪಾದಂತೆ ನಮ್ಮತ್ತೆ ತಿರುಗಿ.. “ನೋಡು ನೀನು ರಾಶಿ ಓದುತ್ತಾ ಇರ್ತೀಯಲ್ಲಾ.. ಆ ದೇವರ ನಾಮದ ಪುಸ್ತಕ ತೆಗೆದು… ಒಂದು ಚಂದದ ಹೆಸರು ಹುಡುಕು ನೋಡುವಾ…ದೇವರ ಹೆಸರೇ ಇರಲಿ. ಲಕ್ಷ್ಮೀ ವೆಂಕಟರಮಣ, ಫಣಿರಾಮಚಂದ್ರ, ಕೃಷ್ಣ, ದಾಮೋದರ, ಶಂಕರ, ನಾರಾಯಣ ಹೀಗೆ ಎಷ್ಟು ಹೆಚ್ಚು ದೇವರ ಹೆಸರು ಬರುತ್ತೋ ಅಷ್ಟು ಒಳ್ಳೆಯದು.. ಕರೆಯುವಾಗ ದೇವರ ನಾಮ ಜಪ ಮಾಡಿದ ಹಾಗೆ ಆಗಬೇಕು..ಗೊತ್ತಾಯ್ತಾ..?”
ನಾನು ‘ಆಯಿತು’ ಎಂಬಂತೆ ಕತ್ತಾಡಿಸಿದೆ…



ಇಂದು…..
ನನ್ನ ಮಗಳು ಚೊಚ್ಚಲು ಹೆರಿಗೆಗೆ ಬಂದಿದ್ದಳು. ಆಸ್ಪತ್ರೆಯಲ್ಲಿ ಸುಸೂತ್ರ ಹೆರಿಗೆಯಾಯಿತು. ಮನೆಗೂ ಬಂದಾಯಿತು. “ಅಮ್ಮಾ..ಎಂತ ಅಮ್ಮಾ ಕೋಣೆಯ ಕಿಟಕಿ ಬಾಗಿಲೆಲ್ಲಾ ಹಾಕಿ ಕತ್ತಲೆ ಮಾಡಿಟ್ಟಿದ್ದಿ. ಚೆನ್ನಾಗಿ ಗಾಳಿ ಬೆಳಕು ಇರಬೇಕಲ್ವಾ. A/C ಇದ್ರೆ ಚೆನ್ನಾಗಿರ್ತಿತ್ತು. ನಿನಗೆ ಅಲರ್ಜಿ ಅಂತಿ…ಬಿಡು..”
ಈಗ ನಾನು ಹೇಳುವುದನ್ನೆಲ್ಲಾ ಗಮನ ಕೊಟ್ಟು ಕೇಳು..
ಇದು ಮಗುವಿಗೆ drops.. ಬೆಳಗ್ಗೆ.. ಸಂಜೆ..ಇದು ನನಗೆ ಕೊಟ್ಟ medicins.. ಬೇರೆ ಬೇರೆ ಇದು. ಮತ್ತೆ ನೆನಪಿರ್ಲಿ. ಯಾವುದು ಯಾರಿಗೆ ಅಂತ. ಬೆಳಗ್ಗೆ ಸ್ವಲ್ಪ ಹೊತ್ತು ಎಳೆಬಿಸಿಲಿನಲ್ಲಿ ಮಗುವನ್ನು ಹಿಡ್ಕೊಂಡು ನಿಲ್ಲು.. ಮತ್ತೆ ನಾನು onlineಲಿ ತರಿಸಿದ ಮಗುವಿನ ಬಟ್ಟೆಗಳು ಇಟ್ಟಿದ್ದೇನೆ ನೋಡು ಅದನ್ನೇ ಬಳಸು. ಎಣ್ಣೆ, ಶಾಂಪು, ಸೋಪು ಅದನ್ನೇ ಉಪಯೋಗಿಸು. ಮಗುವಿನ ಬಟ್ಟೆಗೆ ಎಂದು ತರಿಸಿದ್ದೇನೆ ನೋಡು ಅದರಲ್ಲಿ ಬಟ್ಟೆ ಒಗೆದು ಹಾಕಿಸು. ಮತ್ತೆ ಮಗುವಿಗೆ ನಾನು ಸ್ನಾನಕ್ಕೆ ಹೋಗ್ತಾ ಅತ್ತರೆ ಹಸುವಿನ ಹಾಲು ಕೊಡುವುದು ಬೇಡಾ..baby milk powder ತರಿಸಿದ್ದೇನೆ. ಅದನ್ನೇ ಕೊಡು…” ಇನ್ನು ಹಲವು ಸಲಹೆಗಳನ್ನು ಕೊಡುತ್ತಲೇ ಇದ್ದಳು…


ನಡುವೆ ಏನೋ ನೆನಪಾದಂತೆ… “ಅಮ್ಮಾ… ನೀನು ನೆಂಟರಿಷ್ಟರ ಮಕ್ಕಳಿಗೆ, ಊರು ಮಕ್ಕಳೆಲ್ಲಾ ಚಂದಚಂದದ ಹೆಸರು suggest ಮಾಡ್ತಿಯಲ್ಲಾ..ನನ್ನ ಕಂದಮ್ಮನಿಗೂ ಹುಡುಕು. ‘ಎ,ಬಿ,ಸಿ’ ಅಕ್ಷರಗಳಿಂದ ಪ್ರಾರಂಭ ಆಗುವ ಹೆಸರೇ ಬೇಕು. ಯಾಕಂದ್ರೆ ನನ್ನ ಮಗುವಿನ ಹೆಸರೇ ಎಲ್ಲಾ ಕಡೆ ಮೊದಲು ಇರಬೇಕು. ಎರಡೇ ಅಕ್ಷರ ಸಾಕು. ಒತ್ತಕ್ಷರ ಬೇಡಾ.. ಉದ್ದದ ಹೆಸರು ಬೇಡಾ.. ಕ(ಕಾ)ದಂಬರಿ- ಕ್ಯಾಂಡಿ, ಸೌಂದರ್ಯ-ಸ್ಯಾಂಡಿ …, ಅರ್ಚನಾ-ಅಚ್ಚು, ಸರಸ್ವತಿ, ಸಾವಿತ್ರಿ-ಸಾತಿ, ಲಕ್ಷ್ಮೀ-ಲಕ್ಕಿ,ಲಚ್ಚಿ, ಶಿಲ್ಪಾ-ಶಿಪ್ಪಿ.. ಆಗ್ತಾರೆ .

ಬೇಡಾ ನೀನು ನೋಡೋದು ಬೇಡಾ..
ಒಂದು ಕೆಲಸ ಮಾಡ್ತೀನಿ…Google search… ಮಾಡ್ತೀನಿ. ಬೇಜಾನ್… ಹೆಸರುಗಳು ಸಿಕ್ತಾವೆ… ಆಯ್ತಾ….”ಎಂದಳು.


ನಾನು “ಆಯಿತು” ಎಂಬಂತೆ ಕತ್ತಾಡಿಸಿದೆ…


ವೀಣಾ ಶಾನುಭೋಗ್

Preservation by Sumanth Shanbhogue for Shanbhogue Publications

Responses

  1. Deepak Nayak Avatar

    ಸಹಜವಾಗಿ ಮೂಡಿದ ವಾಸ್ತವತೆ…!!!

    Like

  2. jalajasashi Avatar

    Sooper ma’am ❤️👌

    Like

Leave a Reply