ಬೋಗಿ – 14

For English Click Here

ಸಂಜೆ ದೇವಸ್ಥಾನಕ್ಕೆ ಹೋಗ್ತಾ ದಾರಿಯಲ್ಲಿ ಯಾರದ್ದೋ ಮನೆಯಲ್ಲಿ ತುಂಬಾ ನುಗ್ಗೆ ಹೂವು ಬಿಟ್ಟಿತ್ತು… ರಸ್ತೆಯಲ್ಲಿ ಹಾಸಿದ ಹಾಗಿತ್ತು.. ಆಸೆಯಾಯಿತು.. ಆದರೆ ರಸ್ತೆಯಲ್ಲಿ ಬಿದ್ದ ಹೂವುಗಳು ಹೆಕ್ಕಲಿಕ್ಕೆ ಆಗದಾಗ “ನೆನಪಿನ ಹಳಿಯಲ್ಲೊಂದು ಬೋಗಿ” ದಢಕ್ ದಢಕ್ ಎಂದು ಬಂದೇ ಬಿಡ್ತು..


ಒಂದು ಸಲ ನಮ್ಮ ಕುಟುಂಬದ ಡಾಕ್ಟರ್ ಆಗಿರುವ ಡಾ. ಸುರೇಶ್ ನೆಗಳಗುಳಿಯವರ ಜೊತೆ ಹರಟೆ ಹೊಡೀತಿರಬೇಕಾದರೆ ಅವರು “ನುಗ್ಗೆಸೊಪ್ಪು ರಕ್ತ ಶುದ್ಧಿಗೆ ತುಂಬಾ ಸಹಕಾರಿಯಾಗುತ್ತದೆ…” ಎಂದರು.


ಸಂಜೆ ವಾಕ್ ಹೋದಾಗ ತರಬೇಕು ಅಂದ್ಕೊಂಡೆ. ಪ್ರತಿದಿನ ಹೆಸರಿಗೆ ವಾಕ್.. ನಮ್ಮ ಮನೆಯಿಂದ ಎರಡು ಕಿ.ಮೀ ದೂರದ ವರೆಗಿನ ಎಲ್ಲರ ಮನೆಯ ವಿಷಯ, ಪ್ರತಿಯೊಬ್ಬರ ಅಂಗಳ ಹಿತ್ತಲಲ್ಲಿ ಇರುವ ಮರಗಿಡಗಳ ವಿಚಾರ ಅಡುಗೆ ಎಲ್ಲದರ ಬಗ್ಗೆಯೂ ಮಾಹಿತಿ ಇರುತಿತ್ತು.

ಈಗ ಎಲ್ಲರೂ ವಾಕಿಂಗ್ ಹೋಗುವುದೆಂದರೆ ಯಾರೋ ಅಟ್ಟಿಸಿಕೊಂಡು ಬರ್ತಾ ಇದ್ದಾರೋ ಎನ್ನುವಂತೆ ನಡೆಯುವುದು.. ಎದುರು ಸಿಕ್ಕಿದ ಪರಿಚಯದವರ ಹತ್ತಿರ ನಕ್ಕರೇ ಮಾತನಾಡಬೇಕಾದೀತು ಎಂಬಂತೆ ಮುಖದ ತುಂಬಾ ಗಾಂಭೀರ್ಯ ತುಂಬಿಕೊಂಡಿರುವ ವಾಕಿಂಗ್ ನಮ್ಮದಾಗಿರಲಿಲ್ಲ.


ಐದು ಗಂಟೆಗೆ ಹೊರಟರೆ ಆರುವರೆಗೆ ಮನೆಯೊಳಗೆ ಹೊಕ್ಕುವ ವಾಕಿಂಗ್.. ನಮಗೆ ವಾಕಿಂಗ್ ಎಂದರೆ ಎಷ್ಟು ದೂರ ಹೋಗ್ತೇವೆ ಅನ್ನುವ ಲೆಕ್ಕ ಅಲ್ಲ. ಐದರಿಂದ ಆರುವರೆವರೆಗೆ ಲೆಕ್ಕ..


ಹಾಗಾಗಿ ಎಲ್ಲರ ಮನೆಯ ದೋಸೆಗಳ ತೂತುಗಳನ್ನು ಲೆಕ್ಕ ಹಾಕುತ್ತಾ, ತೇಪೆ ಹಾಕುತ್ತಾ… ಹೋಗುವುದರಲ್ಲಿ ಕೆಲವೊಮ್ಮೆ ನೂರು ಮೀಟರ್ ಕೂಡಾ ದಾಟಿ ನಮ್ಮ ಕಾಲು ಮುಂದೆ ಹೋಗುತ್ತಿರಲಿಲ್ಲ. ವಾಕಿಂಗ್ ಸಮಯ ಮುಗಿದೇ ಹೋಗುತಿತ್ತು.


ಹಾಗಾಗಿ ಡಾಕ್ಟರ್ ಮಾತು ಕೇಳಿದೊಡನೆ ಯಾರಯಾರ ಮನೆಯಲ್ಲಿ ನುಗ್ಗೆ ಮರ ಇದೆ. ಯಾರ ಮನೆಯ ಸೊಪ್ಪು ಚೆನ್ನಾಗಿದೆ. ಆ ಮನೆಯವರು ಕೊಡುವಂತವರೋ ಎಂಬುವುದನ್ನೆಲ್ಲಾ ಲೆಕ್ಕ ಹಾಕಿ ಮರುದಿನ ಹೋಗುವಾಗ ಕೈಯಲ್ಲೊಂದು ಕೈ ಚೀಲವನ್ನೂ ನೆನಪಿನಿಂದ ತೆಗೆದುಕೊಂಡೆ.


ಉದ್ದಕ್ಕೂ ಹೋಗುವಾಗ ಎಲ್ಲಾ ನುಗ್ಗೆ ಮರಗಳಿಗೂ ಹೂವು ಬಿಟ್ಟಿತ್ತು..ಅಷ್ಟೇ ಅಲ್ಲ ಹೆಚ್ಚಿನ ಎಲ್ಲಾ ಮರಗಳ ಕೆಳಗೆ ಸ್ವಚ್ಛ ಹುಲ್ಲು, ಕಸ, ಕಳೆಗಿಡ ತೆಗೆದು ಸೆಗಣಿ ಸಾರಿಸಿದ್ದರು. ಹೋಗ್ತಾ ನೋಡ್ತಾ ಹೋಗಿ ಹಿಂದೆ ಬರುವಾಗ ಮೊದಲು ಸಿಕ್ಕ ಮನೆಯಲ್ಲಿ ಕೇಳಿದೆವು… “ಹೆಕ್ಕಿಕೊಂಡು ತೆಗೆದುಕೊಳ್ಳಿ, ಮರದ ಗೆಲ್ಲುಗಳನ್ನು
ಅಲುಗಾಡಿಸುವುದಾಗಲೀ ಮುಟ್ಟುವುದಾಗಲೀ ಮಾಡಬಾರದು…” ಎಂದು ತಾಕೀತು ಮಾಡಲು ಒಪ್ಪಿಕೊಂಡೆವು.


ಹೀಗೆ ಪ್ರತೀ ದಿನ ಒಂದೊಂದು ಮನೆಯ ಹೂವುಗಳನ್ನು ಆರಿಸಿ ತರುವುದು ವಾಕಿಂಗ್‌ನ ಉದ್ದೇಶವಾಯಿತು.


ಮೊದಲನೆಯ ದಿನ…
ರಾತ್ರಿಗೆ ಏನಾದರೂ ಮಾಡುವ… ಎಂದು ನೂರು ಗ್ರಾಮ್‌ನಷ್ಟು ಬೇಳೆ ಬೇಯಿಸಿದೆ. ಬೇಳೆ ಬೇಯುವಷ್ಟರಲ್ಲಿ ಹೂವನ್ನು ಬಿಡಿಸಿ ಸ್ವಚ್ಛ ಮಾಡಿದೆ. ಒಂದು ಹೋಳು ತೆಂಗಿನಕಾಯಿ ತುರಿದು ಇಟ್ಟೆ. ಬೇಳೆ ಬೆಂದಿತ್ತು. ಕುಕ್ಕರ್ ಪಕ್ಕಕ್ಕಿಟ್ಟು ಎಂಟು ಒಣ ಮೆಣಸನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದೆ. ಒಲೆ ಆರಿಸಿದೆ. ಕುಕ್ಕರ್‌ನಿಂದ ಬೆಂದ ಬೇಳೆಗೆ ಸ್ವಚ್ಛ ಮಾಡಿ ತೊಳೆದಿಟ್ಟ ಹೂವನ್ನೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಿಸಿದೆ. ಅದು ಬೇಯುವಾಗ ಮಿಕ್ಸಿ ಜಾರಲ್ಲಿ ತುರಿದಿಟ್ಟ ಕಾಯಿ, ಹುರಿದ ಒಣ ಮೆಣಸು, ಅರ್ಧ ಚಮಚ ಕೊತ್ತಂಬರಿ ಬೀಜ, ಸ್ವಲ್ಪ ಹುಣಸೇ ಹುಳಿ ಹಾಕಿ ನುಣ್ಣಗೆ ಅರೆದು.. ಬೇಳೆ, ಹೂವಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕುದಿಸಿ ಸಾಸಿವೆ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಹಾಕಿದೆ. ಜೊತೆಗೆ ರಾಗಿ ಮುದ್ದೆಯನ್ನೂ ಮಾಡಿದೆ.
ಎಲ್ಲರೂ ಖುಷಿಯಿಂದ ಊಟ ಮಾಡಿದ ಮೇಲೆ ಮತ್ತೂ ಉಳಿಯಿತು..

ಸಾಂಬಾರು.. “ಅಂಬಟ್”.

ಮರುದಿನ ಬೆಳಗ್ಗೆ ತಿಂಡಿಗೆ ಉಬ್ಬಿಸಿದ ಅಕ್ಕಿ ರೊಟ್ಟಿ ಮಾಡಿದೆ.. ಮಕ್ಕಳು “ಅಮ್ಮಾ..ಇವತ್ತುಸಂಜೆ ವಾಕ್ ಹೋದಾಗ ಪುನಃ ಹೂವನ್ನು ಹೆಕ್ಕಿ ತರುವನಾ..”ಎಂದರು.

“ಆಯಿತು..”ಎಂದೆ.


“ನಾಳೆ ಬೇರೆ ಏನಾದರೂ ಮಾಡಬೇಕು. ಇವತ್ತು ಮಾಡಿದ “ಅಂಬಟ್” ಬೇಡ…” ಎಂದರು ನಮ್ಮವರು.. “ಆಯಿತು” ಎಂದಳು… ಕೈ ಹಿಡಿದಾಕೆ.. ನಾನು.

ಎರಡನೇ ದಿನ –

ಹೂವುಗಳನ್ನು ಇನ್ನೊಂದು ಮನೆಯ ಅಂಗಳದಿಂದ ಆರಿಸಿ ತಂದೆವು. ಸ್ವಚ್ಛ ಮಾಡಿದೆ. ಆ ಹೂವಿನ ಮೇಲೆ ಅಕ್ಕಿ ಹಿಟ್ಟು ಎರಡು ಚಮಚ, ಅರ್ಧ ಚಮಚ ಕಡಲೆ ಹಿಟ್ಟು, ಅರ್ಧ ಚಮಚ ಬೊಂಬಾಯಿ ರವೆ (ಸಣ್ಣ ರವೆ) ಕಾಲು ಚಮಚ ಜೀರಿಗೆ ಪುಡಿ, ಕಾಲು ಚಮಚ ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಿಟಿಕೆ ಇಂಗು, ಅರ್ಧ ಚಮಚ ಮೆಣಸಿನ ಪುಡಿ, ಒಂದು ಹಸಿ ಮೆಣಸು ಜಜ್ಜಿ ಹಾಕಿ ಚೆನ್ನಾಗಿ ಕಲಸಿದೆ. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಗ್ಯಾಸ್ ಹಚ್ಚಿ ಈರುಳ್ಳಿ ಬಜ್ಜಿಯಂತೆ ಎಣ್ಣೆಯಲ್ಲಿ ಕರಿಯಲು ಎರಡನೇ ದಿನದ ನುಗ್ಗೆ ಹೂವಿನ ಖಾದ್ಯ ಸಿದ್ಧವಾಯಿತು.


ಮೂರನೇ ದಿನ –

ಬೆಳಿಗ್ಗೆ ಆರು ಗಂಟೆಗೆ ಕರೆಗಂಟೆ ಸದ್ದಾಯಿತು. ಏಳು ಗಂಟೆಗೆ ಬರುವ ಹಾಲು ಇವತ್ತೇನಪ್ಪಾ ಬೇಗ ಬಂದಿದ್ದಾನೆ.. ಎಂದುಕೊಂಡು ಹೊರಬಂದರೆ ನನ್ನ ಪ್ರಿಯ ಶಿಷ್ಯ ನುಗ್ಗೆ ಹೂವನ್ನು ತೆಗೆದುಕೊಂಡು ಬಂದಿದ್ದ. ಧನ್ಯವಾದಗಳನ್ನು ಹೇಳಿದರೆ ಮಾಡಿದ್ದನ್ನು ನನಗೂ ತೆಗೆದಿಡಿ.. ಎಂದು ಹೇಳಿ ಹೋದ.


ಹೂವನ್ನು ಬಿಡಿಸಿದೆ, ತೊಳೆದಿಟ್ಟೆ ಎರಡು ಈರುಳ್ಳಿಯನ್ನು ಹೆಚ್ಚಿದೆ. ಒಂದು ಹೋಳು ತೆಂಗಿನಕಾಯಿಯನ್ನು ತುರಿದೆ. ಆರು ಒಣ ಮೆಣಸನ್ನು ಹುರಿದೆ. ಮಿಕ್ಸಿ ಜಾರಲ್ಲಿ ತೆಂಗಿನತುರಿ, ಹುರಿದ ಒಣಮೆಣಸು, ಸ್ವಲ್ಪ ಹುಣಸೇಹುಳಿ, ಕೊತ್ತಂಬರಿ ಬೀಜವನ್ನು ಹಾಕಿ ನೀರು ಹಾಕದೆ ತರಿತರಿಯಾಗಿ ರುಬ್ಬಿ ಇಟ್ಟೆ ಗ್ಯಾಸ್ ಹಚ್ಚಿ ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಹಾಕಿದೆ. ಸಾಸಿವೆ ನನ್ನಂತೆ ವಟವಟ ಎಂದೊಡನೆ ಸಾಕು “ವಟವಟ ಮಾಡಿದ್ದು..” ಎನ್ನುವಂತೆ ಹೆಚ್ಚಿಟ್ಟ ಈರುಳ್ಳಿಯನ್ನು ಹಾಕಿದೆ. ಸ್ವಲ್ಪ ಬಣ್ಣ ಬದಲಾದೊಡನೆ ಅದರಲ್ಲಿ ತೊಳೆದಿಟ್ಟ ಹೂವನ್ನು ಹಾಕಿ ಸ್ವಲ್ಪ ಹುರಿದೆ. ಉಪ್ಪನ್ನು ಹಾಕಿ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಮುಚ್ಚಳ ಮುಚ್ಚಿ ಗ್ಯಾಸ್‌ನ್ನು ಸಣ್ಣದಾಗಿಸಿದೆ. ಎರಡು ಮೂರು ನಿಮಿಷವೆನ್ನುವಾಗ ಮುಚ್ಚಳ ತೆಗೆಯಲು.. ನುಗ್ಗೆ ಹೂವು ಬಿಟ್ಟ ನೀರು ಆರಿ ಹೋಗಿತ್ತು, ಆಗಿಯೇ ಹೋಗಿತ್ತು “ನುಗ್ಗೆ ಹೂವಿನ ಬುತ್ತಿ”
ಮಿಕ್ಸಿ ತೊಳೆಯುವ ಮೊದಲು ಅದರಲ್ಲಿ ಅಳಿದುಳಿದ ಮಸಾಲೆಗೆ ಎರಡು ಟೊಮೇಟೊ ಹಣ್ಣನ್ನು ತೊಳೆದು ಹಾಕಿ ನುಣ್ಣಗೆ ಅರೆದು ತೊಳೆದು ಆ ನೀರಿಗೆ ಎಣ್ಣೆ, ಸಾಸಿವೆ, ಜೀರಿಗೆ, ಇಂಗು, ಕರಿಬೇವಿನ ಸೊಪ್ಪು ಹಾಕಿ ಮಾಡಿದ “ಮಿಕ್ಸಿ ಸಾರು” ಮತ್ತು ಅನ್ನದೊಂದಿಗೆ ನನ್ನನ್ನೂ ಬಡಿಸು…ಎನ್ನುತ್ತಿತ್ತು…“ಈರುಳ್ಳಿಯ ಫ್ಯಾಮಿಲಿ”ಯೊಂದಿಗೆ “ನುಗ್ಗೆ ಹೂವಿನ ಬುತ್ತಿ”


ನಾಲ್ಕನೇ ದಿನ –

ಮುನ್ನಾ ದಿನ ಸಂಜೆ ವಾಕಿಂಗ್ ಹೋದಾಗ ಒಂದು ಮನೆಯವರು “ರೀ…ವೀಣಾ ನೀವು ವಾಕಿಂಗ್ ಬರುವಾಗ ಕೊಡಲಿಕ್ಕೆಂದು ಕೊಡಲು ನುಗ್ಗೆ ಹೂವು ಆರಿಸಿ ಇಟ್ಟಿದ್ದೇನೆ… ನೀವು ಹೋದ ವರ್ಷ ಮಾಡಿದ ಖಾರ ದೋಸೆ ಇಷ್ಟವಾಗಿದೆ. ಈ ಸಲ ಮಾಡಲಿಕ್ಕೆಂದು ನಿಮಗಾಗಿ ಆರಿಸಿ ಇಟ್ಟಿದ್ದೇನೆ.”


ನನಗಾಗಿಯೋ… ತಮಗಾಗಿಯೋ !! ಎಂದು ಯೋಚಿಸುತ್ತಾ… ಮುಖದ ಮೇಲೆ ನಗುವನ್ನು ಮೂಡಿಸುತ್ತಾ ಧನ್ಯವಾದಗಳನ್ನು ತಿಳಿಸಿ, “ಸಂಜೆ ವಾಕಿಂಗ್ ಬರುವಾಗ ನಿಮ್ಮ ಪಾಲಿನ ದೋಸೆ ತಂದು ಕೊಡುತ್ತೇನೆ” ಎಂದು ಹೇಳಿ… ಕಾಲುಗಳಿಗೆ ವಾಕಿಂಗ್ ಸಾಕು… ಮನೆ ಕಡೆ ಹಿಂತಿರುಗಿ ಎಂದು ಅಪ್ಪಣೆ ಕೊಟ್ಟೆ.


ಐದನೇ ದಿನ –

ಹೂವುಗಳನ್ನು ಬಿಡಿಸಿ ತೊಳೆದಿಟ್ಟೆ. ಒಂದು ಲೋಟ ಅಕ್ಕಿಯನ್ನು ನೆನೆಸಿದೆ. ಒಂದು ಗಂಟೆ ನೆನೆದ ಅಕ್ಕಿಯನ್ನು ಮಿಕ್ಸಿ ಜಾರಲ್ಲಿ ಒಂದು ಚಮಚ ಕೊತ್ತಂಬರಿ ಬೀಜ, ಕಾಲು ಚಮಚ ಜೀರಿಗೆ, ಆರು ಒಣ ಮೆಣಸು, ಉಪ್ಪು ಹಾಕಿ ರುಬ್ಬಿದೆ. ರುಬ್ಬಿದ ಹಿಟ್ಟಿಗೆ ನುಗ್ಗೆ ಹೂವನ್ನು ಹಾಕಿದೆ ಚೆನ್ನಾಗಿ ಕಲಸಿದೆ.
ದೋಸೆ ಕಾವಲಿ ಇಟ್ಟು ಎಣ್ಣೆ ಹಚ್ಚಿ ದಪ್ಪ ದೋಸೆ ಬೇಕಾದವರಿಗೆ ತುಂಬಾ ಎಣ್ಣೆ ಹಾಕಿ ದಪ್ಪದಪ್ಪ ದೋಸೆ, ನೀರು ದೋಸೆ ತರಹ ಇಷ್ಟ ಆಗುವವರಿಗೆ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ಹಿಟ್ಟನ್ನು ತೆಳು ಮಾಡಿ.. ತೆಳ್ಳಗೆ ದೋಸೆ… ಒಟ್ಟಿನಲ್ಲಿ “ಸಾನ್ನಾ ಪೋಳೋ” ಜೊತೆಗೆ ಅನ್ನ, ಅನ್ನಕ್ಕೆ ಸಾಥ್ ಬೇಳೆ ತೊವ್ವೆ… ಎಲ್ಲರಿಗೂ ಬಹಳ ಇಷ್ಟವಾಯಿತು.


ಐದನೇ ದಿನ-

ನಮ್ಮ ಕೆಲಸದ ಬಾಯಮ್ಮ “ಅಮ್ಮಾ ಮಂಗಗಳು ಬಂದು ನುಗ್ಗೆ ಮರದ ಗೆಲ್ಲೊಂದನ್ನು ಮುರಿದು ಇಟ್ಟಿದೆ. ಹೂವೆಲ್ಲಾ ಹಾಳಾಗುತ್ತಿದೆ ನೋಡಿ.. ಕ್ರಿಸ್‌ಮಸ್ ಹಬ್ಬ ಮಾಡಲು ಒಂದಷ್ಟು ನುಗ್ಗೆ ಕಾಯಿಯಿಂದ ಕಾಸು ಸಿಕ್ಕುತ್ತಿತ್ತು.. ಈ ದರಿದ್ರ ಮಂಗಗಳಿಂದ ಅದೂ ದಕ್ಕಲಿಲ್ಲ ನೋಡಿ. ನೀವೇನಾದರೂ ಸ್ವಲ್ಪ ಕೊಡಿ.” ಎಂದಳು.


ಆದರೆ ನನಗೆ ಗೊತ್ತಿತ್ತು ಈಗ ಮಾರುವಷ್ಟು ಬಲಿತ ಕಾಯಿ ಆಗುವುದಿಲ್ಲ. ಇದು ಇವಳದ್ದೇ ನಾಟಕ ಎಂದು.. ಆದರೂ ನಂಬಿದವಳಂತೆ ಒಂದಷ್ಟು ಹಣ ಕೊಟ್ಟು “ಹಬ್ಬ ಆಚರಿಸು” ಎಂದೆ.

ಅದು ತುಂಬಾ ಇತ್ತು. ಎರಡು ಮೂರು ದಿನಗಳಿಗಾಗುವಷ್ಟಿತ್ತು.


ಅದನ್ನೆಲ್ಲಾ ಬಿಡಿಸಿ.. ಒಂದು ಪಾಲು ಇವತ್ತಿಗಾಯ್ತು ಎಂದು ಅಂದ್ಕೊಂಡು ಉಳಿದುದನ್ನು ಒಂದು ವಾರ್ತಾಪತ್ರಿಕೆಯಲ್ಲಿ ಚಂದ ಮಾಡಿ ಕಟ್ಟಿಟ್ಟೆ.


ಅರ್ಧ ಲೋಟ ಅಕ್ಕಿ ನೆನೆಸಿದೆ. ಅರ್ಧ ಚಮಚ ತೊಗರಿಬೇಳೆ, ಅರ್ಧ ಚಮಚ ಕಡ್ಲೆಬೇಳೇನೂ ಅದರ ಜೊತೆ ಹಾಕಿದೆ. ಒಂದು ಚಮಚ ಉದ್ದಿನ ಬೇಳೆ ಬಣ್ಣ ಬದಲಾಗುವಷ್ಟು ಹುರಿದೆ. ನೆನೆ ಹಾಕಿದ ವಸ್ತುಗಳ ನೀರನ್ನು ಸೋಸಿ ತೆಗೆದು ಮಿಕ್ಸಿಯಲ್ಲಿ ಜೊತೆಗೆ ಒಣ ಮೆಣಸನ್ನೂ, ಸ್ವಲ್ಪ ಜೀರಿಗೆ, ಕೊತ್ತಂಬರಿ, ಇಂಗು, ಉಪ್ಪನ್ನೂ ಹಾಕಿ ತರಿತರಿಯಾಗಿ ರುಬ್ಬಿದೆ.
ಪುಟ್ಟಪುಟ್ಟ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಕರಿಯಲು ಕುಚಲಕ್ಕಿ ಗಂಜಿಯೊಂದಿಗೂ,ಮಧ್ಯಾಹ್ನದ ಊಟಕ್ಕೆ ಸಾಥ್ ಕೊಡಲು, ಸಂಜೆ ಚಹದ ಜೊತೆ ಕಂಪನಿ ಕೊಡಲು ಸಿದ್ಧವಾಯಿತು… ಜಿ.ಎಸ್.ಬಿ.ಯವರ ಪ್ರೀತಿಯ “ಡೊಂಗರ್..”.


ಆರನೇ ದಿನ –

ಬಿಡಿಸಿಟ್ಟ ಹೂವುಗಳನ್ನು ನೀರು ಹಾಕಿ ತೊಳೆಯಲು ಮತ್ತೆ ಲವಲವಿಕೆ ಹೊಂದಿದವು. ಇವತ್ತು ರುಬ್ಬೋದು ಗಿಬ್ಬೋದು ಮಾಡಲು ಉದಾಸೀನವಾಯಿತು.

ಒಂದು ದೊಡ್ಡ ಬೆಳ್ಳುಳ್ಳಿಯ ಕಾಂದೆ(ಗೆಡ್ಡೆಯನ್ನು) ಬಿಡಿಸಿ ಜಜ್ಜಿದೆ. ಒಂದು ಹೋಳು ಕಾಯಿಯನ್ನು ತುರಿದೆ. ಎರಡು ಹಸಿ ಮೆಣಸನ್ನು ಉದ್ದಕ್ಕೂ ಸೀಳಿ ಇಟ್ಟೆ.


ಒಗ್ಗರಣೆ ಹಾಕಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟೆ. ಒಂದೂವರೆ ಚಮಚ ಎಣ್ಣೆಯನ್ನು ಇಟ್ಟೆ. ಅದರಲ್ಲಿ ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿದೆ. ಅದು ಸ್ವಲ್ಪ ಕೆಂಪಾಗಲು… ಎರಡು ಒಣಮೆಣಸನ್ನು ತುಂಡು ಮಾಡಿ ಹಾಕಿದೆ ಸೀಳಿಟ್ಟ ಹಸಿಮೆಣಸಿನಕಾಯನ್ನೂ ಹಾಕಿದೆ. ತೊಳೆದಿಟ್ಟ ಹೂವನ್ನು ಹಾಕಿದೆ. ಅದರ ಮೇಲೆ ಸ್ವಲ್ಪ ಉಪ್ಪನ್ನು, ತುರಿದಿಟ್ಟ ತೆಂಗಿನಕಾಯಿಯನ್ನು ಹಾಕಿದೆ. ಸೌಟಿಂದ “ಎಲ್ಲರೂ ಒಬ್ಬರ ಜೊತೆ ಒಬ್ಬರು ಹೊಂದಿ ಕೊಳ್ಳಿ, ರಾಜಕೀಯ ಮಾಡಿ ರುಚಿ ಹಾಳು ಮಾಡಬೇಡಿ…” ಎಂಬಂತೆ ಸೌಟಿನಿಂದ ಕಲಸಿದೆ.


ಮುಚ್ಚಳ ಮುಚ್ಚಿ ಎರಡು ಮೂರು ನಿಮಿಷಗಳ ನಂತರ ತೆಗೆದರೆ.. ಘಮಘಮಿಸುತ್ತಿತ್ತು… ನುಗ್ಗೆ ಹೂವಿನ ಉಪ್ಕರಿ… ಬೇಗ ಮುಚ್ಚಳ ಹಾಕಿದೆ. ಪರಿಮಳ ಪಕ್ಕದ ಮನೆಗೆ ಹೋದರೆ ಎಂದು ಹೆದರಿಕೆಯಿಂದ….


ಏಳನೇ ದಿನ –

ಒಂದು ಬೊಗಸೆಯಷ್ಟು ಹೂವನ್ನು ತೆಗೆದುಕೊಂಡು ತೊಳೆದಿಟ್ಟೆ. ಒಂದು ಹೋಳು ತೆಂಗಿನಕಾಯಿಯನ್ನು ತುರಿದೆ. ಮಿಕ್ಸಿ ಜಾರಲ್ಲಿ ತೆಂಗಿನ ಕಾಯಿಯ ತುರಿ, ಐದಾರೂ ಒಣ ಮೆಣಸು, ಬೇಕಾದಷ್ಟು ಹುಣಸೇ ಹುಳಿ, ಉಪ್ಪು ಹಾಕಿ ರುಬ್ಬಿದೆ.
ಅದನ್ನು ಒಂದು ಪಾತ್ರೆಗೆ ತೆಗೆದು ಅರ್ಧ ಕಪ್ ಅಕ್ಕಿ ರವೆಯನ್ನು ಹಾಕಿ ಅದಕ್ಕೆ ತೊಳೆದಿಟ್ಟ ಹೂವನ್ನು ಹಾಕಿ ಚೆನ್ನಾಗಿ ಕಲಸಿದೆ. ಇಡ್ಲಿ ಪಾತ್ರೆಯಲ್ಲಿ ಇಡ್ಲಿಯಂತೆ ಬೇಯಿಸಬಹುದಿತ್ತು. ಆದರೆ ನಮ್ಮಲ್ಲಿ ಯಾರಿಗೂ ಇಷ್ಟವಾಗುವುದಿಲ್ಲ. ಅಲ್ಲದೆ ಪಾತ್ರೆ ತೊಳೆಯುವ ಕೆಲಸದಿಂದಲೂ ಮುಕ್ತಿ ಸಿಕ್ಕುತ್ತದೆ..


“ಆಚಾರೋಗ್ಲಾ… ಆಂಡ್.. ಸುಖೋಗ್ಲಾ ಆಂಡ್” ಎಂದು ಹೇಳುವಂತೆ ಬಾಳೆ ಎಲೆಯಲ್ಲಿ ಕಲಸಿದ ಹಿಟ್ಟನ್ನು ಹಾಕಿ ಮಡಚಿ ಹದಿನೈದು ನಿಮಿಷ ಬೇಯಿಸಿದೆ. ಆಯಿತು… “ನುಗ್ಗೆ ಹೂವಿನ ಸಾನ್ನಕೊಟ್ಟೋ..”

ಬಿಸಿ ಇರುವಾಗಲೇ ಒಂದೆರಡು ತೊಟ್ಟು (ಚಮಚವೂ ಆಗಬಹುದು) ತೆಂಗಿನೆಣ್ಣೆಯನ್ನು ಸುರಿದರೆ ಅನ್ನದ ಖರ್ಚು ಕಡಿಮೆ.. ಇದೇ ಜಾಸ್ತಿ ಹೊಟ್ಟೆಯೊಳಗೆ ಹೋಗುತ್ತೆ…

ಹೀಗೆ ಏಳು ದಿನ “ನುಗ್ಗೆ ಹೂವಿನ ಸಪ್ತಾಹ” ವನ್ನು ಆಚರಿಸಿದಂತೆ ಆಯಿತು.

ನಮ್ಮನೆಯವರು “ಏನೇ ಒಂದು ವಾರದಿಂದ ನುಗ್ಗೆ ಹೂವು ತಿನ್ನಿಸುತ್ತಿದ್ದಿ.. ಇನ್ನಷ್ಟು ವಿಧ ಬಾಕಿ ಇದೆ..”ಎಂದರು.

ನಾನು “ಇನ್ನು ಸೂಪ್, ಬಾತ್, ಇನ್ನೊಂದೆರಡು ಬಗೆಯ ಅಂಬೋಡೆ, ವಡೆಗಳು, ರೊಟ್ಟಿ ಬಾಕಿ ಇದೆ. ಅಷ್ಟೇ ಅಲ್ಲ.. ನನ್ನ ಪರಿಚಿತರೆಲ್ಲರ ಮನೆಯ ಮರದಲ್ಲಿ ನುಗ್ಗೆ ಹೂವು ಖಾಲಿಯಾಗಿ ಕಾಯಿಯಾಗಲು ಆರಂಭ ಆಗಬೇಕು..”ಎಂದೆ.


ಅಷ್ಟರಲ್ಲಿ ನನ್ನ ಮಗ “ಅಮ್ಮಾ.. ನನಗೆ ಯಾಕೋ ತಲೆ ಸುತ್ತು ಬಂದ ಹಾಗೆ ಆಗಿದೆ. ವಾಂತಿ ಬರೂ ಹಾಗಿದೆ..ಬಾಯೆಲ್ಲಾ ಕಹಿ ಕಹಿ ಆಗಿದೆ.” ಎಂದ.


“ಓಹ್..ರಾತ್ರಿ ನಿದ್ದೆಗೆಟ್ಟು ಪಿತ್ತ ಆದ ಹಾಗೇ ಇರಬೇಕು. ಸದ್ಯಕ್ಕೆ ಪುನಾರ್ಪುಳಿ (ಬಿರಿಂಡ,ಕೋಕಂ)ಯ ಪಾನಕ ಮಾಡಿಕೊಡುತ್ತೇನೆ.. ಸಂಜೆ ಡಾಕ್ಟರ್ ಮಾಮನ ಮನೆಗೆ ಹೋಗುವಾ.. ಎನಂತೆ ಒಂದು ಸಲ ಚೆಕ್‌ಅಪ್ ಮಾಡಿಸಿ ಬರುವಾ.. ಹೇಗೂ ಹೋಗದೆ ತುಂಬಾ ದಿನ ಆಯಿತು..” ಎಂದೆ.


ಸಂಜೆ ಡಾಕ್ಟರ್ ಮನೆಗೆ ಹೋದೆವು. “ಏನೇನು ತಿಂದ್ರಿ..” ಎಂದು ಕೇಳಿದರು.

ನಮ್ಮನೆಯವರು ಅದನ್ನೇ ಕಾಯುತ್ತಿದ್ದವರಂತೆ.. ಪಟಪಟನೆ ಒಂದು ವಾರದ ಅಡುಗೆ ಹೇಳಿದರು.

ಅವರು “ಮತ್ತೆ ಪಿತ್ತ ಆಗದೆ ಇರುತ್ತಾ..” ಎಂದರು.


ನಾನು ಉಲ್ಟಾ ವಾದ ಮಾಡುವವಳಂತೆ… “ಸರ್, ನೀವೇ ಹೇಳಿದ್ರಲ್ಲಾ… ನುಗ್ಗೆಸೊಪ್ಪು ರಕ್ತ ಶುದ್ಧಿಗೆ ಒಳ್ಳೆಯದು ಅಂತಾ.. ಇವನಂತೂ ಯಾವಾಗಲೂ ಆಡುವುದು..ಬೀಳುವುದು ಗಾಯ ಮಾಡಿಕೊಳ್ಳುವುದು.. ಗೊತ್ತುಂಟಲ್ಲಾ.. ಸರ್ ನಿಮಗೆ. ಅದು ಬೇಗ ಗುಣ ಆಗುವುದೂ ಇಲ್ಲಾ.. ರಕ್ತ ಯಾವಾಗಲೂ ಶುದ್ಧವಾಗಿರುತ್ತದೆ.. ಗಾಯವಾಗಿ ಹೋದ ರಕ್ತ ತುಂಬುತ್ತಲ್ಲಾ ಸರ್..” ಎಂದೆ.


ಡಾಕ್ಟರ್ “ನಾನು ಹೇಳಿದ್ದು ಸೊಪ್ಪು ಕಣ್ರೀ… ನೀವು ನೋಡಿದ್ರೆ.. ಹೂವು ತಿನ್ನಿಸಿದ್ದೀರಲ್ಲೀ… ಇನ್ನು ಸ್ವಲ್ಪ ದಿನ ಆದ್ರೆ ಕಾಯಿ ತಿನ್ನಿಸುತ್ತಿದ್ರಾ, ಅಂತ, ಅಲ್ವಾ” ಎಂದು.. ಅರ್ಧ ನಗು,ಅರ್ಧ ವ್ಯಂಗ್ಯ, ಅರ್ಧ ಸಿಟ್ಟಲ್ಲಿ ಹೇಳಿದರು.


ನಾನು.. “ಏನೆಂದು ಹೇಳಲಿ..”..!!!?? ಅವರಿಗೆ.


ನನ್ನ ಈ ಅಪಾರ್ಥ ಚಿಂತನೆಗಳಿಗೆ..ತೆಪ್ಪಗೆ ಕೂತೆ..


ವೀಣಾ ಶಾನುಭೋಗ್

Preservation by Sumanth Shanbhogue for Shanbhogue Publications

Responses

  1. Mohan nayak Avatar

    ಸೂಪರ್ ಒಳ್ಳೇದಾಗಿದೆ…ತುಂಬಾ ರೆಸಿಪಿ ಕಲಿಯಲು ಸಿಕ್ಕಿತು.. ನುಗ್ಗೆ ಹೂವಿಗೆ, ಸೊಪ್ಪಿಗೆ ಒಂದು ಗತಿ ಕಾಣಿಸಲು ದಾರಿಯೂ ಸಿಕ್ಕಿತು..ಬಹಳ ಮಾಹಿತಿ ಸಿಕ್ಕಿತು. ಧನ್ಯವಾದಗಳು..🙏🙏🙏😊👌👏👍

    Liked by 1 person

    1. Sumanth BS Avatar

      ಧನ್ಯವಾದಗಳು. 😄 ರೆಸಿಪಿ ಕಲಿತಿದ್ದೀರಿ… ಈಗ ಪ್ರಯೋಗ ಮಾಡಿ. ಆದರೆ ಒಂದು ವಾರ ಸತತ ನುಗ್ಗೆ ಹೂವೇ ಮಾಡಬೇಡಿ… ನಮ್ಮ ಅನುಭವವೇ ಇದಕ್ಕೆ ಸಾಕ್ಷಿ ! 😂🙏

      Like

Leave a comment