ಗೆಳತಿ ವೃದ್ಧಾಶ್ರಮಕ್ಕೆ ಸೇರಿ ತಿಂಗಳಾಗ್ತಾ ಬಂದಿತ್ತು.. ಗೌರೀಹಬ್ಬ ಬಂದಿತ್ತು.. ಹೋಗಿ ಬರೋಣ.. ಹಾಗೇ ಹಬ್ಬಕ್ಕೇನಾದ್ರೂ ಬರುವ ಮನಸ್ಸಿದ್ದರೆ ಅವಳ ಮಗನಿಗೋ, ಸೊಸೆಗೋ ಹೇಳೋಣ.. ಎಂದು ವೃದ್ಧಾಶ್ರಮಕ್ಕೆ ಒಂದು ಮಧ್ಯಾಹ್ನ ಹೊರಟೆ..
ಉಳಿದವರೆಲ್ಲರೂ ಖುಷಿಪಟ್ಟರೂ ನನ್ನ ಗೆಳತಿ ಯಾಕೋ ನನ್ನತ್ತ .. ಒಂದು ಮುಗುಲ್ನಗುವನ್ನು ಎಸೆದು… “ನಾನು ಮಲಗೋ ಸಮಯ ಮಲಗ್ತಿನಿ..’ ಎಂದು ನನ್ನನ್ನು ಅವಳ ಕೋಣೆಗೂ ಕರೆಯದೆ ಹೋದಳು.
ನನಗೆ ಒಂದು ಸಲ ಮನಸ್ಸಿಗೆ ಬೇಸರವಾದರೂ…ಮುಂದೆ ಹೋದೆ. ಹೋದ ಸಲ ಬಂದಾಗ ಪರಿಚಯ ಆದ ಸುಶೀಲಮ್ಮ ಕ್ಷೇಮ ಸಮಾಚಾರ ಮಾತನಾಡುತ್ತಾ… “ಹೆಚ್ಚಿನವರೆಲ್ಲರೂ ಮಧ್ಯಾಹ್ನದ ವಿಶ್ರಾಂತಿ ತಗೊಳ್ಳೋ ಸಮಯ.. ನನ್ನ ಕೋಣೆಗೇ ಹೋಗೋಣ..ನನಗೆ ಮೊದಲಿಂದಲೂ ಮಲಗುವ ಅಭ್ಯಾಸ ಇಲ್ಲ..ಬನ್ನಿ..ಬನ್ನಿ..” ಎಂದು ಕರದೊಯ್ದರು.
ನಾನೂ ಹೋದೆ.. ಮಾತ್ನಾಡ್ತಾ ಮಾತಾಡ್ತಾ ತಮ್ಮ ವಿಷಯ ಹೇಳತೊಡಗಿದರು…
ನನ್ನ ಅಪ್ಪ, ಅಮ್ಮ ನನ್ನನ್ನು ಪ್ರೀತಿಯಿಂದ ಸಾಕಿದರು. ಅಪ್ಪನಿಗೆ ಸ್ಟೇಶನರಿ ಅಂಗಡಿ.. ಸಂಪಾದನೆ ಚೆನ್ನಾಗಿಯೇ ಇತ್ತು. ಒಳ್ಳೆಯ ಒಬ್ಬ ಹುಡುಗನನ್ನು ಆರಿಸಿ ಮದುವೇನೂ ಮಾಡಿದರು. ಮದುವೆಯಾಗಿ ಎರಡು ವರ್ಷ ಕಳೆದು ಹೋದದ್ದು ಗೊತ್ತೇ ಆಗಿಲ್ಲ.. ಅಪ್ಪ, ಅಮ್ಮನ ಜೊತೆ ಹರಕೆ ತೀರಿಸಲು ಹೋಗಿದ್ದೆವು. ಹರಕೆ ತೀರಿಸಿ ಹಿಂದೆ ಬರುವಾಗ ಆದ ಅಪಘಾತದಲ್ಲಿ “ಪಾಪಿ ಚಿರಾಯು” ಎಂಬಂತೆ ನಾನೊಬ್ಬಳು ಉಳಿದುಕೊಂಡು ಎಲ್ಲರೂ ಬಲಿಯಾದರು.
ನೆಂಟರಿಷ್ಟರೂ ಎಲ್ಲರೂ ಎಲ್ಲಿ ಹೊರೆಯಾಗುತ್ತೇನೋ ಎಂದು ದೂರ ಮಾಡಿದರು. ಯಾರ ಹಂಗೂ ಬೇಡವೆಂದು ಅಪ್ಪನ ಅಂಗಡಿಯನ್ನೇ ನನ್ನ ಜೀವನಕ್ಕೆ ಅಣಿ ಮಾಡಿದೆ. ಅವರ ನೆನಪಲ್ಲೇ ಒಂದು ವರ್ಷ ಕಳೆಯಿತು. ಸ್ವಂತ ಮನೆ, ಅಂಗಡಿ ಆದರೆ ಏಕಾಂಗಿತನ ನನ್ನನ್ನು ತುಂಬಾ ಕಾಡುತಿತ್ತು.
ಅಂಗಡಿಗೆ ಬಂದ ಪರಿಚಿತರು ಹೀಗೆ ಮಾತನಾಡುತ್ತಾ ಹೇಳಿದರು.. ಆಸ್ಪತ್ರೆಯಲ್ಲಿ ಯಾರೋ ಹೆರಿಗೆಯ ನಂತರ ಮಗುವನ್ನೊಂದು ಬಿಟ್ಟುಹೋಗಿದ್ದಾರೆ.. ಅದೂ ಗಂಡು ಮಗು..”
ಮಧ್ಯಾಹ್ನದ ಹೊತ್ತು..ಗಿರಾಕಿಗಳು ಇಲ್ಲದಾಗ ಅವರ ಮಾತುಗಳು ನೆನಪಿಗೆ ಬಂದವು..ನನಗೂ ಯಾರೂ ಇಲ್ಲಾ…ಅದೂ ಅನಾಥ ಮಗುವಾಗಿರಬಹುದು. ನಾನ್ಯಾಕೆ ಸಾಕಬಾರದು… ಸಂಜೆಯ ಹೊತ್ತಿಗೆ ನನ್ನ ಮನಸ್ಸು ಆ ಮಗುವಿಗಾಗಿ ತುಡಿಯುತ್ತಿತ್ತು. ಅಂಗಡಿಗೆ ಬಾಗಿಲು ಹಾಕಿ ಪಕ್ಕದ ಮನೆ ಆಂಟಿಯನ್ನು ಕರೆದುಕೊಂಡು ಹೋದೆ.
ಮಗು ಚೆನ್ನಾಗಿತ್ತು. ನನ್ನ ಬಗ್ಗೆ ಆಂಟಿ ಡಾಕ್ಟರ್ ಹತ್ತಿರ ಮಾತನಾಡಿದರು. ಮಗುವಿನ ಆರೋಗ್ಯದ ಬಗ್ಗೆಯೂ ವಿಚಾರಿಸಿದರು. ಯಾವುದೇ ಸಮಸ್ಯೆಗಳಿಲ್ಲ.. ಕಾನೂನು ಪ್ರಕಾರ ಎಲ್ಲಾ ವ್ಯವಸ್ಥೆಯನ್ನು ಪಕ್ಕದ ಮನೆಯ ಆಂಟಿ, ಅಂಕಲ್ ಜೊತೆಗೆ ಆಸ್ಪತ್ರೆಯವರೂ ಸೇರಿ ಮಾಡಿ ಮಗು ನನ್ನ ಮಡಿಲಿಗೆ ಬಂತು.
ಮಗು ದೊಡ್ಡವನಾಗಿ ನನಗೆ ವಿಶ್ರಾತಿಯನ್ನೂ ನೀಡಿದ… ಹೊರಗೆಲ್ಲೂ ಕೆಲಸಕ್ಕೂ ಪ್ರಯತ್ನಿಸಲ್ಲ..ಎಂದ. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಗನಿಗೆ ಮದುವೆ ಮಾಡುವ ಯೋಚನೆ ಬಂತು. ಯಾರೂ ನನ್ನ ಮಗನಲ್ಲವೆಂಬ ಆಕ್ಷೇಪಣೆಯನ್ನು ಮಾಡದೆ ಹೆಣ್ಣು ಕೊಡಲು ಮುಂದೆ ಬಂದು ನನಗಿದ್ದ ಆ ಚಿಂತೆಯೂ ದೂರವಾಗಿತ್ತು.
ಆದರೆ ನನ್ನ ಮಗ ಅಂಗಡಿಗೆ ಬರುವ ಖಾಸಗಿ ಶಾಲೆಯ ಒಬ್ಬಳು ಶಿಕ್ಷಕಿಯನ್ನು ಪ್ರೀತಿಸುತ್ತಿದ್ದ. ನೋಡಲು ಚೆನ್ನಾಗಿದ್ದಳು. ಜಾತಿಯ ಅಡಚಣೆಯೂ ಇರಲಿಲ್ಲ.. ಜಾತಕದ ಹಂಗು ನಮಗ್ಯಾರಿಗೂ ಇರಲಿಲ್ಲ.. ಪರಿಚಯದ ಹುಡುಗಿ.. ಮದುವೆಯೂ ಆಯಿತು. ಮೂರು ವರ್ಷಗಳ ಒಳಗೆ ಇಬ್ಬರು ಮಕ್ಕಳೂ ಆದರು.
ಒಂದು ದಿನ ಮಗ ಬಂದು” ಅಮ್ಮಾ.. ನನಗೆ ಅಂಗಡಿಯನ್ನು ಇನ್ನೂ ಸ್ವಲ್ಪ ಊರ್ಜಿತಗೊಳಿಸಲು ಲೋನ್ ತೆಗೆಯಬೇಕು…” ಎಂದ. ಇದುವರೆಗೂ ಸಾಲಸೋಲವಿಲ್ಲದೆ ಅಂಗಡಿ ನಡೆಸಿಕೊಂಡು ಬಂದಿದ್ದೇನೆ. ಈಗ ಯಾಕಪ್ಪಾ… ಸುಮ್ಮನೆ ಸಾಲದ ಯೋಚನೆ..” ಮಗ “ಅಮ್ಮಾ.. ಈಗ ಸಂಸಾರ ದೊಡ್ಡದಾಗಿದೆ. ಮಕ್ಕಳು ದೊಡ್ಡವರಾಗ್ತಾ.. ಆಗ್ತಾ ಖರ್ಚು ಜಾಸ್ತಿಯಾಗುತ್ತಿಲ್ಲಮ್ಮಾ… ನಾನು ಈಗಿನಿಂದಲೇ ಸ್ವಲ್ಪ ಹೆಚ್ಚಿನ ಶ್ರಮ ವಹಿಸಿದರೆ ಒಳ್ಳೆಯದಲ್ವಾ..” ಎಂದ. ..
ನನಗೂ ಹೌದೆನಿಸಿತು. “ಆಯಿತು..” ಎಂದೆ. ಮಗ “ಅಮ್ಮಾ…ನನಗೆ ಸಾಲ ಸಿಕ್ಕಲು ಮನೆ ಅಂಗಡಿ ಎರಡೂ ನಿನ್ನ ಹೆಸರಲ್ಲಿ ಇದೆಯಲ್ವಾ… ಅಂಗಡಿಯನ್ನೊಂದು ನನ್ನ ಹೆಸರಿಗೆ ಮಾಡಮ್ಮಾ..” ಎಂದ. ಮನೆ ಅಂಗಡಿ ಒಟ್ಟಿಗೆ ಇತ್ತು. ನಾನು ಯೋಚನೆ ಮಾಡದೆ ಒಪ್ಪಿದೆ.
ಪಕ್ಕದ ಆಂಟಿ, ಅಂಕಲ್ ಇಬ್ಬರೂ ಅಂಗಡಿ ಮಾತ್ರ ಬರೆ… ಕೇಳಿದರೂ ಮನೆಯನ್ನು ಕೊಡಬೇಡಾ…” ಎಂದು ಹೇಳಿದರೂ, ಒತ್ತಾಯ ಮಾಡಿದರೂ ಅವರ ಬುದ್ಧಿವಾದಕ್ಕೆ ಸೋಲದೆ ಮನೆಯನ್ನೂ ಅಂಗಡಿಯ ಜೊತೆ ಅವನ ಹೆಸರಿಗೆ ಬರೆದು…ಸೋತೆ.
ಆಮೇಲೆ ಸೊಸೆ ಅಪ್ಪಟ ಸೊಸೆಯ ಬುದ್ಧಿಯನ್ನು ತೋರಿಸ ತೊಡಗಿದಳು. ಮಗ ಅವಳ ತಾಳಕ್ಕೆ ತಕ್ಕಂತೆ ಕುಣಿದನಷ್ಟೇ ಹೊರತು ಸಾಲವನ್ನೂ ತೆಗೆಯಲಿಲ್ಲ. ಸಾಲ ಒಂದು ನೆಪವಾಗಿತ್ತು. ಇಷ್ಟೆಲ್ಲಾ ಆಗುವಾಗ ಮಕ್ಕಳೂ ಅವಳ ಜೊತೆಗೆ ಶಾಲೆಗೆ ಹೋಗುವಷ್ಟು ದೊಡ್ಡವರಾಗಿದ್ದರು. ಮನೆಯಲ್ಲೂ ನನ್ನ ಅವಶ್ಯಕತೆಯಿರಲಿಲ್ಲ. ಅವರ ನೆಮ್ಮದಿಯ ಜೀವನಕ್ಕೆ ನಾನು ಅಡ್ಡಿಯಾಗಿದ್ದೆ.. ತಂದು ಸೇರಿಸಿದರು.
ಒಂದು ದಿನ ಹಬ್ಬದಡುಗೆ ಮಾಡಿ ನನ್ನನ್ನು ಈ ಅರಮನೆಗೆ ತಂದು ಸೇರಿಸಿದರು.
ಎಲ್ಲರೂ ಅಪಘಾತದಲ್ಲಿ ಹೋದಾಗ ಸತ್ತುಹೋದಂತೆ ಆಗಿದ್ದೆ. ಆ ಮೇಲೆ ಮಗುವಿನಿಂದಾಗಿ ಪುನರ್ಜನ್ಮ ಸಿಕ್ಕಿದಂತಾಗಿತ್ತು. ಈಗ ಮತ್ತೆ ಸತ್ತು ಹೋದಂತಾದೆ. .ದಿನ ಕಳೆದಂತೆ ಈಗ ಮೂರನೇ ಸಲ ಜನ್ಮ ಬಂದಂತಾಗಿದೆ. ಯಾಕೆ ಗೊತ್ತಾ… ನನ್ನ ಮಗ ಅಂದುಕೊಂಡವನು.. ನಾನು ಒಂಬತ್ತು ತಿಂಗಳು ಹೊತ್ತಿಲ್ಲ, ಹೆತ್ತಿಲ್ಲ.. ಅವನಿಗೆ ನನ್ನ ಮೇಲೆ ಯಾವ ರೀತಿಯ ಕರುಳ ಸಂಬಂಧ, ರಕ್ತ ಸಂಬಂಧ ಇಲ್ಲ..
ನನಗೆ ಪುನರ್ಜನ್ಮ ಕೊಟ್ಟು ಬಹುಶಃ ನಾನೇ ಅವನ ಋಣದಲ್ಲಿದ್ದೇನೋ..ಅಥವಾ ಅನಾಥನಾಗದಂತೆ ಅವನನ್ನು ನಾನು ಸಾಕಿ ಅವನ ಜನ್ಮಕ್ಕೊಂದು ಅರ್ಥ ಕೊಟ್ಟಿದ್ದೇನೋ….ಇನ್ನೂ ಆ ದ್ವಂದ್ವಕ್ಕೆ ಅಂತ್ಯ ಸಿಕ್ಕಿಲ್ಲ. ಆದರೆ ಇಲ್ಲಿರುವ ಕೆಲವರು ಒಂಬತ್ತು ತಿಂಗಳು ಹೊತ್ತು, ಹೆತ್ತು ಸಾಕಿ ಸಲಹಿದವರು. ಅವರೇ ಇಲ್ಲಿರುವಾಗ ನಾನಿಲ್ಲಿರುವುದು ನನ್ನ ಮೂರನೇ ಜನ್ಮ ಎಂದುಕೊಳ್ಳುವುದರಲ್ಲಿಯೇ ನೆಮ್ಮದಿ ಕಾಣುತ್ತಿದ್ದೇನೆ..” ಎಂದು ಮುಗಿಸಿದರು.
ಮುಗಿಸುವಾಗ ಅವರ ಕಣ್ಣು ಮುಖ ನಿರ್ಲಿಪ್ತವಾಗಿತ್ತು.. ನಾನು ಮೌನವಾಗಿ ಕೇಳುತ್ತಾ ಕೂತಿದ್ದೆ. ಈಗ ಅವರ ದ್ವಂದ್ವ ನನ್ನನ್ನು ಕಾಡುತಿತ್ತು. ಮಾತು ಮರೆತಿತ್ತು. ಅಲ್ಲಿ ಇಲ್ಲಿ ಸರ್ವೆ ಮಾಡುತ್ತಿದ್ದ ನನ್ನ ಸೊಸೆ ಬಂದು “ಮಕ್ಕಳು ಬರುವ ಹೊತ್ತಾಯಿತು… ಹೋಗೋಣ್ವ?” ಎಂದು ಎಚ್ಚರಿಸಿದಳು..
ನಾನು ಅವರನ್ನು “ಮುಂದಿನ ಸಲ ಸಿಕ್ಕೇನೆ” ಎಂದಷ್ಟೇ ಹೇಳಿ ಸಮಾಧಾನದ ಮಾತುಗಳನ್ನೂ ಹೇಳದೆ…ಹೇಳುವುದಾದರೂ ಏನೂ… ನಾನೇ ದ್ವಂದ್ವದಲ್ಲಿದ್ದೆ…ಸರಿ ತಪ್ಪುಗಳ, ನ್ಯಾಯ ಅನ್ಯಾಯಗಳ ನಡುವೆ… ಓಲಾಡುತ್ತಿದ್ದೆ.
ನನ್ನ ಗೆಳತಿಯನ್ನು ಭೇಟಿಯಾಗುವುದನ್ನೂ ಮರೆತು ಸೊಸೆ ಕರೆಸಿದ್ದ ಆಟೋವನ್ನು ಹತ್ತಿದೆ….
ವೀಣಾ ಶಾನುಭೋಗ್
Preservation by Sumanth Shanbhogue for Shanbhogue Publications
Leave a comment