ಅನಂತ ಚತುರ್ದಶಿಯಂದು ಮಾಡಿದ್ದ ಕಾಯಿಹೋಳಿಗೆಯನ್ನು ತೆಗೆದುಕೊಂಡು ವೃದ್ಧಾಶ್ರಮಕ್ಕೆ ಹೊರಟೆ. ನಮ್ಮನೆಯವರು ನನ್ನನ್ನು ಬಿಟ್ಟು “ಹಿಂದೆ ಬರುವಾಗ ಆಟೋದಲ್ಲಿ ಬಾ…”ಎಂದು ಹೇಳಿದರು.
ನನ್ನ ಗೆಳತಿಯ ಕೋಣೆಗೆ ಹೋಗಿ ಹೋಳಿಗೆ ಕೊಟ್ಟು ಹೊರಬರಲು ಹೊರಟೆ.
ನನ್ನ ಗೆಳತಿ ಕೇಳಿದಳು…” ಮೊನ್ನೆ ಕೊಟ್ಟ ಚಕ್ಕುಲಿ ನೀನೇ ಮಾಡಿದ್ದಾ…?”
“ಯಾಕೆ … ನನಗೆ ಬರಲ್ಲಾ ಅಂದ್ಕೊಂಡಿದ್ದೀಯಾ..?” ನಕ್ಕು . ವಿದಾಯ ಹೇಳುತ್ತಾ ಹೊರ ಬಂದೆ. ಅವಳಿಗೆ ಬಹುಶಃ ಸೊಸೆ ಕೈರುಚಿ ಗೊತ್ತಾಗಿರಬೇಕು….. ಹಾಗೆ ಕೇಳಲು ಒಣ ಅಭಿಮಾನ ಬಿಡಬೇಕಲ್ಲ…
ಹೊರಬರುವ ಮೊದಲು ಒಂದು ಸುತ್ತು ಹೊಡೆದು ಮೊದಲೇ ಪರಿಚಯ ಆದವರಿಗೂ… ಇತರರಿಗೂ ಕೈಯಾಡಿಸಿಯೋ, ಮಾತನಾಡಿಸಿಯೋ ಬರುವ ಅಭ್ಯಾಸ ಆಗಿತ್ತು. ಹಾಗೇ ಹೋಗ್ತಾ ಒಬ್ಬರು ಈ ಮೊದಲೇ ಪರಿಚಯ ಆದವರೊಬ್ಬರು… ಮಾತನಾಡಿಸುತ್ತಾ ನಿಂತರು.
ಅವರು ದಂಪತಿಗಳಿಬ್ಬರೂ ಇಲ್ಲಿ ಇದ್ದರು.ಅವರು “ಬಾ.. ಇಲ್ಲೇ ಕೈ ತೋಟದ ಕಲ್ಲು ಬೆಂಚಿನ ಮೇಲೆ ಕೂರೋಣ… ನೀನು ಇನ್ನೊಂದ್ಸಲ ಬರುವಾಗ ನಾವಿಲ್ಲಿ ಇರುವುದಿಲ್ಲ. ನಿನಗೆ ಸಮಯವಿದೆಯಾ… ಮಾತನಾಡಬಹುದಾ…?” ಎಂದರು. “ಅಯ್ಯೋ…ನಾನು ಎಲ್ಲಾ ಕೆಲಸ ಮುಗಿಸಿಯೇ ಬರೋದು…” ಹೇಳುತ್ತಾ ಕೂತ್ಕಂಡೆ.
ಅವರು “ನೀನು ಆಗಾಗ ಬರ್ತಾ ಇರ್ತಿಯಲ್ವಾ.. ನಿನ್ನ ಗೆಳತಿಯನ್ನು ಸಮಜಾಯಿಸಿ ಯಾಕೆ ಮನೆಗೆ ಹೋಗುವಂತೆ ಮಾಡುವುದಿಲ್ಲ.. ಅವಳ ಮಗ ಸೊಸೆ ಕೂಡಾ ಬರಲ್ಲ.. ಅದು ಅವಳಿಗೆ ಇಷ್ಟ ಇಲ್ಲ. ಆದರೆ ಅವಳಿಗೆ ಮನೆಗೆ ಹೋಗುವ ಆಸೆಯಾಗ್ತಾ ಇದೆ… ಅನಿಸುತ್ತೆ… ಮಾತನಾಡ್ತಾ…ನನಗನಿಸಿತು.” ಎಂದರು.
ನಾನು “ಅವರೇನೋ ಸಿದ್ಧರಿದ್ದಾರೆ… ಅವಳೇ ಬಾಯಿ ಬಿಟ್ಟು ಹೇಳಲಿ… ಅವರ ಹತ್ತಿರ ಹೇಳಲು ಕಷ್ಟ ಆದರೆ ನನ್ನ ಹತ್ತಿರ ಹೇಳಬಹುದಲ್ವಾ.. ಆದರೆ ಅವಳಿಗೆ ಬಿಗುಮಾನ ಬಿಡುವುದಿಲ್ಲ…. ಅವಳಾಗೇ ಹೇಳಿದರೆ ಮಾತ್ರ ಅವಳಿಗೆ ತಿಳಿವು ಬಂದಿದೆ ಅಂದ್ಕೋಬಹುದು…ಇಲ್ಲಾ ಅಂದ್ರೆ… ಪದೇಪದೇ ಹೀಗೇ ನಾಟಕ ಮುಂದುವರಿಯುವುದು ಖಂಡಿತಾ…. ಇದು ಮೊದಲನೇ ಸಲ ಅಲ್ಲಾ… ಅವರು ಸಮಾಧಾನ ಮಾಡಿ.. ತಪ್ಪಿಲ್ಲದಿದ್ದರೂ ಕ್ಷಮೆ ಕೇಳುವುದು.. ಇದು ಆಗಾಗ ನಡೆಯುತ್ತಾ ಇತ್ತು. ಅವರಿಗೆ ಅವರ ಗೆಳತಿಯರೂ, ನೆಂಟರಿಷ್ಟರೂ ಸಲಹೆ ಸಹಕಾರ ನೀಡುತ್ತಿದ್ದರು. ಈ ಸಲ ವೃದ್ಧಾಶ್ರಮದಲ್ಲಿರುವ ಕಾರಣ ಬದಲಾವಣೆ ಆಗಬಹುದೆಂಬ ಆಸೆ” ಎಂದೆ.
“ಅದು ಹೌದು…ನೀನು ಹೇಳುವುದು ಸರಿ..” ಎಂದರು. ಅವರೇ ಮಾತನ್ನು ಮುಂದುವರಿಸುತ್ತಾ… “ನೀನು ಗೆಳತಿಯನ್ನು ಭೇಟಿಯಾಗಲು ಬರ್ತಿಯಲ್ವಾ.. ಇಲ್ಲಿ ಹೀಗೆ ನೋಡಲು ತುಂಬಾ ಜನ ಬರ್ತಾರೆ… ಆದರೆ ಎಲ್ಲರ ಹತ್ತಿರ ಮಾತನಾಡೋದು ಬಿಡು, ನಗಲು ಬಾಡಿಗೆ ಕೊಡಬೇಕು ಎನ್ನುವಂತೆ ಇರ್ತಾರೆ. ಅದಕ್ಕೆ ನಾನು ಹೋಗುವ ಮೊದಲು ನಿನ್ನ ಹತ್ತಿರ ಮಾತನಾಡೋಣ ಅನಿಸಿತು. ಎಲ್ಲಿ ಅವರ ತಪ್ಪುಗಳನ್ನು ಹೇಳ್ತವೋ… ಅಥವಾ ಅವರ ವೈಯುಕ್ತಿಕ ವಿಚಾರ ಕೇಳೀವೋ ಎಂಬ ಯೋಚನೆಯೋ… ಒಟ್ಟಿನಲ್ಲಿ ಗಂಭೀರವಾಗಿ ಬರ್ತಾರೆ ಹೋಗ್ತಾರೆ. ಮನೆಯವರ ಜೊತೆಯೂ ಮಾತನಾಡಲು ಹೆದರ್ತಾರೆ… ಎಲ್ಲಿ ಮತ್ತೆ ಕರೆದುಕೊಂಡು ಹೋಗಬೇಕಾಗಬಹುದೋ… ಎಂಬ ಭಯವಿರಬಹುದು.” ಎಂದು ನಗುತ್ತಾ ಹೇಳಿದರು.
ನನಗೇನೂ ಹೇಳಲು ತೋಚಲಿಲ್ಲ. “ನನಗೆ ಸ್ವಲ್ಪ ಎಲ್ಲಾ ಕಡೆ ಮೂಗು ತೂರಿಸುವ ಸ್ವಭಾವ… ಹುಟ್ಟುಗುಣವೆನ್ನಬಹುದು..” ಎಂದು ಹೇಳಿ ನಕ್ಕುಬಿಟ್ಟೆ.. ಅವರು “ನಾನು ನನ್ನ ಕತೆಯನ್ನು ನಿನ್ನ ಹತ್ತಿರ ಹೇಳಬೇಕೆಂದು ಕೊಂಡಿದ್ದೇನೆ. ಇವರು ಹೇಗೂ ಮಲಗಿದ್ದಾರೆ. ಇನ್ನು ಎರಡು ಗಂಟೆಯಷ್ಟು ಹೊತ್ತು ಏಳಲ್ಲ. ಔಷಧಿಯ ಪ್ರಭಾವವಿರಬೇಕು. ಎದ್ದರೆ ಪಕ್ಕದಲ್ಲಿರುವ ಗಂಟೆ ಬಾರಿಸಲು ಹೇಳಿದ್ದೇನೆ ಹೋಗಬಹುದು…” ಎಂದರು.
“ಒಹ್… ಹೌದಾ.. ಏನಾಗಿದೆ ಅವರಿಗೆ… ಹುಷಾರಿಲ್ವಾ. ನಾನು ಮೊದಲನೇ ಸಲ ಬರುವಾಗ ಚೆನ್ನಾಗಿದ್ರಲ್ವಾ.. ಏನಾಯ್ತು…?” ಎಂದೆ.
“ಚೆನ್ನಾಗಿಯೇ ಇದ್ದರು.. ಮೊನ್ನೆ ಸ್ವಲ್ಪ ಬಿ.ಪಿ. ಜಾಸ್ತಿಯಾಗಿಯೋ ಏನೋ ಬೆಳಿಗ್ಗೆ ವಾಕ್ ಹೋಗುವಾಗ ಬಿದ್ದರು. ಬಿದ್ದವರಿಗೆ ಸೊಂಟಕ್ಕೆ ಪೆಟ್ಟು ಬಿದ್ದು ಇನ್ನು ಶಾಶ್ವತವಾಗಿ ಹೀಗೇ ಇರಬೇಕೋ ಏನೋ..? ಗುಣವಾದರೂ ಪೂರ್ಣವಾಗಿ ಗುಣ ಆಗುವ ಸಾಧ್ಯತೆಯಿಲ್ಲ.. ಹಾಗಾಗಿಯೇ ಮಗ, ಸೊಸೆ ಇನ್ನೆರಡು ದಿನಗಳಲ್ಲಿ ಕರೆದೊಯ್ಯುತ್ತಾರೆ.. ನಾವು ಇಲ್ಲಿಗೆ ಬಂದು ಮೂರು ವರ್ಷವಾಗ್ತಾ ಬಂತು. ನನಗೂ ಹೋಗಬೇಕು ಅನ್ನುವ ಆಸೆ.. ಇನ್ನು ಯಾವ ಸಮಸ್ಯೆಯೂ ಇಲ್ಲದೆ ನೆಮ್ಮದಿಯಿಂದ ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ದಿನ ಕಳೆಯಬಹುದು. ಅದೇ ಖುಷಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅನಿಸಿತು” ಎಂದರು.
ನನಗೆ ಆಶ್ಚರ್ಯವಾಯಿತು. ಇವರು ಅಂತಹ ಖುಷಿ ಕೊಡುವ ಮನೆಯನ್ನು ಬಿಟ್ಟು ಬಂದದಾದರೂ ಯಾಕೆ..? ಈಗ ಗಂಡ ಸೊಂಟ ಮುರಿದ ನೋವಿಗಿಂತಲೂ ಎಲ್ಲರೊಂದಿಗೆ ಇರುವ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.. ಕೇಳಲು ಮುಜುಗರ.. ಅವರೇನೂ ನನಗೆ ತುಂಬಾ ಪರಿಚಿತರಲ್ಲ… ಆತ್ಮೀಯತೆಯೂ ಇಲ್ಲ.. ಇಷ್ಟು ಮಾತನಾಡಿದ್ದು ಇವತ್ತೇ..ಎಂದು ನನ್ನದಲ್ಲದ ಮೌನವನ್ನು ನನ್ನದಾಗಿಸಿಕೊಂಡೆ.
ಅವರು ಬಹುಶಃ ನನ್ನ ಅಚ್ಚರಿ ತುಂಬಿದ ಮುಖವನ್ನು ನೋಡಿ “ನಿನಗೆ ಆಶ್ಚರ್ಯವಾಗುತ್ತಿರಬಹುದು..ಅಲ್ವಾ..” ಎಂದರು. ನನಗೆ ನಮ್ಮನೆಯವರು ಯಾವಾಗೂ ಹೇಳ್ತಾ ಇರ್ತಾರೆ… “ಮಾತಿಗೆ ಮೊದಲು ಭಾವನೆಗಳನ್ನು ಮುಖದ ಮೇಲೆ ತಂದ್ಯೋತಿಯಾ.. ಎದುರಿದ್ದವರಿಗೆ ಹೇಗನಿಸಬಹುದು..ಎಂಬ ಯೋಚನೆಯೇ ಇರುವುದಿಲ್ಲ.. ನಿನಗೆ. ಸ್ವಲ್ಪ ನಿನ್ನ ಭಾವನೆಗಳನ್ನು ಮುಖದ ಮೇಲೆ ತೋರಿಸುವ ಬದಲು ಗಂಭೀರವಾಗಿರಲು ಪ್ರಯತ್ನಿಸಬಾರದಾ..?” ಎನ್ನುತ್ತಿದ್ದರು. ಆದರೆ “ಹುಟ್ಟುಗುಣ ಘಟ್ಟ ಹತ್ತಿದರೂ ಬಿಡುವುದಿಲ್ಲ..” ಅಂತಾರಲ್ಲಾ… ಹಾಗೆಯೇ ನಾನು “ಘಟ್ಟ ಹತ್ತಿ ಮತ್ತೆ ಇಳಿದು ಬಂದರೂ… ಬಿಡಲು ಆಗಲಿಲ್ಲವೆನ್ನುವುದು.. ನನ್ನ ವಿಷಯದಲ್ಲಿ ಸೂಕ್ತವೆನಿಸುತ್ತದೆ. ನಾನು ಅವರ ಮುಖವನ್ನೇ ನೋಡುತ್ತಾ… ಕುಳಿತೆ.
ಅವರೇ ಹೇಳಲು ಪ್ರಾರಂಭಿಸಿದರು… “ನಮ್ಮಜ್ಜಿಯ ವಂಶೋದ್ಧಾರಕನ ಆಸೆಗೆ ನಾವು ಆರು ಜನ ಹೆಣ್ಣುಮಕ್ಕಳು ಹುಟ್ಟಿದ ಮೇಲೆ ಕುಮಾರ ಕಂಠೀರವ ಹುಟ್ಟಿದನೇನೋ ಹೌದು. ಅವರ ಆಸೆಯೇನೋ ತೀರಿತು. ಆದರೆ ನಮ್ಮಪ್ಪನ ಪೌರೋಹಿತ್ಯದ ವೃತ್ತಿಯಿಂದ ಒಂಬತ್ತು ಜನರ ಸಂಸಾರದ ಜೊತೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಮದುವೆ ಚಿಂತೆಯೂ ಆರಂಭವಾಗಿತ್ತು. ನಾನು ಹತ್ತನೇ ತರಗತಿ ಓದುವಾಗಲೇ ನನ್ನ ರೂಪವನ್ನು ಕಂಡು ಪಕ್ಕದ ಊರಿನವರೇ ಆದ ನಮ್ಮವರು ಎಲ್ಲಾ ಖರ್ಚನ್ನು ವಹಿಸಿ ಮದುವೆ ಮಾಡಿಕೊಳ್ಳಲು ಮುಂದೆ ಬಂದರು. ನನಗೋ ಮದುವೆಗಿಂತಲೂ ಓದಿ ಕೆಲಸಕ್ಕೆ ಸೇರಬೇಕು, ಅಪ್ಪನ ಹೆಗಲಿಗೆ ಹೆಗಲು ಕೊಡಬೇಕು, ತಮ್ಮನನ್ನು ಓದಿಸಬೇಕು ಎನ್ನುವ ಆಸೆ. ಆದರೆ ಇಲ್ಲಿಯೂ ನಮ್ಮಜ್ಜಿಯ ಆಸೆ ಹಠವೇ ಗೆದ್ದಿತು. ನನ್ನ ತಮ್ಮನಿಗೆ ಓದುವಷ್ಟು ಓದಿಸುತ್ತೇನೆ ಎನ್ನುವುದೇ ನಮ್ಮಮ್ಮನಿಗೆ ಖುಷಿ ಕೊಟ್ಟಿತ್ತು. ನಮ್ಮವರು ತುಂಬಾ ಒಳ್ಳೆಯವರು, ಶ್ರೀಮಂತರು.. ನಾಲ್ಕು ಜನ ಅಣ್ಣತಮ್ಮಂದಿರು ಇರುವ ತುಂಬು ಸಂಸಾರ. ಇವರೇ ಕೊನೆಯ ಮಗ, ದೊಡ್ಡ ಬಟ್ಟೆ ಅಂಗಡಿ. ಜೊತೆಯಲ್ಲಿಯೇ ದಿನಸಿ ಅಂಗಡಿ. ಮತ್ತೇನು ಕಮ್ಮಿ.
ಎಲ್ಲವೂ ಚಂದ ಆದರೆ ಅತಿಕಾಮಿ… ಹೆಣ್ಣು ಮಕ್ಕಳ ಖಯಾಲಿ… ತುಂಬಾ ಮುಂದೆ ಹೋಗಲು ನಾನು ಬಿಡುತ್ತಿರಲಿಲ್ಲ ಅಥವಾ ಅಣ್ಣಂದಿರು ಏನಾದರೂ ಮಾಡುತ್ತಿದ್ದರು. ಅಂತೂ ಸಿರಿವಂತರ ಮನೆಯ ಮರ್ಯಾದೆ ನೋಟುಗಳ ಅಡಿಯಲ್ಲಿ ಜೋಪಾನವಾಗಿತ್ತು.. ಮದುವೆಯಾಗಿ ಆರು ತಿಂಗಳಲ್ಲೇ ನನ್ನನ್ನು ಮದುವೆಯ ಎಲ್ಲಾ ಖರ್ಚು ನಿಭಾಯಿಸಿ ಅಪ್ಪನ ಮನೆಗೂ ಅನುಕೂಲತೆಗಳನ್ನು ಒದಗಿಸಿಕೊಟ್ಟ ಕಾರಣಗಳು. ನನ್ನ ಓರಗಿತ್ತಿಯವರೆಲ್ಲರ ತವರಿನವರು ಅನುಕೂಲಸ್ಥರೇ.. ನಾನೊಬ್ಬಳೇ ಬಡವರ ಮನೆಯಿಂದ ಬಂದ ಸೊಸೆ… ಹಗಲೆಲ್ಲಾ ಚೆನ್ನಾಗಿರುವ ನನ್ನ ಗಂಡ ರಾತ್ರಿಯಾಗುವಾಗ ಬದಲಾಗುತ್ತಿದ್ದರು. ಇದೇ ಸಮಸ್ಯೆಯಾಗಿತ್ತು. ನಾನು ಯಾವತ್ತೂ ಅವರ ಜೊತೆಯಲ್ಲಿಯೇ ಇರುತ್ತಿದ್ದೆ. ಬೇರೆ ಹೆಣ್ಣು ಮಕ್ಕಳತ್ತ ಜನ ಕಣ್ಣೆತ್ತಿಯೂ ನೋಡದಂತೆ ಎಚ್ಚರಿಕೆ ವಹಿಸುತ್ತಿದ್ದೆ.
ಮದುವೆಯಾದ ಮೇಲೆ ಒಬ್ಬಳೇ ತವರಿಗೂ ಹೋಗಲಿಲ್ಲ.. ಬೆಳಿಗ್ಗೆ ಹೋದರೆ ಸಂಜೆ ಹಿಂದೆ ಬರುತ್ತಿದ್ದೆವು. ನಮಗೋ ಒಬ್ಬನೇ ಮಗ, ಅವನಿಷ್ಟಪಟ್ಟಂತೆ ಕಲಿತು ನಗರದಲ್ಲಿ ಒಳ್ಳೆಯ ಕೆಲಸವೂ ಸಿಕ್ಕಿತು. ಮದುವೆಯೂ ಆಯಿತು. ಅವನಿಗೆ ಮದುವೆಯಾಗಿ ಆರು ವರ್ಷಗಳಾಗುವಾಗ ನಮ್ಮ ಮನೆ ಅಂಗಡಿ ಎಲ್ಲವೂ ಪಾಲಾಗಿ ಬಟ್ಟೆ ಅಂಗಡಿ ನಮ್ಮ ಪಾಲಿಗೆ ಬಂದಿತ್ತು.
ನಮ್ಮನೆಯವರಿಗೆ ಅಂಗಡಿಯ ಹೆಣ್ಣುಮಕ್ಕಳ ಮೇಲೂ ಕಣ್ಣು ಹಾಕುತ್ತಿದ್ದರು. ಹಾಗಾಗಿ ನಾನು ಸಾಮಾನ್ಯವಾಗಿ ಬೆಳಿಗ್ಗೆ ಮನೆಯ ಕೆಲಸ ಅಷ್ಟನ್ನೂ ಮುಗಿಸಿ ಅಂಗಡಿಯಲ್ಲೇ ಇರುತ್ತಿದ್ದೆ. ನನಗೂ ಐವತ್ತು ವರ್ಷ ಆಗುವಾಗ ಹೆಚ್ಚಿನ ಎಲ್ಲಾ ಹೆಂಗಸರಿಗೂ ಬರುವ ಸಮಸ್ಯೆಗಳಂತೆ ಹೊಟ್ಟೆನೋವು, ಸುಸ್ತು, ಸಂಕಟ, ಸೊಂಟನೋವು ಎಲ್ಲಾ ಬರಲು ಆರಂಭವಾಯಿತು. ಕೊನೆಯ ಹಂತ ಎಂಬಂತೆ ಗರ್ಭಕೋಶವನ್ನೂ ತೆಗೆಯಬೇಕಾಯಿತು. ಸಾಧ್ಯವಾದಷ್ಟೂ ನನ್ನ ಗಂಡ ಬೇರೆ ಹೆಣ್ಣಿನ ಕಡೆ ನೋಡದಂತೆ ಸದಾ ಎಚ್ಚರಿಕೆಯಿಂದ ಇದ್ದ ನನಗೆ ಈಗ ನನ್ನ ಸಮಸ್ಯೆಯೇ ಹೆಚ್ಚಾಯಿತು. ಅನಾರೋಗ್ಯದ ನಿಮಿತ್ತ ಮಗನ ಮನೆಗೆ ಬಂದು ನಿಲ್ಲಬೇಕಾಯಿತು. ಅಂಗಡಿಯನ್ನೂ ಅಣ್ಣನ ಮಗನಿಗೆ ವಹಿಸಿಕೊಟ್ಟು ಮಗನ ಜೊತೆಗಿರಲು ಬಂದೆವು. ಅಣ್ಣನ ಮಗನಾದರೂ ಪ್ರತೀ ತಿಂಗಳು ಪಾಲುದಾರಿಕೆಯದೆಂದು ಸಾಕಷ್ಟು ಹಣ ಕಳಿಸುತ್ತಿದ್ದ…
ಆರಂಭವಾದ ಸಮಸ್ಯೆ ಅಂದರೆ ಇಷ್ಟು ವರ್ಷ ಸುಖ ನೀಡಿದ ಹೆಂಡತಿ ಹೆಣ್ಣೆ ಅಲ್ಲವೆನಿಸುತ್ತಿತ್ತಂತೆ ನನ್ನ ಕೈ ಹಿಡಿದ ಗಂಡನಿಗೆ. ನನ್ನ ಮಗನ ಜೊತೆಯಲ್ಲಿರಲು ಬಂದು ಎಂಟು ತಿಂಗಳಾಗಿತ್ತು. ಅಷ್ಟರಲ್ಲಿ ಮಗನಿಗೆ ಆರು ತಿಂಗಳ ತರಬೇತಿಗೆಂದು ವಿದೇಶಕ್ಕೆ ಹೋಗಬೇಕಾಯಿತು. ಅವನು ಅತ್ತ ಹೋದ ಮೇಲೆ ಮಕ್ಕಳನ್ನು ಶಾಲೆಗೆ ಬಿಡುವ, ತರಕಾರಿ, ಮನೆಗೆ ಬೇಕಾದ ವಸ್ತುಗಳನ್ನು ತರುವ ಜವಾಬ್ದಾರಿ ನಮ್ಮನೆಯವರು ತೆಗೆದುಕೊಂಡರು. ಸೊಸೆಗೂ ಮಾವನ ಮೇಲೆ ತುಂಬಾ ಅಭಿಮಾನ ಗೌರವವಿತ್ತು. ಕೆಲವೊಮ್ಮೆ ಮೂರೂ ಜನ ಒಟ್ಟಿಗೆ ಕಾರಲ್ಲಿ ಹೋಗಿ ಬರುತ್ತಿದ್ದೆವು. ಆಗಾಗ ನಾನು ಬರದಂತೆ ನಮ್ಮವರೇ ಏನಾದರೂ ನೆಪ ಹೂಡುತ್ತಿದ್ದರು. ಒಬ್ಬರೇ ಸೊಸೆಯನ್ನು ಕರೆದೊಯ್ಯುವರು. ಸೊಸೆಗೆ ಬಟ್ಟೆ, ಅವಳಿಗಿಷ್ಟದ ತರಕಾರಿ, ಸಿಹಿ ಎಲ್ಲವನ್ನೂ ತಂದುಕೊಡುವುದು.. ಎಲ್ಲವನ್ನೂ ನೋಡುವಾಗ ನನಗೇನೋ ವಾಸನೆ ಬಂತು. ಮೂವತ್ತೈದು ವರ್ಷದ ಅನುಭವ ಇತ್ತಲ್ಲವೇ..? ಹಾಗೆಂದು ಸೊಸೆಗೆ ಮಾವನ ಬಗ್ಗೆ ಹೇಳಲಾಗುವುದೇ..? ಆಕಾಶಕ್ಕೆ ಉಗಿದರೆ ನಮ್ಮ ಮೇಲೆಯೇ ಬೀಳುವುದಲ್ಲವೇ..? ಅಂಗಡಿಯ ಹುಡುಗಿಯರನ್ನಾದರೆ ಕೆಲಸದಿಂದ ಕಳಿಸಬಹುದಿತ್ತು.. ಬೇರೆ ಏನಾದರೂ ವ್ಯವಸ್ಥೆ ಮಾಡಬಹುದಿತ್ತು. ಈಗ ಏನು ಮಾಡಲಿ.. ತಲೆ ಕೆಟ್ಟು ಹೋಗುವಂತಾಯಿತು.
ನಮ್ಮ ಮಾವ ಸತ್ತಾಗ ಅವರ ಹೆಸರಲ್ಲಿ ನೆನಪಿಗಾಗಿ ಈ ಆಶ್ರಮದಲ್ಲಿ ಒಂದು ಕೋಣೆಯನ್ನು ಕಟ್ಟುವಷ್ಟು ಧನಸಹಾಯ ಮಾಡಿದ್ದರು. ಅಲ್ಲಿ ವರ್ಷಕ್ಕೊಮ್ಮೆ ನಡೆಯುವ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಬರುತಿತ್ತು.
ಇದೇ ಸಮಯಕ್ಕೆ ಆ ಆಹ್ವಾನ ಪತ್ರಿಕೆ ದೇವರು ದಾರಿ ತೋರಿಸಲು ಕಳಿಸಿದಂತಾಯಿತು. ಮಗನಿಗೆ ರಾತ್ರಿಯೇ ಪೋನ್, ಮಾಡಿ ನನ್ನಾಸೆಯನ್ನು ಹೇಳಿದೆ. ತಾನು ಬಂದ ಮೇಲೆ ಹೋಗಬಾರದೇ.. ಹೋಗಲೇ ಬೇಕೇ.. ಸೊಸೆ ಏನಾದರೂ ತೊಂದರೆ ಕೊಡ್ತಾಳೆಯೇ.. ಮೊಮ್ಮಕ್ಕಳು ತೊಂದ್ರೆ ಕೊಡ್ತಾರಾ.. ಹೀಗೆ ಹೋಗಲು ತೀರ್ಮಾನಿಸಿದ ಹಲವಾರು ಕಾರಣಗಳನ್ನು ಕೇಳಿದ.. ಯಾವುದೂ ಅಲ್ಲ… ನನಗೆ ಆಸೆಯಾಗಿದೆ. ನಮ್ಮದೇ ವಯಸ್ಸಿನವರ ಜೊತೆ ಹೊತ್ತು ಕಳೆಯುವ ಮನಸ್ಸಾಗಿದೆ. ಎಂದು ಹೇಳಿ.. ನನ್ನ ಸೊಸೆಗೂ ಸಮಾಧಾನ ಹೇಳಿ ಬಂದೆವು.
ನಮ್ಮನೆಯವರನ್ನು ಒಪ್ಪಿಸುವುದು ಮಾತ್ರ ಬಹಳ ಕಷ್ಟವಾಯಿತು. ಅಲ್ಲಿ ಯಾರೂ ಇಲ್ಲದವರು ಅಥವಾ ಮನೆಯ ಪರಿಸರ ಸರಿಯಾಗಿಲ್ಲದಿದ್ದರೆ…ಮಾತ್ರ ಹೋಗುವುದು. ಎಲ್ಲವೂ ಚೆನ್ನಾಗಿರುವ.. ಸಮಸ್ಯೆಗಳೇ ಇಲ್ಲದ ನಾವ್ಯಾಕೆ ಹೋಗಬೇಕು… ಎನ್ನುವುದು ಅವರ ಪ್ರಶ್ನೆ.
ಹೇಳಲಾಗುವುದೇ…? ಎಲ್ಲವೂ ಸರಿಯಾಗಿರುವುದೇ ನನ್ನ ಸಮಸ್ಯೆ.. ಎಂದು ಮಾವನವರ ಹೆಸರಲ್ಲಿ ಅಷ್ಟು ದಾನ ಕೊಟ್ಟಿದ್ದೀರಿ… ಅದು ಸಮರ್ಪಕವಾಗಿ ಉಪಯೋಗವಾಗುತ್ತಿದೆಯೋ ಎಂದು ನೋಡುವುದು ನಮ್ಮ ಕರ್ತವ್ಯ ಅಲ್ಲವೇ..? ಇದುವರೆಗೂ ವ್ಯಾಪಾರದಲ್ಲಿ ತೊಡಗಿದ್ದ ನಮಗೆ ಇದರ ಕಡೆ ಗಮನ ಕೊಡಲು ಸಮಯವಿರಲಿಲ್ಲವಲ್ಲ..ಎಂದು ನಯವಾಗಿ…ಒಪ್ಪಿಸಿದೆ.
ಇಷ್ಟು ವರ್ಷದ ಅವರ ಜೊತೆಗಿನ ಅನುಭವದಲ್ಲಿ ಅವರನ್ನು ಯಾವ ವಿಷಯಕ್ಕೆ ಹೇಗೆ ಬಗ್ಗಿಸಬಹುದೆಂದು ನನಗೆ ಗೊತ್ತಾಗಿತ್ತು. ಎಂದೂ ಹೇಳಿದರು. ಗೊತ್ತಾಗುವುದೇನು… ಡಾಕ್ಟರೇಟ್ ಪಡೆಯಬಹುದಿತ್ತು..”
ನಾನು “ನೀವು ನನ್ನ ಹತ್ತಿರ ಇದನ್ನೆಲ್ಲಾ ಹೇಳಿದಿರಲ್ಲಾ… ನಾನು ಯಾರ ಹತ್ತಿರವಾದರೂ ಹೇಳಿದರೆ ನಿಮಗೆ ಅವಮಾನವಾಗುವುದಿಲ್ಲವೇ..?” ಎಂದರೆ.. ಅವರು “ನಾನು ಇದುವರೆಗೂ ಯಾರ ಹತ್ತಿರವೂ ಹೇಳಲಿಲ್ಲ. ಹಾಗಾಗಿ ಯಾರಿಗೂ ನಾವೆಂದು ತಿಳಿಯುವದೂ ಇಲ್ಲ. ಅಷ್ಟೇ ಅಲ್ಲ ಸದಾ ಜೊತೆಯಲ್ಲೇ ಇರುವ ಕಾರಣ ಜೋಡಿಹಕ್ಕಿಗಳೆಂದೇ ಹೆಸರು ಪಡೆದಿದ್ದೇವೆ.. ನೀನು ನಿನ್ನ ಬರೆಯುವ ಹವ್ಯಾಸಕ್ಕೆ ಕಥೆಗೆ ನಮ್ಮ ಹೆಸರು ಬಳಸಿಕೊಂಡಿದ್ದಿ ಎಂದು ಅಂದುಕೊಳ್ಳುತ್ತಾರೆ. ನನಗೆ ನನ್ನ ನೋವುಗಳನ್ನು ಯಾರ ಹತ್ತಿರವಾದರೂ ಹೇಳಿಕೊಳ್ಳಲೇಬೇಕು ಅನಿಸಿತ್ತು.. ಅಪರಿಚಿತಳಾದ ನೀನೇ ಸರಿ ಎಂದೂ ಅನಿಸಿತು..” ಎಂದು ನಕ್ಕರು.
ನಾನು ಬೇಕೋಬೇಡವೋ ಎಂಬಂತೆ.. “ತಪ್ಪು ತಿಳಿಯಬೇಡಿ…. ನಾನ್ಯಾರೋ.. ನೀವ್ಯಾರೋ.. ಹಾಗಾಗಿ ನನಗೂ ನಿಷ್ಟೂರ ಆಗುವ ಭಯವಿಲ್ಲ. ನಿಮ್ಮವರು ಯಾವುದಾದರೂ ಬಾಲ್ಯದ ಘಟನೆಯಿಂದ ಹೆಣ್ಣುಮಕ್ಕಳು, ಹೆಂಗಸರ ಜೊತೆ ಹಾಗೆ ವರ್ತಿಸುತ್ತಿದ್ದರೋ ಏನೋ..?” ಅಂದೆ.
“ಹಾಗೇನೂ ಇಲ್ಲ… ತಲೆಮಾರಿನ ಬಳುವಳಿಯಂತೆ… ಅವರ ಮುತ್ತಾತ ಹೀಗೆ ಇದ್ದರಂತೆ… ಕೆಲಸದಾಳುಗಳಾಗಲೀ… ಇನ್ಯಾರೇ ಆಗಲೀ.. ನಾಚಿಕೆಯೇ ಇರಲಿಲ್ಲವಂತೆ. ಅವರ ಪಾಲಿನ ಆಸ್ತಿಯಲ್ಲಿ ಹೆಚ್ಚಿನ ಭಾಗ ಹೆಂಗಸರಿಗಾಗಿಯೇ ವ್ಯಯ ಮಾಡುವ ಮಹಾನುಭಾವರಾಗಿದ್ದರಂತೆ. ಅದೇ ರಕ್ತಗತವಾಗಿ ಬಂದಿದೆ. ಬಲಿಪಶು ನಾನು.. ನನ್ನ ಜೀವನವೂ ಏನು… ಕಾಡು ಬಾ ಅಂತಿದೆ.. ನಾಡು ಹೋಗು ಅಂತಿದೆ.” ಎಂದರು.
ಇನ್ನೂ ಏನೆಲ್ಲಾ ಪ್ರಶ್ನೆಗಳು ಹುಟ್ಟುತ್ತಿದ್ದವೋ ನನ್ನಲ್ಲಿ… ಗೊತ್ತಿಲ್ಲ.. ಅಷ್ಟರಲ್ಲಿ ಒಬ್ಬ ವಯಸ್ಸಾದ ಮಹನೀಯರು ಹತ್ತಿರ ಬಂದರು. ಅಮ್ಮಾ ಗುರ್ತು ಸಿಕ್ತಾ…?” ಎಂದರು.
ನಾನು ಅವರತ್ತ ನೋಡಿ ನಮಸ್ಕಾರ ಮಾಡುವಾಗ ನನ್ನ ಜೊತೆ ಮಾತನಾಡುತ್ತಿದ್ದವರು ಅವರ ಹತ್ತಿರ “ಭಟ್ರೇ ನಾನು ಒಂದು ಚೂರು ಮಾತನಾಡಿ ಕೋಣೆಗೆ ಹೋಗುತ್ತೇನೆ… ಈಗ ನಿಮ್ಮ ಸಾವುಕಾರು ಏಳ್ತಾರೆ.. ಆಯ್ತಾ..” ಎಂದರು.
ಅವರು ಸ್ವಲ್ಪ ದೂರ ಹೋಗಿ ತಮ್ಮ ಗಿಡಗಳ ಬುಡ ಸ್ವಚ್ಛ ಮಾಡುವ ಕಾಯಕದಲ್ಲಿ ತೊಡಗಿದರು. ಇವರು ಮತ್ತೆ ನನ್ನತ್ತ ತಿರುಗಿ “ನನ್ನ ಕಥೆಯನ್ನು ಸಹನೆಯಿಂದ ಕೇಳಿಸಿಕೊಂಡ ನಿನಗೆ ಥ್ಯಾಂಕ್ಸ್..” ಎಂದರು.
ನಾನು “ನೀವು ಥ್ಯಾಂಕ್ಸ್ ಹೇಳುವ ಬದಲಿಗೆ ನನಗೊಂದಿಷ್ಟು ಧನಸಹಾಯ ಮಾಡಿ…ನಮ್ಮ ಗುರುಕುಲದ ಒಂದು ವಿದ್ಯಾರ್ಥಿಯನ್ನು ದತ್ತು ತೆಗೆದುಕೊಳ್ಳಿ.. ಅದು ನನ್ನ ಸಹನೆಗೆ ನೀವು ಕೊಡಬೇಕಾದ ಸಂಭಾವನೆ. ಅಷ್ಟೇ ಅಲ್ಲ ನಿಮ್ಮ ನನ್ನ ಭೇಟಿ ಇದೆ ಕೊನೆಯದ್ದು..ನೀವು ನನ್ನ ಹತ್ತಿರ ಹೇಳಿದ ಕಥೆ.. ಕಥೆಯಾಗಿಯೇ ಇತರರ ಕಿವಿಗೆ ಬೀಳಬಹುದೇ ಹೊರತು.. ನಿಮ್ಮ ಹೆಸರು, ಊರು ಹೊರಬರಲಾರದು.. ನಾನೂ ನೀವೂ ಈ ಮೊದಲಿನಂತೆ ಅಪರಿಚಿತರಂತೆ ಇರೋಣ.. ನಿಮ್ಮ ವಿಳಾಸವನ್ನು ಮಾತ್ರ ಸಂಬಂಧ ಪಟ್ಟವರಿಗೆ ಕೊಡುತ್ತೇನೆ..” ಎಂದು ಹೇಳಿ ಬಗ್ಗಿ ಅವರ ಕಾಲಿಗೆ ನಮಸ್ಕರಿಸಿದೆ..
ನಮಸ್ಕರಿಸಿ ಏಳುವಾಗ ಅವರ ಕಣ್ಣುಗಳಲ್ಲಿ ಎಂದಿನಿಂದಲೋ ಮಡುಗಟ್ಟಿದ ಕಣ್ಣೀರು ಜಿನುಗಿದಂತೆ ಕಾಣಿಸಿತು. ಆದರೆ ಮುಖದಲ್ಲಿ ಒಂದು ಸಮಾಧಾನದ ಭಾವವೂ ಕಾಣಿಸಿತು. ನನ್ನ ಬೇಡಿಕೆಗೆ “ಅಸ್ತು” ಎಂದೂ ಹೇಳಿದರು.
ಅವರು ಅತ್ತ ಹೋದ ಮೇಲೆ ನಡುವೆ ಬಂದ ಮಹನೀಯರು.. ಮತ್ತೆ ಕೇಳಿದರು.. “ಅಮ್ಮಾ…. ನನ್ನ ಗುರ್ತು ಸಿಕ್ಕಿತಾ…?” ಅವರು ಯಾರೆಂದು ಯೋಚಿಸುತ್ತಿದ್ದೆ.. ನನ್ನ ಮನಸ್ಸಿನ ಫೋಟೋ ಆಲ್ಬಮ್ನಲ್ಲಿ ಬೇರೆಬೇರೆ ಫೋಲ್ಡರ್ಗಳಿದ್ದವು.. ಪ್ರಕೃತಿಯ ದೃಶ್ಯಗಳು, ಪ್ರಾಣಿ ಪಕ್ಷಿ, ಹೂಗಳು ಮತ್ತು ಮನುಷ್ಯರು…ಅದರಲ್ಲಿ ಎಲ್ಲವೂ ಸಾಮಾನ್ಯವಾಗಿ ಸ್ಪಷ್ಟವಾಗಿದ್ದರೂ… ಮನುಷ್ಯರ ಚಿತ್ರಗಳು… ಮಾತ್ರ ಮಸುಕಾಗಿರುವುದೇ ಹೆಚ್ಚು… ಗುರುತಿಸಲು ಬಹಳ ಒದ್ದಾಡುತ್ತಿದ್ದೆ..
ಯಾರೆಂದು ಪುಟಗಳನ್ನು ಮಗುಚುತ್ತಾ ಇರುವಾಗ “ನನ್ನ ಪರಿಚಯ ಸಿಕ್ಕಿತೇ..?” ಎಂದು ಪುನಃ ಕೇಳಿದರು..
“ಹಾಂ.. ಎಲ್ಲೋ ನೋಡಿದ ಹಾಗೆ ಆಗುತ್ತಿದೆ. ಆದರೆ ಸರಿಯಾಗಿ ನೆನಪಿಗೆ ಬರ್ತಿಲ್ಲ… ಎಂದೆ ಮುಜುಗರದಿಂದ..
“ನಿಮ್ಮನ್ನು ಬಿಡಲು ಬಂದವರು ನಿಮ್ಮ ಯಜಮಾನರಲ್ಲವೇ…? ಅವರಿಂದಾಗಿ ನನಗೆ ನಿಮ್ಮ ಗುರುತು ಸಿಕ್ಕಿತು… ನೀವು ಕೆಲವಾರು ಬಾರಿ ಬಂದರೂ ನೋಡಿದರೂ ಗೊತ್ತಾಗಿರಲಿಲ್ಲ. ನಿಮ್ಮನ್ನು ಕರೆದೊಯ್ಯಲು ಬರುತ್ತಾರೆಯೇ..” ಎಂದರು.
“ಇಲ್ಲ..ಅವರಿಗೆ ಸಮಯವಿಲ್ವಂತೆ. ನಾನು ಆಟೋದಲ್ಲಿ ಹೋಗುವೆನು.” ಎಂದೆನು.
“ಹಾಗಾದರೆ ನನ್ನನ್ನೊಮ್ಮೆ ಭೇಟಿಯಾಗಲು ಹೇಳುವಿರಾ..? ಹೆಡಿಗೆ ಭಟ್ಟರು ಹೇಳಿದ್ದಾರೆ…ಅಂತ ಹೇಳಿ..ಅವರಿಗೆ ಗೊತ್ತಾಗುತ್ತಾ…ನೋಡಿ..” ಎಂದು ನಕ್ಕರು.
“ಈಗ ಗೊತ್ತಾಯ್ತು… ಬಿಡಿ.. ಖಂಡಿತಾ ಹೇಳುತ್ತೇನೆ. ನಾನು ಕರೆ ಮಾಡಿದ ಆಟೋ ಬಂತು.. ಬರ್ತೆನೆ..” ಎಂದು ಹೇಳಿ ಹೊರಟೆ..
ವೀಣಾ ಶಾನುಭೋಗ್
Preservation by Sumanth Shanbhogue for Shanbhogue Publications
Leave a comment