ಮುನ್ನುಡಿ

ಒಂದು ಕಾಲದಲ್ಲಿ ವಯಸ್ಸಾದವರು ವಾನಪ್ರಸ್ಥಕ್ಕೆ ಹೋಗುವ ಪದ್ಧತಿಯಿತ್ತು. ಮಕ್ಕಳಿಗೆ ಮನೆಯ ಯಜಮಾನಿಕೆಯನ್ನ ನೀಡಿ ಜವಾಬ್ದಾರಿಯನ್ನು ವಹಿಸಿಕೊಡುತ್ತಿದ್ದರು. ಉಳಿದ ಆಯುಷ್ಯವನ್ನು ಯಾವುದಾದರೂ ಗುರುಕುಲ, ಋಷ್ಯಾಶ್ರಮಗಳ ಸಮೀಪ ತಮ್ಮ ವಾಸ್ತವ್ಯವನ್ನು ಹೂಡುತ್ತಿದ್ದರು. ಸಾಂಸಾರಿಕ ತಾಪತ್ರಯಗಳಿಂದ ದೇವರ ಸ್ಮರಣೆಯನ್ನು, ಜಪತಪಗಳನ್ನು ಮಾಡಲು ಅವಕಾಶವಿರುತ್ತಿರಲಿಲ್ಲವೆಂದೋ… ಈ ಪದ್ಧತಿಯನ್ನು ಆರಿಸುತ್ತಿದ್ದರೇನೋ…. ಅಥವಾ ತೀರ್ಥಯಾತ್ರೆಗಳನ್ನು ಮಾಡುತ್ತಾ ತಮ್ಮ ಉಳಿದ ಜೀವನವನ್ನು ಕಳೆಯುತ್ತಿದ್ದರು.

ಈಗ ವೃದ್ಧಾಶ್ರಮಗಳನ್ನು ನೋಡುವಾಗ ನನಗೆ ವಾನಪ್ರಸ್ಥದ ಸ್ಥಾನದಲ್ಲಿ ಈ ವೃದ್ಧಾಶ್ರಮದ ಪದ್ಧತಿ ಬಂದಿದೆಯೋ ಅನಿಸುತ್ತಿತ್ತು. ಅನಿವಾರ್ಯ ಕಾರಣಗಳಿಂದ ವೃದ್ಧಾಶ್ರಮದ ಭೇಟಿಯನ್ನು ಮಾಡಬೇಕಾಯಿತು. ವೃದ್ಧಾಶ್ರಮಗಳ ಅವಶ್ಯಕತೆ ಇದೆಯೇ ಎಂಬ ದ್ವಂದ್ವವೂ ಕಾಡುತಿತ್ತು. ಸಿಕ್ಕಿದ ಅವಕಾಶವನ್ನು ಬಳಸಿಕೊಂಡೆ. ಇತ್ತೀಚಿನ, ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆ ವೃದ್ಧಾಶ್ರಮಗಳು. ತಲೆಮಾರುಗಳ ನಡುವಿನ ಭಾವನೆಗಳೋ, ಆಚಾರ ವಿಚಾರಗಳೋ ಎಂದು ಅರ್ಥ ಮಾಡಿಕೊಳ್ಳಬೇಕಾದರೆ ವೃದ್ಧಾಶ್ರಮಗಳ ಭೇಟಿ ಅವಶ್ಯವೆನಿಸಿತು. ಅಲ್ಲಿಯ ಹಲವರು ಹಂಚಿಕೊಂಡ ಅನುಭವ ಕಥನಗಳಿಗೂ, ಕಾರಣಗಳಿಗೂ ನನ್ನದೇ ಆದ ರೀತಿಯಲ್ಲಿ ಬರವಣಿಗೆಯ ರೂಪವನ್ನು ಕೊಟ್ಟಿರುವೆನು.

ನನ್ನ ಸೊಸೆ ನಮ್ಮ ಮಹಿಳಾ ಮಂಡಳಿಯ ವತಿಯಿಂದ ಆದ ವರಮಹಾಲಕ್ಷ್ಮೀ ಪೂಜೆಯ ಪ್ರಸಾದವನ್ನು ಕೆಲವರಿಗೆ ಕೊಟ್ಟು ಬರಲೆಂದು ಹೋಗಿದ್ದಳು.. ಹೊರಗಿನಿಂದ ಬಂದವಳೇ “ಮಾಯಿ.. ನಿಮ್ಮ ಗೆಳತಿ ಮನೆಗೆ ಹೋಗಿದ್ದೆ..  ಅವರಾಗಲೀ, ಅವರ ಸೊಸೆಯಾಗಲೀ ಇಬ್ಬರೂ ವರಮಹಾಲಕ್ಷ್ಮಿ ಪೂಜೆಗೆ ಬರಲಿಲ್ಲ. ಅದಕ್ಕೆ ಪ್ರಸಾದ ಕೊಟ್ಟು ಬರುವಾ.. ಅಂತಾ ಹೋಗಿದ್ದೆ..”

 “ಒಳ್ಳೆಯದಾಯ್ತು… ನಾನೂ ಬರದೇ ಇದ್ದುದನ್ನು ಗಮನಿಸಿದೆ… ಒಂದು ವಾರದಿಂದ ಫೋನ್ ಮಾಡಿದ್ರೂ ಇಬ್ಬರೂ ರಿಸೀವ್… ಮಾಡಿಲ್ಲ. ಹೋಗಿ ನೋಡಲು ನನಗೂ ಸಮಯವಿಲ್ವಲ್ಲ… ಏನೋ ಜಗಳ ಮಾಡ್ಕೊಂಡು ಕೂತಿದ್ದಾರಾ ಏನೋ…? ಯಾಕಂತೆ ಬರಲಿಲ್ಲ…ಆರೋಗ್ಯವಾಗಿದ್ದಾರಲ್ವಾ..?” ಎಂದು ಕೇಳಿದೆ.

“ಹೂಂ..ಆರೋಗ್ಯವಾಗಿದ್ದಾರೆ. ಆದರೆ ನಿಮ್ಮ ಗೆಳತಿ ವೃದ್ದಾಶ್ರಮಕ್ಕೆ ಹೋಗಿ ಸೇರಿದ್ದಾರಂತೆ. ಅವರ ಸೊಸೆ ಎಲ್ಲರ ಬೈಗಳನ್ನು ತಿನ್ನಬೇಕಾಗುತ್ತದೆ.. ಎಂದು ಫೋನ್ ಸ್ವಿಚ್ ಆಪ್ ಮಾಡಿದ್ದರಂತೆ. ಎಲ್ಲರ ವಕ್ರನೋಟ ಅನುಭವಿಸುವುದಕ್ಕಾಗುವುದಿಲ್ಲ… ಕಷ್ಟವಾಗುತ್ತೆ.. ಎಂದು ಎಲ್ಲೂ ಹೋಗ್ತಾನು ಇಲ್ಲವಂತೆ. ಆಫೀಸಿಗೊಂದು .ಹೋಗಿ ಬರ್ತಾರಂತೆ. ಅವರ ಮಗನೂ ಅಷ್ಟೇ..” ಎಂದಳು.

 “ಮಾಯಿ..ನಾಳೆ ವೃದ್ಧಾಶ್ರಮಕ್ಕೆ ಹೋಗಿ ಬರೋಲ್ವಾ…ಅವರ ಸೊಸೆಗೆ ಅವರು ಅಲ್ಲಿ ಹೇಗಿರುತ್ತಾರೋ ಅನ್ನೋ ಚಿಂತೆ…ನೋಡಿ ಬರ್ಲಿಕ್ಕಾಗುತ್ತಾದರೆ ಹೋಗಿ.. ಅವರಿಗೆ ಸಮಾಧಾನ ಮಾಡಿ.. ವಾಪಸ್ ಮನೆಗೆ ಹೋಗಲಿಕ್ಕೆ ಹೇಳಬೇಕಂತೆ..”

 “ಆಯಿತು… ಮಧ್ಯಾಹ್ನವೇ ಹೋಗಿ ಬರೋಣ.. ಸಂಜೆ ಮಕ್ಕಳು ಬರುವ ಮೊದಲೇ ವಾಪಸ್ ಬರ್ಬೆಕು… ಏನಾದ್ರೂ ತಿಂಡಿ ಮಾಡೋಣ ಅಂದ್ರೆ ಸಮಯವಿಲ್ಲ… ಹಣ್ಣುಗಳನ್ನಾದರೂ ತಗೊಂಡು ಹೋಗೋಣ..”

“ಹಾಂ..ಆಯ್ತು..ಹೋಗ್ತಾ ತೆಗೆದುಕೊಂಡರೆ ಆಯ್ತು..”

ಸೊಸೆಯೇನೋ ಅವಳ ಕೆಲಸದ ಕಡೆ ಗಮನ ಕೊಡಲು ಹೋದರೂ ನನ್ನ ಮನಸ್ಸಿನಲ್ಲಿ ಗೆಳತಿಯೇ ಓಡಾಡುತ್ತಿದ್ದಳು. ಗೆಳತಿಯೆಂದರೆ ಅವಳಿಗೆ ಈಗ ಎಪ್ಪತ್ತೆರಡು ವರ್ಷ.. ವಯೋಸಹಜವಾದ ಕಾಯಿಲೆಗಳಿದ್ದರೂ ಗಟ್ಟಿಮುಟ್ಟಾದ ಜೀವ. ಈ ಮನೆಗಾಗಿ ತಾನು ಮದುವೆಯಾದಂದಿನಿಂದಲೂ ಜೀವ ಸವೆಸಿದ್ದೇನೆ.. ಹಾಗಾಗಿ ಒಂದು ಕಡ್ಡಿ ಆಚೆ ಈಚೆ ಇಡಬೇಕಾದರೂ ತನ್ನ ಅಪ್ಪಣೆ ತೆಗೆದುಕೊಳ್ಳಬೇಕು. ಅಡುಗೆಯಿಂದ ಹಿಡಿದು ತರುವ ಸಾಮಾನು ಯಾರು ಏನು ತಿನ್ನಬೇಕು… ಉಣ್ಣಬೇಕು ಎನ್ನುವುದು ಕೂಡಾ ಅವಳ ಇಷ್ಟದಂತಿರಬೇಕು. ಎಲ್ಲಿಯಾದರೂ ಹೋಗಬೇಕಾದರೂ ತಾನು ಒಪ್ಪಿದರೆ ಮಾತ್ರ ಹೋಗಬಹುದು.. ಇಲ್ಲಾಂದ್ರೆ ಬಾಯಿ ಮುಚ್ಚಿ ಕೂರಬೇಕು.. ಗಂಡನಿರುವವರೆಗೆ ಎಲ್ಲವೂ ಅವಳಿಚ್ಛೆಯಂತೆ ನಡೆಯುತಿತ್ತು.. ಸೊಸೆಯೂ ತಗ್ಗಿಬಗ್ಗಿ ನಡೆಯುತ್ತಿದ್ದಳು. ಗಂಡ ಹೋಗಿ ಹದಿನೆಂಟು ಇಪ್ಪತ್ತು ವರ್ಷಗಳಾದುವೋ ಏನೋ..?

ಮೊಮ್ಮಕ್ಕಳೂ ದೊಡ್ಡವರಾದರು.. ಈಗಲೂ ತನ್ನಿಚ್ಛೆಯಂತೆ ನಡೆಯಬೇಕು ಎಂದರೆ ಸಹಿಸಿಕೊಳ್ಳುತ್ತಾರೆಯೇ..? ಸೊಸೆಯೂ ಮಕ್ಕಳ ಆಸೆಗೆ ತಕ್ಕಂತೆ ಕೆಲವೊಮ್ಮೆ ಇರಬೇಕಾಗುತ್ತಿರುವುದರಿಂದಲೋ ಅಥವಾ ಅವಳಿಗೂ ಅತ್ತೆಯ ಜೊತೆ ಏಗಾಡಿ ಸಾಕಾಗಿತ್ತೋ ಏನೋ… ಅವಳು ಒಮ್ಮೊಮ್ಮೆ ಎದುರು ಹೇಳುವ ಸ್ಥಿತಿಗೆ ಬಂದಿದ್ದಳು.. ಮತ್ತೆ ನಾನೇ ತಾಳ್ಮೆ ತಗೋಬೇಕಿತ್ತು..ಅವರಿಗೆ ವಯಸ್ಸಾಗಿದೆ. ಸರ್ವಾಧಿಕಾರ ನಡೆಸಿ ಅಭ್ಯಾಸವೂ ಆಗಿದೆ.. ಎಂದು ಮರುಗುತ್ತಿದ್ದಳು.

ಮಧ್ಯಾಹ್ನ ನಾನು ಮತ್ತು ನನ್ನ ಸೊಸೆ ಇಬ್ಬರೂ ಅವಳನ್ನು ನೋಡಲು ಹೋದೆವು.. ಒಲಿಸಲಿಕ್ಕೆಂದು ಅಲ್ಲ.. ಹೇಗಿದ್ದಾಳೆ ನೋಡುವ ಎನ್ನುವ ಭಾವನೆಯಲ್ಲಿ.. ನಮ್ಮೊಡನೆಯೂ ಸರಿಯಾಗಿ ಮಾತಾಡಲಿಲ್ಲ… ನಾವೂ ಅವಳ ಮನೆಯ ವಿಷಯ ಮಾತನಾಡಲಿಲ್ಲ.. ವೃದ್ಧಾಶ್ರಮವನ್ನು ಸುತ್ತಾಡಿ.. ವ್ಯವಸ್ಥೆಗಳನ್ನು ನೋಡಿ ಬಂದೆವು.

ನನಗೆ ತುಂಬಾ ಜನ ಸ್ನೇಹಿತರಾದರು.. ಆಗಾಗ ಬರ್ತಾ ಇರಿ… ಹೀಗೆಲ್ಲಾ ಹೇಳಿದರು. ನಾವೂ ಆಯಿತು ಎಂದು ಹೇಳಿ ವಿದಾಯವನ್ನು ಹೇಳಿ ಬಂದೆವು.. ಇಲ್ಲಿಂದ ನನ್ನ ಮತ್ತು ವೃದ್ಧಾಶ್ರಮದ ಭೇಟಿಗಳು ಪದೇ ಪದೇ ಆದವು.

ಒಬ್ಬಬ್ಬರದ್ದೇ ಕಥೆಯೋ ವ್ಯಥೆಯೋ.. ಅಂತೂ ನನ್ನ ತಂತಿಗಳಲ್ಲಿ ಅವರ “ಸಂಧ್ಯಾರಾಗ”ಗಳು ಮೀಟತೊಡಗಿದವು…


ವೀಣಾ ಶಾನುಭೋಗ್

Preservation by Sumanth Shanbhogue for Shanbhogue Publications

Leave a comment